ದಾವಣಗೆರೆ: ಜೈನಾಚಾರ್ಯ ಶ್ರೀ ರಾಜರಕ್ಷಿತ ಸೂರೀಶ್ವರಜೀ ಮಹಾರಾಜರು, ಶ್ರೀ ನಯರಕ್ಷಿತ ವಿಜಯಜೀ ಮಹಾರಾಜರು ಹಾಗೂ ಸಾಧು-ಸಾಧ್ವಿಗಳು ಜು.19ರಂದು ದಾವಣಗೆರೆಯಲ್ಲಿ ಚಾತುರ್ಮಾಸ ಪ್ರವೇಶ ಮಾಡಲಿದ್ದಾರೆ.
ಬೆಳಗ್ಗೆ 8-30ಕ್ಕೆ ಇಲ್ಲಿನ ಅಭಿನವ ರೇಣುಕ ಮಂದಿರ ಪಕ್ಕದ ಅರಿಹಂತ್ ಅಪಾರ್ಟ್‌ಮೆಂಟ್ ಆವರಣದಿಂದ ಚೌಕಿಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ ದೇವಸ್ಥಾನದವರೆಗೆ ಉಭಯ ಜೈನಾಚಾರ್ಯರ ಮೆರವಣಿಗೆ ನಡೆಯಲಿದೆ. ನಂತರ ಚೌಕಿಪೇಟೆಯ ಬಕ್ಕೇಶ್ವರ ಕಲ್ಯಾಣಮಂದಿರದಲ್ಲಿ ಶ್ರೀ ರಾಜರಕ್ಷಿತ ಸೂರೀಶ್ವರಜೀ ಮಹಾರಾಜರಿಂದ ಪ್ರವಚನ ಆಯೋಜನೆಯಾಗಿದೆ.
ಜೈನಾಚಾರ್ಯ ಶ್ರೀ ರಾಜರಕ್ಷಿತ ಸೂರೀಶ್ವರಜೀ ಮಹಾರಾಜರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೈನಸಾಧುಗಳು ನಾಲ್ಕು ತಿಂಗಳ ಪರ್ಯಂತ ನಡೆಸುವ ಚಾತುರ್ಮಾಸ ಮಹತ್ವ ಪಡೆದಿದೆ. ಸಂಸಾರ ಪರಿತ್ಯಾಗಿಗಳಾದ ಜೈನ ಸಾಧುಗಳು ಚಾತುರ್ಮಾಸದ ಮೂಲಕ ಜನರಲ್ಲಿ ಸಂಸ್ಕಾರ ಬಿತ್ತುವ ಕೆಲಸ ಮಾಡಲಿದ್ದಾರೆ. ವಿವಿಧೆಡೆಯ ಭಕ್ತರು ಭಾಗವಹಿಸುವರು ಎಂದರು.
ನರೇಂದ್ರ ಮೋದಿ ಅಧಿಕಾರದಲ್ಲಿ ಇರದಿದ್ದ ಸಂದರ್ಭದಿಂದಲೂ ಹಿರಿಯ ಗುರುಗಳಾದ ಶ್ರೀ ಚಂದ್ರಶೇಖರ ವಿಜಯಜೀ ಮಹಾರಾಜ ಸಾಹೇಬ ಅವರ ಬಳಿ ಬಂದು ಮಾರ್ಗದರ್ಶನ ಪಡೆದಿದ್ದಾರೆ. ಹಿರಿಯ ಗುರುಗಳಲ್ಲಿ ರಾಷ್ಟ್ರ ಹಾಗೂ ಧರ್ಮಪ್ರೇಮ ಹೆಚ್ಚಿತ್ತು. ಅವರ ಶಿಷ್ಯರಾದ ನಾವು ದಾವಣಗೆರೆಗೆ ಚೊಚ್ಚಲ ಬಾರಿಗೆ ಚಾತುರ್ಮಾಸ ಹಿನ್ನೆಲೆಯಲ್ಲಿ ಬಂದಿದ್ದೇವೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಜು. 28ರಿಂದ ನವೆಂಬರ್ 24ರವರೆಗೆ ಆಯೋಜನೆಯಾಗಿರುವ ಸುಪಾರ್ಶ್ವ-ಸಿದ್ಧಿ ಚಾತುರ್ಮಾಸದಲ್ಲಿ 20 ಸ್ಥಾನಕ ತಪ ನಡೆಯಲಿದೆ. ನಿತ್ಯ ಬೆಳಗ್ಗೆ ಶ್ರೀ ತತ್ತ್ವಾರ್ಥಸೂತ್ರ ಕಾರಿಕಾ ಗ್ರಂಥದ ಮೇಲೆ ಪ್ರವಚನ, ಪ್ರತಿ ಶನಿವಾರ ಬೆಳಗ್ಗೆ ಪ್ರಭುಮಿಲನ ಕಾರ್ಯಕ್ರಮವಿರಲಿದೆ. ಪ್ರತಿ ಭಾನುವಾರಗಳಂದು ಶ್ರೀ ಸಂಘ ಉತ್ಕರ್ಷ ಶಿಬಿರ ಇರಲಿದೆ. ಮಕ್ಕಳ ಅಷ್ಟಪ್ರಕಾರಿ ಪೂಜೆ ಹಾಗೂ ಯುವಜನರ ಶಿಬಿರಗಳ ಮೂಲಕ ಜೀವನ ಮೌಲ್ಯ ಕಲಿಸಲಾಗುವುದು. ಸೋಮವಾರದಿಂದ ಔಪಚಾರಿಕ ಉಪನ್ಯಾಸ ನೆರವೇರಲಿದೆ ಎಂದರು.
ಶ್ರೀ ನಯರಕ್ಷಿತವಿಜಯಜೀ ಮಹಾರಾಜರು ಮಾತನಾಡಿ ಕರೊನಾ ಬಳಿಕ ನಾವು ಬೇರೆ ಪ್ರಪಂಚವನ್ನೇ ನೋಡಿದ್ದೇವೆ. ಪ್ರಕೃತಿ ವಿಕೋಪ, ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂದು ಎಲ್ಲರ ಮುಖದಲ್ಲೂ ಪ್ರೇಮದ ಕೊರತೆ ಎದ್ದು ಕಾಣುತ್ತಿದೆ. ವಾಹನ, ಯಂತ್ರೋಪಕರಣಗಳಿರುವ ಈ ಕಾಲದಲ್ಲಿ ಪ್ರೇಮದ ಅಭಾವವಿದೆ. ಭಗವಾನ್ ಮಹಾವೀರರು ಬೋಧಿಸಿದ ಅಹಿಂಸೆ, ಶಾಂತಿಯನ್ನು ಜೈನಧರ್ಮ ಬೋಧಿಸುತ್ತ ಬಂದಿದೆ ಎಂದರು.
ಜೈನ ಧರ್ಮ ರಾಜಕೀಯವಾಗಿ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದೆ. ಆದರೂ ಜಾತಿಯಲ್ಲಿ ಹಿಂದೂ ಆಗಿದೆ. ಜೈನರ ಜನಸಂಖ್ಯೆ 44 ಲಕ್ಷ ಇದ್ದಾಗ್ಯೂ ದೇಶದಲ್ಲಿ 15 ಸಾವಿರ ಜೈನ ಸಾಧುಗಳಿದ್ದಾರೆ. ಪ್ರತಿ ಜೈನ ಕುಟುಂಬದಲ್ಲಿ 2-3 ಮಕ್ಕಳಿದ್ದರೂ ದೀಕ್ಷೆಗೆ ಸಮಸ್ಯೆ ಇಲ್ಲ. ಕೋಟ್ಯಾಧೀಶ, ಸ್ಥಿತಿವಂತ ಜೈನ ಧರ್ಮೀಯರು ಹಣದ ಮೋಹ ಬಿಟ್ಟು ಶಾಂತಿಗಾಗಿ ಸನ್ಯಾಸ ಸ್ವೀಕರಿಸುತ್ತಿದ್ದಾರೆ. ಯುವತಿಯರು ಕೂಡ ಸ್ವ-ಇಚ್ಛೆಯಿಂದ ಸನ್ಯಾಸತ್ವ ಕಡೆಗೆ ಒಲವು ತೋರುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿಪೂಜಕ ಸಂಘದ ಅಧ್ಯಕ್ಷ ನರೇಂದ್ರ ಜೈನ್, ಉಪಾಧ್ಯಕ್ಷ ಶೇಯಾಂಸ ಸಂಘವಿ, ವಿನೋದ್ ಜೈನ್, ಕುಮಾರ್‌ಪಾಲ್ ಜೈನ್, ಮೋಹನಲಾಲ್ ಜೈನ್, ಕುಂದನ್‌ಮಲ್ ಜೈನ್, ಕಿಶೋರ್‌ಜೈನ್, ಗೌತಮ್ ಜೈನ್, ನಿತೀಶ್ ಜೈನ್ ಇದ್ದರು.
ಅಯೋಧ್ಯೆ ಶ್ರೀರಾಮಮಂದಿರದಲ್ಲಿ ನಡೆದಿರುವ ದೇಣಿಗೆ ಹಗರಣ ವೈಭವೀಕರಿಸಲಾಗುತ್ತಿದೆ. ಪ್ರಕರಣ ನಡೆಯಬಾರದಿತ್ತು. ಸರ್ಕಾರದ ಅಧೀನದಲ್ಲಿರುವ ಹಿಂದೂ ದೇಗುಲಗಳೇ ಚರ್ಚೆಗೀಡಾಗುತ್ತಿವೆ. ಅನ್ಯಧರ್ಮದ ಚಟುವಟಿಕೆಗೆ ವಿದೇಶಗಳಿಂದಲೂ ದೊಡ್ಡ ಪ್ರಮಾಣದ ಹಣ ಹರಿದುಬರುತ್ತಿದೆ. ಅದು ಭಾರತದಿಂದ ಹೊರಗೂ ಹೋಗುತ್ತಿದೆ. ನರೇಂದ್ರ ಮೋದಿ ಅವರಿಲ್ಲದೆ ಹೋಗಿದ್ದರೆ ಶ್ರೀರಾಮಮಂದಿರವೇ ಆಗುತ್ತಿರಲಿಲ್ಲ. ಅವರ ಬಗ್ಗೆ ಭರವಸೆ ಇದೆ. ತನಿಖೆ ನಡೆಯುತ್ತಿದ್ದು ಎಲ್ಲವೂ ಸರಿಹೋಗಲಿದೆ ಎಂದೂ ಶ್ರೀ ನಯರಕ್ಷಿತವಿಜಯಜೀ ಮಹಾರಾಜರು ಪ್ರತಿಕ್ರಿಯಿಸಿದರು.