ವರ್ಷಕ್ಕೆರಡು ಬಾರಿ ಕನ್ನಡ ಕಳಕಳಿ ಸಾಕೆ?

 ಕುರ್ಕಿ ಹಿರೇತೊಗಲೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಶಾಸಕ ಕೆೆ. ಎಸ್. ಬಸವಂತಪ್ಪ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಎಸ್. ಸಿದ್ದೇಶ್ ಕುರ್ಕಿ, ಬಿ. ವಾಮದೇವಪ್ಪ, ದಿನೇಶ್ ಕೆ ಶೆಟ್ಟಿ ಸುಮತಿ ಜಯಪ್ಪ ಇತರರಿದ್ದರು.
ಕುರ್ಕಿ ಹಿರೇತೊಗಲೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಶಾಸಕ ಕೆೆ. ಎಸ್. ಬಸವಂತಪ್ಪ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಎಸ್. ಸಿದ್ದೇಶ್ ಕುರ್ಕಿ, ಬಿ. ವಾಮದೇವಪ್ಪ, ದಿನೇಶ್ ಕೆ ಶೆಟ್ಟಿ ಸುಮತಿ ಜಯಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮ್ಮೇಳನಾಧ್ಯಕ್ಷ ಎಸ್. ಸಿದ್ದೇಶ್ ಕುರ್ಕಿ ಪ್ರಶ್ನೆ
  • ಅನ್ಯ ಭಾಷೆಗಳ ಬಗ್ಗೆ ದುರಭಿಮಾನ ಬೇಡ
  • ಕುರ್ಕಿಯಲ್ಲಿ ದಾವಣಗೆರೆ ತಾಲೂಕು ಸಾಹಿತ್ಯ ಸಮ್ಮೇಳನ
ದಾವಣಗೆರೆ: ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ ಹೀಗೆ ವರ್ಷಕ್ಕೆರಡು ಬಾರಿ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಪರಿಷತ್ತು, ಸಚಿವರು, ರಾಜಕಾರಣಿ, ಕವಿಗಳು ಬಾಯಲ್ಲಿ ಕನ್ನಡದ ಕಳಕಳಿ ಮಾತುಗಳು ಬರುತ್ತಿರುವುದು ಸಾಕೆ? ಎಂದು ಸಮ್ಮೇಳನದ ಸರ್ವಾಧ್ಯಕ್ಷ ಎಸ್. ಸಿದ್ದೇಶ್ ಕುರ್ಕಿ ಪ್ರಶ್ನಿಸಿದರು.
ಕುರ್ಕಿ ಹಿರೇತೊಗಲೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ನಮ್ಮನ್ನಾಳುತ್ತಿದ್ದ ಇಂಗ್ಲಿಷರೂ ಸಹ ನಮ್ಮ ಭಾಷೆ, ಸಂಸ್ಕೃತಿಯನ್ನು ಗೌರವಿಸುತ್ತಿದ್ದರು, ಮೆಚ್ಚಿಕೊಂಡಿದ್ದರು. ಕನ್ನಡದಲ್ಲೇ ಸುತ್ತೋಲೆ ಕಳುಹಿಸುತ್ತಿದ್ದರು. ಅನ್ಯ ಭಾಷೆಗಳನ್ನು ವ್ಯವಹಾರ ಜ್ಞಾನಕ್ಕೆ ಪೂರಕವಾಗಿ ಕಲಿಯೋಣ. ಆದರೆ ಮಾತೃಭಾಷೆ ತುಳಿದು ಅನ್ಯ ಭಾಷೆಗಳ ಹಾವಳಿಗೆ ಉತ್ತೇಜಿಸಬಾರದು ಎಂದು ಮನವಿ ಮಾಡಿದರು.
ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡವನ್ನು ನಮ್ಮಿಂದಲೇ ಅಳಿಸುವ ಪ್ರಯತ್ನ ನಡೆಯುತ್ತಿದೆ. ಆದರೂ ಗೊತ್ತಿಲ್ಲದವರಂತೆ ಓಡಾಡುತ್ತಿದ್ದೇವೆ. ಹೆತ್ತ ತಾಯಿಗೆ ಹರಕಲು ಸೀರೆ ಉಡಿಸಿ, ಪಕ್ಕದ ಮನೆಯವರಿಗೆ ಜರತಾರಿ ಸೀರೆ ಉಡಿಸುವ ನೀಚರಾಗಿದ್ದೇವೆ. ಮೊದಲು ನಮ್ಮ ತಾಯಿಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಕನ್ನಡಿಗರಲ್ಲಿ ಬರಬೇಕು.
ಪರಭಾಷಿಕರಿಂದಾಗಿ ಕನ್ನಡ ಮಕ್ಕಳ ಕರುಣಾಮಯಿತನದ ದುರುಪಯೋಗ ಆಗುತ್ತಿದೆ. ಅನ್ಯ ಭಾಷಿಕರು ತಮ್ಮ ಮನೆಯಲ್ಲಿ ಅವರ ಭಾಷೆ ಮಾತಾಡಿಕೊಳ್ಳಲಿ. ಈ ನೆಲದ ಅನ್ನ-ನೀರು ಪಡೆದು ಕನ್ನಡವನ್ನು ತುಳಿಯುತ್ತಿರುವುದು ವಿಷಾದನೀಯ. ಕನ್ನಡಿಗರಲ್ಲಿ ಕನ್ನಡದ ಮೇಲೆ ಸ್ವಾಭಿಮಾನವಿರಲಿ. ಬೇರೊಂದು ಭಾಷೆ ಬಗ್ಗೆ ದುರಭಿಮಾನ ಬೇಡ ಎಂದು ಕಿವಿಮಾತು ಹೇಳಿದರು.
ರಾಜ್ಯದ ಆಡಳಿತದಲ್ಲಿ ಕನ್ನಡ ಬಳಕೆ ಪ್ರಗತಿ ಕಾಣುತ್ತಿಲ್ಲ. ಸರ್ಕಾರದ ಆಡಳಿತ, ನ್ಯಾಯಾಲಯ, ಬ್ಯಾಂಕ್‌ಗಳ ವ್ಯವಹಾರ ಕನ್ನಡದಲ್ಲಿಯೇ ನಡೆಯಬೇಕು. ಕನ್ನಡ ಸಂಘಗಳು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಉಳಿಸಿ, ಬೆಳೆಸಲು ಮತ್ತು ಪ್ರೋತ್ಸಾಹಿಸಲು ಸಾಂಸ್ಕೃತಿಕ ಉತ್ಸವ, ಕಲಿಕೆ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ಕನ್ನಡಾಭಿಮಾನ ಮೂಡಿಸಬೇಕು ಎಂದು ಹೇಳಿದರು.
ದಶಸೂತ್ರಗಳ ಪ್ರಸ್ತಾವ:
ಸಮ್ಮೇಳನಾಧ್ಯಕ್ಷರು ಕನ್ನಡದ ಬೆಳವಣಿಗೆಗೆ ದಶಸೂತ್ರಗಳನ್ನು ಮಂಡಿಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ನೀತಿ ಖಂಡನೀಯ. ಈ ಯೋಜನೆ ಕೈಬಿಡಬೇಕು.
ರಾಜ್ಯದ ಪ್ರತಿ ಶಾಲೆಯಲ್ಲೂ ಕನ್ನಡ ಕಲಿಸಬೇಕು. ಐಸಿಎಸ್ ಅಥವಾ ಸಿಬಿಎಸ್‌ಇ ಯಾವುದೇ ಇರಲಿ, ಮೊದಲ ಭಾಷೆ ಕನ್ನಡ ಕಡ್ಡಾಯ ವಿಷಯವಾಗಿರಬೇಕು. ಕನ್ನಡ ಸರ್ಕಾರಿ ಶಾಲೆಗಳಿಗೆ ಸಮರ್ಪಕ ಕಟ್ಟಡಗಳು ಮತ್ತು ಬೋಧನಾ ಸಿಬ್ಬಂದಿ ನೇಮಿಸಿ ಪ್ರೋತ್ಸಾಹಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳು ಹೆಚ್ಚು ಪ್ರಕಟವಾಗಬೇಕು.
ರಿಮೇಕ್ ಚಲನಚಿತ್ರಗಳಿಗೆ ಕಡಿವಾಣ ಹಾಕಿ ಕನ್ನಡದ ಗುಣಮಟ್ಟದ ಚಲನಚಿತ್ರಗಳನ್ನು ತೆರೆಗೆ ತರಬೇಕು. ಪರಭಾಷೆ ಚಿತ್ರಗಳು ಬದಲು ಮೊದಲು ನಮ್ಮ ಕನ್ನಡ ಚಿತ್ರಗಳಿಗೆ ಸರ್ಕಾರ ಅವಕಾಶ ಕಲ್ಪಿಸಿ ಕೊಡಬೇಕು.
ಪುಸ್ತಕ ಪ್ರಕಟಣೆಯಾಗಿ ನಾಲ್ಕು ವರ್ಷವಾದರೂ ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಪ್ರಕಟಣೆಯಾದ ಮಾರನೆಯ ವರ್ಷವೇ ಖರೀದಿಸಿ ಲೇಖಕರು, ಪ್ರಕಾಶಕರಿಗೆ ಅನುಕೂಲ ಮಾಡಿಕೊಡಬೇಕು. ಪುಸ್ತಕ ಖರೀದಿಸಲು ಕೇಂದ್ರ ಗ್ರಂಥಾಲಯಕ್ಕೆ ಸರ್ಕಾರ ಪ್ರತಿವರ್ಷ ಅನುದಾನ ನೀಡಬೇಕು.
ಕೇರಳ ರಾಜ್ಯದಲ್ಲಿ ಸರ್ಕಾರ 2000 ಪ್ರತಿಗಳನ್ನು ಖರೀದಿಸುತ್ತದೆ. ಕರ್ನಾಟಕ ಸರ್ಕಾರ ಕನಿಷ್ಠ 500 ಪ್ರತಿಗಳನ್ನಾದರೂ ಖರೀದಿಸಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು.
ಮನೆಗೊಂದು ಗ್ರಂಥಾಲಯ ಪರಿಕಲ್ಪನೆಯಲ್ಲಿ ಮಕ್ಕಳಿಂದ ಮೊಬೈಲ್ ದೂರವಿರಿಸಿ, ಪುಸ್ತಕ ಓದಲು ಪಾಲಕರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತರಲಾಗುತ್ತಿದ್ದ ಕನ್ನಡ ನುಡಿ ಪತ್ರಿಕೆ ಪ್ರಕಟಣೆ ಸ್ಥಗಿತವಾಗಿದೆ. ಮರು ಪ್ರಕಟಣೆಯೊಂದಿಗೆ ಸದಸ್ಯರಿಗೆ ಸಿಗುವಂತಾಗಬೇಕು ಎಂದು ಆಶಿಸಿದರು.
ಶಾಸಕ ಕೆ.ಎಸ್‌ಬಸವಂತಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಪ್ರೊ.ವೈ. ವೃಷಭೇಂದ್ರಪ್ಪ, ಸುಮತಿ ಜಯಪ್ಪ, ಡಾ. ಬಸವರಾಜ ಸಾದರ ಇತರರಿದ್ದರು.

ವಿಶ್ವ ಕನ್ನಡ ಸಮ್ಮೇಳನ ಸೇರಿ 5 ನಿರ್ಣಯಗಳ ಮಂಡನೆ:ದಾವಣಗೆರೆಯಲ್ಲಿ ಅತಿ ಶೀಘ್ರವಾಗಿ ವಿಶ್ವ ಕನ್ನಡ ಸಮ್ಮೇಳನ ನಡೆಸುವುದೂ ಸೇರಿ ಐದು ನಿರ್ಣಯಗಳನ್ನು ತಾಲೂಕು ಸಮ್ಮೇಳನದಲ್ಲಿ ಂಗೀಕರಿಸಲಾಯಿತು. ತಾಲೂಕು ಗೌರವ ಕೋಶಾಧ್ಯಕ್ಷ ಎಚ್.ಕೆ. ಪಾಲಾಕ್ಷಪ್ಪ ಗೋಪನಾಳು ನಿರ್ಣಯಗಳನ್ನು ಪ್ರಕಟಿಸಿದರು. ಪ್ರತಿ ತಾಲೂಕು ಕೇಂದ್ರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯ ಗಂಥಾಲಯಗಳಿಗೆ ಸುಸಜ್ಜಿತ ಕಟ್ಟಡ ಒದಗಿಸಬೇಕು. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಆಧರಿತ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಜತೆಗೆ ಆಧುನೀಕರಿಸಬೇಕು. ಯಾವ ಸರ್ಕಾರಿ ಶಾಲೆಗಳನ್ನು ಮುಚ್ಚಕೂಡದು. ಅನ್ಯ ರಾಜ್ಯ ಅಥವಾ ರಾಷ್ಟ್ರಗಳಿಂದ ಕರ್ನಾಟಕದಲ್ಲಿ ಸ್ಥಾಪಿಸಲ್ಪಡುವ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಐಟಿ-ಬಿಟಿ ಕಂಪನಿಗಳಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ಕನ್ನಡಿಗರನ್ನು ನೇಮಿಸಲು ಕಾಯ್ದೆ ಜಾರಿಗೊಳಿಸಬೇಕು. ಕರ್ನಾಟಕದಲ್ಲಿನ ಬ್ಯಾಂಕ್‌ಗಳನ್ನು ಕನ್ನಡಿಗರ ನೇಮಕ ಖಾತ್ರಿಪಡಿಸಬೇಕು. ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ನಿರ್ಣಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net