ಲಿಂಗದೀಕ್ಷೆಯಿಂದ ಅಜ್ಞಾನ ದೂರ: ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀ
ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀಹಾಲಸ್ವಾಮೀಜಿ ಬೃಹನ್ಮಠದಲ್ಲಿ ಬುಧವಾರ ಲಿಂ.ಹಾಲಸ್ವಾಮೀಜಿಯವರ ಪುಣ್ಯಾರಾಧನೆಯ ಮತ್ತು ಧರ್ಮ ಸಭೆಯನ್ನು ತಹಸೀಲ್ದಾರ್ ಎಂ.ಪಿ. ಕವಿರಾಜ್ ಉದ್ಘಾಟಿಸಿದರು. ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ, ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಇತರರು ಇದ್ದರು.
ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಧಾರ್ಮಿಕ ಭಾವನೆಗಳು ಇಳಿಮುಖ
ನ್ಯಾಮತಿ:ಮನುಷ್ಯ ಜನ್ಮದ ಮಾಂಸಪಿಂಡದ ಶರೀರವನ್ನು ಮಂತ್ರಪಿಂಡವಾಗಿ ಪರಿವರ್ತಿಸುವ ಶಿವದೀಕ್ಷಾ ಹಂತವು ಅತ್ಯಂತ ಮಹತ್ವದ್ದಾಗಿದೆ ಎಂದು ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಬುಧವಾರ ಆಯೋಜಿಸಲಾಗಿದ್ದ ಶ್ರೀಮಠದ ಲಿಂ. ಹಾಲಸ್ವಾಮೀಜಿಯವರ ಪುಣ್ಯಾರಾಧನೆ, ಬೇಡ ಜಂಗಮ ವಟುಗಳ ಶಿವದೀಕ್ಷಾ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಲಿಂಗಾಯತರಿಗೆ ಗರ್ಭ ಸಂಸ್ಕಾರ, ಲಿಂಗಧಾರಣೆ ಹಾಗೂ ಲಿಂಗದೀಕ್ಷೆ ಅತಿ ಅಗತ್ಯವಾದ ಪ್ರಕ್ರಿಯೆ. ಆದರೆ ಅನೇಕರು ಇದನ್ನು ಪಾಲಿಸುತ್ತಿಲ್ಲ.
ಗರ್ಭದಲ್ಲಿರುವ 8 ತಿಂಗಳ ಮಗುವಿಗೆ ಗರ್ಭ ಸಂಸ್ಕಾರ ಮಾಡಬೇಕು. ಇದು ಇಷ್ಟಲಿಂಗ ನೀಡುವ ಪದ್ಧತಿಯಾಗಿದೆ. ಮಗು ಹುಟ್ಟಿದ ನಂತರ ಲಿಂಗಧಾರಣೆ ಮಾಡುವುದರೊಂದಿಗೆ ನಾಮಕರಣ ಮಾಡುವುದು ವೀರಶೈವ ಲಿಂಗಾಯತರಲ್ಲಿ ಪರಂಪರೆಯಾಗಿ ಬಂದಿದೆ ಎಂದರು.
ತಹಸೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಜನ ಸಮುದಾಯದಲ್ಲಿ ಧಾರ್ಮಿಕ ಭಾವನೆಗಳು ಇಳಿಮುಖವಾದಂತೆ ತೋರುತ್ತಿದೆ.
ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನಸಮುದಾಯದ ಸಹಭಾಗಿತ್ವ ಕಡಿಮೆ ಆಗುತ್ತಿದೆ. ಆಧ್ಯಾತ್ಮಿಕ ವಿಚಾರಗಳನ್ನು ತಿಳಿಯಲು ಹಬ್ಬ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಹಾಲಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ, ಕುಂಕೋವ ಚರಂತಮಠದ ರುದ್ರಸ್ವಾಮೀಜಿ, ಹೊನ್ನಾಳಿ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ಅಧ್ಯಕ್ಷ ಭೈರನಹಳ್ಳಿ ಪಂಚಾಕ್ಷರಯ್ಯ, ಸಿದ್ದೇಶ್ವರ ಎಂ.ಆರ್, ಮಧು ಮಾತನಾಡಿದರು.
ವೇದಿಕೆಯಲ್ಲಿ ಕತ್ತಿಗೆ ಮಠದ ಚನ್ನಪ್ಪ ಸ್ವಾಮೀಜಿ, ಅರಕೆರೆ ವಿರಕ್ತಮಠದ ಚನ್ನವೀರ ಸ್ವಾಮೀಜಿ, ದಿಡಗೂರು ಅಣ್ಣಪ್ಪ ಸ್ವಾಮೀಜಿ ಇತರರು ಇದ್ದರು.