ಜಗಳೂರು ಏತ ನೀರಾವರಿ ವೈಜ್ಞಾನಿಕ ಯೋಜನೆ

ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಅನಿಸಿಕೆ, ಗುರುಸಿದ್ದಾಪುರದಲ್ಲಿ ಆಧುನಿಕ ಭಗೀರಥ 57ರ ಸಂಭ್ರಮ
Adhunika Bhagiratha
ಆಧುನಿಕ ಭಗೀರಥರ 57ರ ಸಂಭ್ರಮ ಕಾರ್ಯಕ್ರಮವನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಉದ್ಘಾಟಿಸಿದರು. ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಕೆ.ಪಿ. ಪಾಲಯ್ಯ ಇತರರಿದ್ದರು.Adhunika Bhagiratha
Published on: 

ಜಗಳೂರು: ಜಗಳೂರು ಮತ್ತು ಭರಮಸಾಗರದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗಳು ವೈಜ್ಞಾನಿಕ ಯೋಜನೆಗಳಾಗಿವೆ ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಹೇಳಿದರು.

ತಾಲೂಕಿನ ಗುರುಸಿದ್ದಾಪುರ (ಮಡ್ರಳ್ಳಿ) ಚೌಡೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಆಧುನಿಕ ಭಗೀರಥರ 57ರ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ಮುಂದಿನ ವರ್ಷ ಮಳೆ ಬಂದಾಕ್ಷಣ ಎಲ್ಲ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತವೆ. ಮಡ್ರಳ್ಳಿ ಕೆರೆ ಕೋಡಿ ಬಿದ್ದು ಸಂಭ್ರಮ, ಸಂತೋಷ ಮನೆ ಮಾಡಲಿ ಎಂದು ಆಶೀಸಿದರು.

ಸಿದ್ದರಾಮಯ್ಯ ಅವರು ಯೋಜನೆಗೆ ಅನುಮಾನ ವ್ಯಕ್ತಪಡಿಸಿದ್ದರೂ ನಮ್ಮ ಅಪೇಕ್ಷೆಯಂತೆ ಬಜೆಟ್‌ನಲ್ಲಿ 500 ಕೋಟಿ ರೂ. ಸೇರ್ಪಡೆ ಮಾಡಿದರು. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಯೋಜನೆಗೆ 1200 ಕೋಟಿ ಬದಲು 250 ಕೋಟಿ ರೂ. ಬಿಡುಗಡೆ ಮಾಡಿದ್ದರು. ತಕ್ಷಣವೇ ಕ್ಯಾಬಿನೆಟ್ ಸಚಿವರಿಗೆ ಕರೆ ಮಾಡಿ 1200 ಕೋಟಿ ಬಿಡುಗಡೆ ಮಾಡಿಸಲು ಸೂಚನೆ ನೀಡಲಾಗಿತ್ತು.

ಇಲ್ಲದಿದ್ದರೆ ಶಾಸಕರು ರಾಜೀನಾಮೆ ನೀಡಬೇಕು ಎಂದು ಎಚ್ಚರಿಸಿದ್ದರಿಂದ ಬಿ.ಎಸ್.ವೈ. ಒಂದೇ ಕಂತಿನಲ್ಲಿ 1200 ಕೋಟಿ ರೂ. ಬಿಡುಗಡೆ ಮಾಡಿರುವುದು ಇತಿಹಾಸವಾಗಿದೆ. ಯಾವುದೇ ಪಕ್ಷದ ಒಲವು-ನಿಲುವು ಇಲ್ಲದೆ ಯೋಜನೆಗೆ ಬೇಕಾದ ಹಣವನ್ನು ಒದಗಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಕಾನೂನು ತೊಡಕಿನಿಂದಾಗಿ ತಾಲೂಕಿನ 57 ಕೆರೆಗಳಲ್ಲಿ 4 ಕೆರೆಗಳಿಗೆ ನೀರಿಲ್ಲದೇ ಅನಾಥವಾಗಿದ್ದವು. ಅದನ್ನು ಪರಿಹರಿಸಿಕೊಂಡು ಎಲ್ಲ ಕೆರೆಗಳಿಗೆ ನೀರು ಹರಿಸಿರುವುದು ಸಂತಸ ತಂದಿದೆ ಎಂದರು. ಒಡೆದು ಹೋದ ಸಮಾಜ, ಮನಸ್ಸುಗಳನ್ನು ಒಂದು ಮಾಡುವ ಕೆಲಸವನ್ನು ಶ್ರೀ ಮಠ ಮಾಡಿಕೊಂಡು ಬಂದಿದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನವಾಗುತ್ತದೆ. ಮನುಷ್ಯರಾಗಿ ಬಾಳಿ, ಬದುಕೋಣ ಎಂದರು.

ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುರೇಶ್ ಗೌಡ್ರು, ತಾಪಂ ಮಾಜಿ ಸದಸ್ಯ ಸಿದ್ದೇಶ್, ಚಟ್ನಳ್ಳಿ ರಾಜಪ್ಪ, ಶಶಿಧರ್, ವೇಣುಗೋಪಾಲ್‌ರೆಡ್ಡಿ, ಬಿಸ್ತುವಳ್ಳಿ ಬಾಬು, ಕಲ್ಲೇಶ್‌ರಾಜ್ ಪಟೇಲ್, ಚಿಕ್ಕ ಉಜ್ಜಯಿನಿ ಅಂಜಿನಪ್ಪ, ಪ್ರಕಾಶ್, ಪಲ್ಲಾಗಟ್ಟೆ ಶೇಖರಪ್ಪ, ಪಿಡಿಒ ವಾಸು, ಗಿರೀಶ್, ಗುತ್ತಿಗೆದಾರ ದೀಪಕ್ ಪಾಟೇಲ್ ಇತರರಿದ್ದರು.

ಯೋಜನೆ ನಿಮಿತ್ತ ರಾಜೀನಾಮೆಗೆ ಸಿದ್ಧನಿದ್ದೆ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಬಿಎಸ್‌ವೈ ಕಡಿಮೆ ಅನುದಾನ ನೀಡಿದ್ದಾರೆ. ಹಾಗಾಗಿ 770 ಕೋಟಿ ಹಣ ಬಿಡುಗಡೆ ಮಾಡಿಸಬೇಕು ಇಲ್ಲವೇ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶ್ರೀಗಳು ಸೂಚಿಸಿದ್ದರು. ಅವರ ಮಾತಿನಂತೆ ರಾಜೀನಾಮೆ ನೀಡಲು ಬೆಂಗಳೂರಿಗೆ ತೆರಳಿದ ವೇಳೆ ಶ್ರೀಗಳೇ ಕರೆ ಮಾಡಿ ರಾಜೀನಾಮೆ ನೀಡುವುದು ಬೇಡ, ಹಣ ಬಿಡುಗಡೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಯೋಜನೆಗೆ ಶ್ರಮಿಸಿದವರನ್ನು ಮರೆಯದಿರಿ

ಜಗಳೂರಿನಲ್ಲಿ 2018ರಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಜಗಳೂರಿನ 57 ಕೆರೆ ಹಾಗೂ ಭರಮಸಾಗರ 46 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜನ್ಮ ನೀಡಿದ್ದು ಶ್ರೀಗಳು. ಸಿದ್ದರಾಮಯ್ಯ ಅವರು ಈ ಎರಡೂ ಯೋಜನೆಗೆ 2250 ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಿಸುವಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್, ಎಚ್. ಆಂಜನೇಯ, ನಾನು ಶ್ರಮಿಸಿದ್ದೆವು. ನಂತರ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿ ಯೂರಪ್ಪ ಅವರು ಶ್ರೀಗಳ ಸೂಚನೆಯಂತೆ ಒಂದೇ ಕಂತಿನಲ್ಲಿ ಜಗಳೂರಿಗೆ 650 ಕೋಟಿ, ಭರಮಸಾಗರಕ್ಕೆ 500ಕೋಟಿ ಒಟ್ಟು 1150 ಕೋಟಿ ಬಿಡುಗಡೆ ಮಾಡಿದ್ದನ್ನು ಮರೆಯಬಾರದು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ಎತ್ತಿನಗಾಡಿಯಲ್ಲಿ ಮೆರವಣಿಗೆ

ಕಾರ್ಯಕ್ರಮದ ನಿಮಿತ್ತ ಚಿಕ್ಕಮ್ಮನಹಟ್ಟಿ ಸೇರಿ ವಿವಿಧ ಗ್ರಾಮಗಳಿಂದ 70 ಎತ್ತಿನಗಾಡಿಗಳು ಮೆರವಣಿಗೆ ನಡೆಯಿತು. ಕೆರೆಯಿಂದ ಕಾರ್ಯಕ್ರಮದ ವೇದಿಕೆ ಸಮೀಪದವರೆಗೂ ಸಾಲಾಗಿ ನಿಂತಿದ್ದ ಎತ್ತಿನ ಗಾಡಿಗಳು ಎಲ್ಲರ ಗಮನ ಸೆಳೆಯಿತು. 57 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ನಾಗರಾಜ್ ನೇತೃತ್ವದ ಶಿವಸಂಚಾರದ ತಂಡ ವಚನ ಗೀತೆ ಹಾಗೂ ಬಸವೇಶ್ವರ ಭಜನಾ ಸಂಘದಿಂದ ಭಜನೆ ಗೀತೆ ಹಾಡುವ ಮೂಲಕ ಮನರಂಜಿಸಿದರು.

ಭವ್ಯ ಸ್ವಾಗತ

ಸಿರಿಗೆರೆಯಿಂದ ಚಿತ್ರದುರ್ಗ ಮಾರ್ಗವಾಗಿ ದೊಣೆಹಳ್ಳಿಗೆ ಆಗಮಿಸಿದ ಶ್ರೀಗಳನ್ನು ಶಾಸಕ ಬಿ. ದೇವೇಂದ್ರಪ್ಪ ನೇತೃತ್ವದಲ್ಲಿ ನೂರಾರು ಜನರು ಭವ್ಯ ಸ್ವಾಗತ ಕೋರಿದರು. ಅಲ್ಲಿಂದ ಜಗಳೂರು ಪಟ್ಟಣ, ಚಿಕ್ಕಮ್ಮನಹಟ್ಟಿ, ಕೆಳಗೋಟೆ, ಕೆಚ್ಚೇನಹಳ್ಳಿ, ಹೊಸಕೆರೆ, ಮಲೆಮಾಚಿಕೆರೆ, ಮಡ್ರಳ್ಳಿಯ ಗ್ರಾಮದುದ್ದಕ್ಕೂ ಭಕ್ತರು ಶ್ರೀಗಳಿಗೆ ಸ್ವಾಗತಿಸಿ ಪುಷ್ಪವೃಷ್ಟಿ ಮಾಡಿದರು.

ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಗಳು ಇದೀಗ ಕೆರೆ ಗಳಿಗೆ ನೀರು ತುಂಬಿ ಸುವ ಮಹತ್ವದ ಯೋಜನೆ ಯಶಸ್ವಿ ಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಗಳ ನಿರ್ವಹಣೆಗೆ ಪ್ರತಿ ಕೆರೆಗೂ ಸಂಘವನ್ನು ನಿರ್ಮಿಸಿ, ದೇಣಿಗೆ ಸಂಗ್ರಹಿಸಬೇಕು. ಇದರಿಂದ ಕೆರೆಗಳ ನಿರ್ವಹಣೆಗೆ ಸರ್ಕಾರದ ಅನುದಾನ ಕಾಯುವುದು ತಪ್ಪುತ್ತದೆ.
ಕೆ.ಪಿ. ಪಾಲಯ್ಯ ಕೆಪಿಸಿಸಿ ಎಸ್ಟಿ ಘಟಕ ಮಾಜಿ ಅಧ್ಯಕ್ಷ
ಸುಡುವ ಬಿಸಿಲಿನಿಂದ ನೀರಿಲ್ಲದೆ ಒಣಗಿದ ಕೆರೆಗಳು, ಕುಡಿಯುವ ನೀರಿನ ಹಾಹಾಕಾರಿಂದ ಜಗಳೂರು ತಾಲೂಕಿನಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದ ದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಶ್ರೀಗಳು 2018ರಲ್ಲಿ ಹಾಕಿದ್ದ ಬೀಜ ಇಂದು ಪಲ ನೀಡಿದೆ.
ಎಂ.ಡಿ. ಕೀರ್ತಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಎಸ್ಟಿ ಘಟಕ