ಹುಚ್ಚವ್ವನಹಳ್ಳಿಯಲ್ಲಿ ಹಳ್ಳಹಿಡಿದ ಜಲಜೀವನ್ ಮಿಷನ್ Jaljeevan Mission

1. ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆ ಯಲ್ಲಿರುವ ನೀರಿನ ಟ್ಯಾಂಕ್. 2. ಜಲಜೀವನ್ ಪೈಪ್‌ಲೈನ್ ಅಳ ವಡಿಸಲು ತಂದಿರುವ ಎಚ್‌ಡಿಪಿಇ ಪೈಪ್‌ಗಳು ಹಾಗೆ ಬಿದ್ದಿರುವುದು.Jaljeevan Mission
1. ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆ ಯಲ್ಲಿರುವ ನೀರಿನ ಟ್ಯಾಂಕ್. 2. ಜಲಜೀವನ್ ಪೈಪ್‌ಲೈನ್ ಅಳ ವಡಿಸಲು ತಂದಿರುವ ಎಚ್‌ಡಿಪಿಇ ಪೈಪ್‌ಗಳು ಹಾಗೆ ಬಿದ್ದಿರುವುದು.Jaljeevan Mission
Published on

ಪ್ರಮುಖ ಮುಖ್ಯಾಂಶಗಳು

  • 6 ವರ್ಷವಾದರೂ ಮುಗಿಯದ ಕಾಮಗಾರಿ
  • ಶಿಥಿಲಾವಸ್ಥೆಯಲ್ಲಿ ನೀರಿನ ಟ್ಯಾಂಕ್
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಲ್ಲಿಗಳ ಮೂಲಕ ಸಮರ್ಪಕ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಜಲಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಯೋಜನೆ, ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಸಂಪೂರ್ಣ ವಿಫಲಗೊಂಡಿದೆ. Jaljeevan Mission
ಕಾಮಗಾರಿ ಆರಂಭವಾಗಿ 6 ವರ್ಷಗಳೇ ಕಳೆದರೂ ಯೋಜನೆ ಅರೆಬರೆಯಾಗಿಯೇ ಉಳಿದಿದ್ದು, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ತಾಲೂಕಿನ ದೊಡ್ಡ ಗ್ರಾಮ ಹಾಗೂ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಹುಚ್ಚವ್ವನಹಳ್ಳಿಯಲ್ಲಿ 850ಕ್ಕೂ ಹೆಚ್ಚು ಮನೆಗಳಿವೆ. 6 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಟೆಂಡರ್ ಪಡೆದ ಗುತ್ತಿಗೆದಾರರು ಗ್ರಾಮದೊಳಗೆ ಪೈಪ್‌ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಕೆಲವು ಕಡೆ ಪೈಪ್ ಹಾಕಿದ್ದರೂ ನಲ್ಲಿಗಳನ್ನು ಅಳವಡಿಸಿಲ್ಲ. ಇನ್ನೂ ಕೆಲವು ಓಣಿಗಳಲ್ಲಿ ಎಚ್‌ಡಿಪಿಇ ಪೈಪ್‌ಗಳನ್ನು ಬಳಸದೆ ಹಾಗೆಯೇ ರಾಶಿ ಹಾಕಿರುವುದು ಗುತ್ತಿಗೆದಾರರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಗ್ರಾಮದಲ್ಲಿ ಎರಡು ಓವರ್ ಹೆಡ್ ನೀರಿನ ಟ್ಯಾಂಕ್‌ಗಳಿದ್ದು, ಈ ಪೈಕಿ 50 ವರ್ಷಗಳ ಹಿಂದೆ ನಿರ್ಮಿಸಲಾದ 1 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಟ್ಯಾಂಕ್‌ನ ತಳಭಾಗದ ಸಿಮೆಂಟ್ ಕಳಚಿ ಬೀಳುತ್ತಿದ್ದು, ನೀರು ತುಂಬಿಸಿದ ಕ್ಷಣಾರ್ಧದಲ್ಲೇ ಮುಕ್ಕಾಲು ಭಾಗದಷ್ಟು ನೀರು ಸೋರಿಕೆಯಾಗಿ ಚರಂಡಿ ಪಾಲಾಗುತ್ತಿದೆ. ಇದರಿಂದಾಗಿ ದೊಡ್ಡ ಹಳ್ಳಿಯಾಗಿದ್ದರೂ ಜನರಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ.

ಇಒ, ಸಿಇಒ ಭೇಟಿ ನೀಡಿದರೂ ಬಾರದ ಭಾಗ್ಯ!

ತಾಪಂ ಇಒ ರಾಮಬೋವಿ ಹಾಗೂ ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಅವರು ಹುಚ್ಚವ್ವನಹಳ್ಳಿ ಗ್ರಾಮಕ್ಕೆ ಎರಡು ಬಾರಿ ಖುದ್ದಾಗಿ ಭೇಟಿ ನೀಡಿ ಸೋರುತ್ತಿರುವ ಟ್ಯಾಂಕನ್ನು ವೀಕ್ಷಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಭೇಟಿ ಹೋದ ಪುಟ್ಟ ಬಂದ ಪುಟ್ಟ ಎಂಬಂತಾಗಿದೆ. ಇನ್ನು ಕ್ಷೇತ್ರದ ಶಾಸಕರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆಯೇ ಹೊರತು ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಶಿಥಿಲ ಟ್ಯಾಂಕನ್ನು ನೆಲಸಮಗೊಳಿಸಿ, ಅದೇ ಜಾಗದಲ್ಲಿ ಹೊಸ ಟ್ಯಾಂಕ್ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.
"

ದಾವಣಗೆರೆ ಜಿಲ್ಲೆಯ ಯಾವ ಯಾವ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೆಲಸಗಳು ಪೂರ್ಣಗೊಳ್ಳದೆ ಬಾಕಿ ಉಳಿದಿವೆಯೋ, ಆಯಾ ತಾಲೂಕಿನ ಇಒ ಹಾಗೂ ಇಂಜಿನಿಯರ್‌ಗಳಿಂದ ಸದ್ಯದಲ್ಲೇ ಮಾಹಿತಿ ಪಡೆದು, ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.

— ಗಿತ್ತೆ ಮಾಧವ ವಿಠಲರಾವ್ ಸಿಇಒ, ಜಿಲ್ಲಾ ಪಂಚಾಯಿತಿ, ದಾವಣಗೆರೆ.

ನಮ್ಮ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಜಲಜೀವನ್ ಯೋಜನೆಯ ಕೆಲಸ 6 ವರ್ಷ ಕಳೆದರೂ ಅರೆಬರೆಯಾಗಿ ನಿಂತಿದೆ. ಸೋರುತ್ತಿರುವ ಹಳೆಯ ನೀರಿನ ಟ್ಯಾಂಕ್ ದುರಸ್ತಿಯಾಗಿಲ್ಲ. ಜಿಲ್ಲಾ ಪಂಚಾಯತ್ ಸಿಇಒ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಕೃಷಿ ಮತ್ತು ಕುಡಿಯುವ ನೀರಿನ ಹಿತದೃಷ್ಟಿಯಿಂದ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

— ಆರ್.ಸಿ. ಗಣೇಶ್ ಮಾಜಿ ಅಧ್ಯಕ್ಷ, ಹುಚ್ಚವ್ವನಹಳ್ಳಿ ಗ್ರಾಪಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net