ಬಜೆಟ್‌ನಲ್ಲಿ ನೀರಾವರಿಗೆ ಆದ್ಯತೆ ನಿರೀಕ್ಷೆ

ಎಸ್.ಎಸ್. ಮಲ್ಲಿಕಾರ್ಜುನ್
ಎಸ್.ಎಸ್. ಮಲ್ಲಿಕಾರ್ಜುನ್
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಹೇಳಿಕೆ
  • ಗಣರಾಜ್ಯೋತ್ಸವ ಸಮಾರಂಭ ನಂತರ ಸುದ್ದಿಗೋಷ್ಠಿ
ದಾವಣಗೆರೆ : ಮುಂಬರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿಯಿಂದ ಬಜೆಟ್ ಪೂರ್ವಭಾವಿ ಸಭೆಗಳು ನಡೆಯುತ್ತವೆ ಎಂದರು.
ಹರಿಹರ ತಾಲೂಕಿನ ಭೈರನಪಾದ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ತಲುಪಬೇಕಿದೆ. 22 ಕೆರೆ ಏತ ನೀರಾವರಿ ಯೋಜನೆಯಲ್ಲಿ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಇದರಿಂದ ದಾವಣಗೆರೆ ತಾಲೂಕಿನ ಕೆರೆಗಳಿಗೆ ಹೆಚ್ಚು ನೀರು ಹರಿದು ಬರಲಿದೆ ಎಂದು ಹೇಳಿದರು.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ, ಮುಖಂಡರಾದ ಕೆ. ಚಮನ್‌ಸಾಬ್, ಎ. ನಾಗರಾಜ ಇದ್ದರು.

ವಿವಿ ಪರೀಕ್ಷಾಂಗ ಬಲವರ್ಧನೆಗೆ 33 ಕೋಟಿ

ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಬಲವರ್ಧನೆಗೆ 33 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್ ತಿಳಿಸಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹಳೆಯ ಕಟ್ಟಡಗಳ ಬದಲಿಗೆ 175 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳ ಸುಸಜ್ಜಿತ ಹೊಸ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಬಾಕಿಯಿದೆ. ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿರುವ ಡಯಾಲಿಸಿಸ್ ಯಂತ್ರಗಳು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ತಂತ್ರಜ್ಞರ ನೇಮಕಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಣ್ಣುಗಳ ಸಂರಕ್ಷಣೆಗಾಗಿ ರೈಪಿಂಗ್ ಚೇಂಬರ್ ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಸದ್ಬಳಕೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ದಾವಣಗೆರೆ ಹಳೆಯ ಭಾಗದಲ್ಲಿ ಜನರ ಅನುಕೂಲಕ್ಕಾಗಿ ಬಾಪೂಜಿ ಆಸ್ಪತ್ರೆ ಸಹಯೋಗದಲ್ಲಿ 400 ಹಾಸಿಗೆಗಳ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ. ಅಲ್ಲಿ ತುರ್ತು ಚಿಕಿತ್ಸಾ ಘಟಕವೂ ಇರಲಿದೆ ಎಂದು ಮಾಹಿತಿ ನೀಡಿದರು.

ಮಲತಾಯಿ ಧೋರಣೆ ಬೇಡ

ಫೆ. 1ರಂದು ಕೇಂದ್ರದ ಬಜೆಟ್ ಮಂಡನೆಯಾಗಲಿದ್ದು, ಕರ್ನಾಟಕದ ಅಭಿವೃದ್ಧಿಗೆ ಅನುದಾನ ಒದಗಿಸುವ ಮೂಲಕ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗ್ರಹಿಸಿದರು.
ಜಿಡಿಪಿಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಜಿಎಸ್‌ಟಿ ರೂಪದಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತಿದೆ. ಅದಕ್ಕೆ ತಕ್ಕಂತೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಹೊರ ವರ್ತುಲ ರಸ್ತೆ ಅಭಿವೃದ್ಧಿ, ಭದ್ರಾ ಮೇಲ್ದಂಡೆ ಯೋಜನೆ, ಏಮ್ಸ್, ಐಐಟಿ ಸೇರಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಬಾರದು ಎಂದು ಹೇಳಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರ, ಸ್ಟಾರ್ಟಪ್‌ಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕಿದೆ. 20 ಕೋಟಿ ಕುಟುಂಬಗಳಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪವನ್ನು ಬದಲಾವಣೆ ಮಾಡಬಾರದು. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net