ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್

ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಕ್ರಿಯೆಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಡಾ. ಎಸ್. ವಿದ್ಯಾಶಂಕರ್, ಪ್ರೊ. ತೋಷಿನೌಬು ಯಮಗುಚಿ, ಪ್ರೊ. ಶುಯ್‌ಚಿ ಟೋರಿ, ಪ್ರೊ. ಸಟೊಯುಕಿ ಟನಕ, ಡಾ.ಡಿ.ಪಿ. ನಾಗರಾಜಪ್ಪ, ಡಾ. ಸಿ.ಎಂ. ರವಿಕುಮಾರ್, ಡಾ.ಎಂ.ಎಚ್. ದಿವಾಕರ್, ಡಾ. ರವಿರಾಜ ಎಚ್. ಮುಲಂಗಿ ಇದ್ದರು.
ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಕ್ರಿಯೆಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಡಾ. ಎಸ್. ವಿದ್ಯಾಶಂಕರ್, ಪ್ರೊ. ತೋಷಿನೌಬು ಯಮಗುಚಿ, ಪ್ರೊ. ಶುಯ್‌ಚಿ ಟೋರಿ, ಪ್ರೊ. ಸಟೊಯುಕಿ ಟನಕ, ಡಾ.ಡಿ.ಪಿ. ನಾಗರಾಜಪ್ಪ, ಡಾ. ಸಿ.ಎಂ. ರವಿಕುಮಾರ್, ಡಾ.ಎಂ.ಎಚ್. ದಿವಾಕರ್, ಡಾ. ರವಿರಾಜ ಎಚ್. ಮುಲಂಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕ್ರಮಕ್ಕೆ ಜ. 15 ರಂದು ಚಾಲನೆ
  • ವಿಟಿಯು ಕುಲಪತಿ ವಿದ್ಯಾಶಂಕರ್ ಹೇಳಿಕೆ
  • ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ದಾವಣಗೆರೆ : ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳ 83 ಸಾವಿರ ವಿದ್ಯಾರ್ಥಿಗಳಿಗೆ 6 ತಿಂಗಳ ಇಂಟರ್ನ್‌ಶಿಪ್ ನೀಡುವ ಕಾರ್ಯಕ್ರಮಕ್ಕೆ ಬರುವ ಜ. 15 ರಂದು ಚಾಲನೆ ನೀಡಲಾಗುವುದು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಹೇಳಿದರು.
ಜಪಾನ್ ದೇಶದ ಕಾಗೊಶಿಮ ವಿಶ್ವವಿದ್ಯಾಲಯದ ಗ್ರಾೃಜುಯೇಟ್ ಸ್ಕೂಲ್ ಆಫ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ಕುರುಮೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ, ನಗರದ ವಿಶ್ವವಿದ್ಯಾಲಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿರುವ, ‘ಕೊಲ್ಯಾಬೊರೇಟಿವ್ ಇನ್‌ಫರ್ಮ್ಯಾಟಿಕ್ಸ್’ ಕುರಿತು 2ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಈಗಾಗಲೇ 1500 ಕೈಗಾರಿಕೆಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. 8ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬೇಕಾಗುತ್ತದೆ. ಇದರಿಂದ ಅವರಿಗೆ 9 ಕ್ರೆಡಿಟ್ ಸಿಗಲಿವೆ. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಸಹಯೋಗ ಬೆಳೆಯಲಿದೆ ಎಂದು ಆಶಿಸಿದರು.
ರಾಜ್ಯದಲ್ಲಿ 220 ಇಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ 1.12 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಗುಣಮಟ್ಟದ ಶಿಕ್ಷಣ ನಮ್ಮ ಬದ್ಧತೆಯಾಗಿದೆ. ಉದ್ಯಮ ವಲಯಕ್ಕೆ ಪೂರಕವಾಗುವಂತೆ ನಮ್ಮ ಪಠ್ಯಕ್ರಮವನ್ನು ಪ್ರತಿ ವರ್ಷ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿಟಿಯು ಕ್ವಾಂಟಮ್ ತಂತ್ರಜ್ಞಾನದಲ್ಲಿ ಎಂಟೆಕ್ ಕೋರ್ಸ್ ಆರಂಭಿಸಿದೆ. ಇನ್ನೂ 10 ಎಂಟೆಕ್ ಕೋರ್ಸ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಸಂಶೋಧನೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮ ಸಂಬಂಧ ಜಪಾನ್‌ನ ವಿಶ್ವವಿದ್ಯಾಲಯಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲು ವಿಟಿಯು ಸಿದ್ಧವಿದೆ ಎಂದು ಘೋಷಿಸಿದರು.
ಜಪಾನ್ ದೇಶದ ಕಾಗೊಶಿಮ ವಿಶ್ವವಿದ್ಯಾಲಯದ ಓಶಿಯನ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ತೋಷಿನೌಬು ಯಮಗುಚಿ ಮಾತನಾಡಿದರು. ಜಪಾನ್‌ನ ಕುರುಮೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಶುಯ್‌ಚಿ ಟೋರಿ, ಪ್ರೊ. ಸಟೊಯುಕಿ ಟನಕ ಪಾಲೊಂಡಿದ್ದರು.
ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ, ವಿಚಾರ ಸಂಕಿರಣದ ಸಂಚಾಲಕರಾದ ಡಾ. ಸಿ.ಎಂ. ರವಿಕುಮಾರ್, ಡಾ.ಎಂ.ಎಚ್. ದಿವಾಕರ್, ಡಾ. ರವಿರಾಜ ಎಚ್. ಮುಲಂಗಿ ಇದ್ದರು.

ಹೊಸ ಸಭಾಂಗಣ

ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಾಣವಾಗಿರುವ ಸಭಾಂಗಣ ಚಿಕ್ಕದಾಗಿದೆ. 1 ಸಾವಿರ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸಾಮರ್ಥ್ಯದ ಹೊಸ ಸಭಾಂಗಣ ನಿರ್ಮಿಸಲಾಗುವುದು ಎಂದು ವಿಟಿಯು ಕುಲಪತಿ ವಿದ್ಯಾಶಂಕರ್ ಭರವಸೆ ನೀಡಿದರು.
ದೊಡ್ಡ ಸಭಾಂಗಣದ ಅಗತ್ಯವಿರುವುದು ಮನದಟ್ಟಾಗಿದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಹೊಸ ಸಭಾಂಗಣವನ್ನು ರೂಪಿಸಲಾಗುವುದು ಎಂದರು.

ಉದ್ಯೋಗ ಸೃಷ್ಟಿಸುವವರು ಬೇಕು

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವವರನ್ನು ರೂಪಿಸುವುದಕ್ಕೆ ಬದಲಾಗಿ ಉದ್ಯೋಗ ಸೃಷ್ಟಿಸುವ, ಅನ್ವೇಷಣೆ ಮಾಡುವ, ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯುವಜನರನ್ನು ತಯಾರು ಮಾಡಬೇಕಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ ಚೇರ್ಮನ್ ಪ್ರೊ. ಟಿ.ಜಿ. ಸೀತಾರಾಮ್ ಹೇಳಿದರು.
ವರ್ಚ್ಯುವಲ್ ಮೂಲಕ ಮಾತನಾಡಿದ ಅವರು, ಇಂಜಿನಿಯರಿಂಗ್ ಶಿಕ್ಷಣವು ಕೇವಲ ವಿಷಯ ಕಲಿಕೆಗೆ ಸೀಮಿತವಾಗದೇ ಸ್ಪರ್ಧಾತ್ಮಕತೆಯನ್ನು ಬೆಳೆಸಬೇಕು. ಬಹು ಶಿಸ್ತೀಯ ಅಧ್ಯಯನಕ್ಕೆ ಒತ್ತು ಕೊಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಸೈಬರ್ ಭದ್ರತೆ, ಸ್ಮಾರ್ಟ್ ಸಿಸ್ಟಮ್, ಸುಸ್ಥಿರ ಅಭಿವೃದ್ಧಿ ಸೇರಿ ವಿವಿಧ ವಿಭಾಗಗಳು ಕೈಜೋಡಿಸಿ ಮುಂದೆ ಸಾಗಬೇಕು, ದೇಶದ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಜಂಟಿ ಸಂಶೋಧನಾ ಕೇಂದ್ರಗಳ ಸ್ಥಾಪನೆ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲು ಆದ್ಯತೆ ಕೊಡುವಂತೆ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net