ನೀರಿನ ಕಾಮಗಾರಿಯಲ್ಲಿ ಅಕ್ರಮ ಸಹಿಸಲ್ಲ

 ದಾವಣಗೆರೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
ದಾವಣಗೆರೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
Published on

ಪ್ರಮುಖ ಮುಖ್ಯಾಂಶಗಳು

  • ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಎಚ್ಚರಿಕೆ
  • ಕ್ರಿಯಾಯೋಜನೆ ಲೋಪಕ್ಕೆ ಮೂವರಿಗೆ ನೋಟಿಸ್
  • ಎಲ್ಲ ತಾಲೂಕಿಗೆ ಕೋಟಿ ರೂ. ಅನುದಾನ ಹಂಚಿಕೆ
ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ತುರ್ತು ಕಾಮಗಾರಿಗಳ ಅನುಷ್ಠಾನದಲ್ಲಿ ಅಕ್ರಮ ಎಸಗುವ ಅಧಿಕಾರಿ ಸಿಬ್ಬಂದಿ ವರ್ತನೆ ಸಹಿಸುವುದಿಲ್ಲ ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೆ ಸಲ್ಲಿಕೆಯಾದ ಕ್ರಿಯಾಯೋಜನೆಯಲ್ಲಿ ಕಾಮಗಾರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುವ ಮೂವರು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆ ವಿಳಂಬವಾಗಿದ್ದು ನಿರೀಕ್ಷೆಯಂತೆ ವಾಡಿಕೆ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಆಯ್ದ ತಾಲೂಕುಗಳ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಮೂಲಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿವ ನೀರಿನ ಪೂರೈಕೆಯಲ್ಲಿ ಸಂಭಾವ್ಯ ಅಡಚಣೆಯ ಇತ್ಯರ್ಥಕ್ಕಾಗಿ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನೀರಿನ ಸಮಸ್ಯೆಯ ತ್ವರಿತ ಪರಿಹಾರಕ್ಕಾಗಿ ಸರ್ಕಾರ ಬಿಡುಗಡೆಗೊಳಿದ 1 ಕೋಟಿ ಹಣವನ್ನು ಎಲ್ಲಾ ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 75-90 ಲಕ್ಷ ರೂ., ಪರಿಶಿಷ್ಟ ಜಾತಿಗೆ 15-17ಲಕ್ಷ ರೂ., ಪರಿಶಿಷ್ಟ ಜಾತಿಗೆ 6-7 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.
ನೀರಿನ ಸಮಸ್ಯೆ ಉಲ್ಬಣಗೊಂಡ ಗ್ರಾಮಗಳಲ್ಲಿ ನೀರು ಪೂರೈಸಲು ಅಗತ್ಯ ಕಾಮಗಾರಿಗಳ ಕುರಿತು ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದಲ್ಲಿ ಅನುಮೋದನೆ ನೀಡಿ, ಅನುಷ್ಠಾನಕ್ಕೆ ಸೂಚಿಸಲಾಗುವುದು ಎಂದ ಅವರು, 2026-27ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಂದಾಜು 25ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದರು.
ಸರ್ಕಾರದ ವಿವಿಧ ಯೋಜನೆಗಳಡಿ ಕೊರೆಸಲಾದ ಬೋರ್‌ವೆಲ್‌ಗಳಿಗೆ ಬಾಕಿ ಇರುವ ವಿದ್ಯುತ್ ಸಂಪರ್ಕ ಕಲ್ಪಿಸಿ ಸಾರ್ವಜನಿಕರಿಗೆ ನೀರೊದಗಿಸಬೇಕು. ಇಂತಹ ಗ್ರಾಮಗಳಲ್ಲಿ ಖಾಸಗಿಯವರ ಕೊಳವೆಬಾವಿಗಳಿಗೆ ಒಡಂಬಡಿಕೆ ಮಾಡಿಕೊಂಡಿದ್ದಲ್ಲಿ ಅದನ್ನು ರದ್ದುಪಡಿಸುವಂತೆಯೂ ಸೂಚಿಸಿದರು.
ಈಗಾಗಲೆ ಬೇರಾವುದೇ ಯೋಜನೆಯಲ್ಲಿ ನೀರನ್ನು ಒದಗಿಸಲು ಕ್ರಮ ಕೈಗೊಂಡಿದ್ದಲ್ಲಿ ಅಂಥಹವುಗಳನ್ನು ಗುರುತಿಸಿ, ಯೋಜನೆ ಪುನರಾವರ್ತನೆಯಾಗದಂತೆ ಅಗತ್ಯವಿರುವಲ್ಲಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕಾಗಿ ಗ್ರಾಮೀಣ ಜಲಮೂಲಗಳ ಮಾಹಿತಿಯನ್ನು ಹಾಗೂ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸೃಜಿಸಿರುವ ಆಸ್ತಿಗಳ ವಿವರಗಳನ್ನು ದಾಖಲಿಸಿಟ್ಟುಕೊಳ್ಳುವಂತೆ ಸೂಚಿಸಿದರು. ಗ್ರ್ರಾಮಗಳ ಸರ್ಕಾರದ ಕೊಳವೆಬಾವಿಗಳು, ಅವುಗಳಲ್ಲಿ ನೀರಿನ ಲಭ್ಯತೆ, ಸಿಗದಿರುವ ಹಾಗೂ ಬೇಸಿಗೆಯಲ್ಲಿ ಮಾತ್ರ ಇಂಗಿಹೋಗುವ ಕೊಳವೆಬಾವಿಗಳ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಸೂಚಿಸಿದರು.
ಕೆಲವು ಗ್ರಾಮಗಳಲ್ಲಿ ನೀರು ಸರಬರಾಜು ಪೈಪುಗಳು ಸೇರಿ ಹಲವು ಕಡೆಗಳಲ್ಲಿ ದುರಸ್ತಿಗೊಳ್ಳದೆ ನೀರು ವ್ಯರ್ಥವಾಗಿ ಹೋಗುತ್ತಿರುವುದನ್ನು ನಾನು ಕಂಡಿದ್ದೇನೆ. ಕೂಡಲೇ ದುರಸ್ತಿಗೊಳಿಸುವಂತೆ ಸೂಚಿಸಿದರು.
ನೀರನ್ನು ಒದಗಿಸುವ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿವ ನೀರಿನ ಯೋಜನೆಗಳ ಅನುಷ್ಠಾನದಲ್ಲಾದ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ನೀರಿನ ಸಮಸ್ಯೆಗಳನ್ನು ಆಲಿಸಿ, ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಗಳಲ್ಲಿ ನಿಯೋಜಿತ ಅಧಿಕಾರಿ-ಸಿಬ್ಬಂದಿ ಬರುವ ದೂರವಾಣಿ ಕರೆಗಳನ್ನು ಸಕಾಲದಲ್ಲಿ ಸ್ವೀಕರಿಸಿ, ದಾಖಲಿಸಿ, ಅವುಗಳಿಗೆ ಸಕಾಲಿಕ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ನಾಗೇಂದ್ರಪ್ಪ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಸೇರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು-ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net