ದಾವಣಗೆರೆ: ಭಗವಾನ್ ಗೌತಮ ಬುದ್ಧರ ಪ್ರತಿಪಾದಿಸಿದ ಧಮ್ಮ ಸಿದ್ಧಾಂತ ಹಾಗೂ ನಿರ್ವಾಣದ ಹಾದಿಗಳು ಅಂತರಂಗದ ಶುದ್ಧೀಕರಣಕ್ಕೆ ಸಹಕಾರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಗೌತಮ ಬುದ್ಧರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧರ ಬೋಧನೆ ಹಾಗೂ ತತ್ವಗಳು ಆಧುನಿಕ ಯುಗಕ್ಕೆ ಪ್ರಸ್ತುತವಾಗಿದ್ದು, ಮನುಕುಲದ ಅಭಿವೃದ್ಧಿಗೆ ದಾರಿದೀಪವಾಗಿವೆ ಎಂದು ಹೇಳಿದರು.
ಕ್ರಿ.ಪೂ. 623ರಲ್ಲಿ ನೇಪಾಳದ ಕಪಿಲವಸ್ತುವಿನ ಸಮೀಪವಿರುವ ಲುಂಬಿನಿ ಎಂಬಲ್ಲಿ ಸಿದ್ಧಾರ್ಥ (ಗೌತಮ ಬುದ್ಧ) ಜನಿಸಿದರೆಂಬುದು ಬೌದ್ಧ ಸಂಪ್ರದಾಯದ ನಂಬಿಕೆ. ಇವರು ಶಾಕ್ಯ ಕುಲದ ರಾಜ ಶುದ್ಧೋದನ ಮತ್ತು ರಾಣಿ ಮಾಯಾದೇವಿಯ ಪುತ್ರರಾಗಿ ಜನಿಸಿದರು. ಬುದ್ಧರು ಇಡೀ ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸಿಕೊಟ್ಟರು. ನನ್ನನ್ನು ದೇವರನ್ನಾಗಿ ಪೂಜಿಸಬೇಡಿ, ಬದಲಾಗಿ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ ಎಂಬ ಅವರ ಸರಳ ಸಂದೇಶ ಜೀವನದ ಪರಮ ಸತ್ಯವನ್ನು ತಿಳಿಸುತ್ತದೆ ಎಂದು ತಿಳಿಸಿದರು.
ಜೀವನದ ಸತ್ಯವನ್ನು ತಿಳಿಯಲು ಪ್ರಪಂಚವು ದುಃಖಮಯವಾಗಿದ್ದು, ಆಸೆಯೇ ದುಃಖಕ್ಕೆ ಮೂಲ ಕಾರಣ. ಆಸೆಯನ್ನು ಗೆದ್ದರೆ ಮಾತ್ರ ದುಃಖವನ್ನು ಹೋಗಲಾಡಿಸಬಹುದು ಹಾಗೂ ದುಃಖ ಮುಕ್ತಿಗೆ ಅಷ್ಟಾಂಗ ಮಾರ್ಗಗಳೇ ದಾರಿ ಎಂಬ ನಾಲ್ಕು ಆರ್ಯ ಸತ್ಯಗಳನ್ನು ಬುದ್ಧರು ಬೋಧಿಸಿದರು. ಇವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯನ ಸ್ವಾರ್ಥ ಹೆಚ್ಚಿದೆ. ಅದನ್ನು ತ್ಯಜಿಸಿ ಅಶಕ್ತರಿಗೆ ಸಹಾಯ ಮಾಡುವುದೇ ಬುದ್ಧರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ. ಆಸೆಯೇ ದುಃಖಕ್ಕೆ ಮೂಲ ಎಂಬ ಬುದ್ಧರ ಸಂದೇಶ ಹಾಗೂ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಗಳು ಒಂದೇ ನಾಣ್ಯದ ಎರಡು ಮುಖಗಳು. ಇಂತಹ ಉದಾತ್ತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಂತಿಯುತ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚನ್ನಣ್ಣ ಬುದ್ಧ ವಂದನೆ ಬೋಧಿಸಿದರು. ಅರಕೆರೆ ರಂಗಣ್ಣ ಬುದ್ಧ ಗೀತೆಗಳನ್ನು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ, ಮುಖಂಡರಾದ ರುದ್ರಮುನಿ, ಹೆಗ್ಗೆರೆ ರಂಗಪ್ಪ, ಅಣ್ಣಪ್ಪ, ಹನುಮಂತಪ್ಪ ಇತರರಿದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಗೌತಮ ಬುದ್ಧರ ಜಯಂತ್ಯುತ್ಸವದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ರವಿಚಂದ್ರ, ಚನ್ನಣ್ಣ, ಅರಕೆರೆ ರಂಗಣ್ಣ, ಡಾ. ಎ.ಬಿ. ರಾಮಚಂದ್ರಪ್ಪ, ಹೆಗ್ಗೆರೆ ರಂಗಪ್ಪ ಇತರರಿದ್ದರು.