ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರಂಗದಂಗಳದಲ್ಲಿ ತಿಂಗಳ ಪ್ರತಿಭೆ’ ಸಂವಾದದಲ್ಲಿ ಹಿರಿಯ ನಾಟಕಕಾರ ರಾಜಣ್ಣ ಜೇವರ್ಗಿ, ಚಿಂದೋಡಿ ಚಂದ್ರಧರ, ಎ. ಭದ್ರಪ್ಪ, ಬಸವರಾಜ ಐರಣಿ, ಎನ್.ಎಸ್. ರಾಜು, ರವಿಚಂದ್ರ, ನಾಗರಾಜ್ ಕುಡುಪಲಿ ಇತರರಿದ್ದರು.
ದಾವಣಗೆರೆ: ವೃತ್ತಿ ರಂಗಭೂಮಿ ಹಾಗೂ ಅಲ್ಲಿನ ಕಲಾವಿದರನ್ನು ತುಳಿಯಬೇಕು ಎನ್ನುವವರು ಬಹಳಷ್ಟು ಜನರಿದ್ದಾರೆ. ನಾವು ಒಗ್ಗಟ್ಟಾಗದೆ ಹೋದರೆ ಅವರು ತುಳಿಯುವುದು ಗ್ಯಾರಂಟಿ ಎಂದು ಹಿರಿಯ ನಾಟಕಕಾರ, ನಿರ್ದೇಶಕ ರಾಜಣ್ಣ ಜೇವರ್ಗಿ ಕಳವಳ ವ್ಯಕ್ತಪಡಿಸಿದರು.
ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರಂಗದಂಗಳದಲ್ಲಿ ತಿಂಗಳ ಪ್ರತಿಭೆ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ರಂಗಭೂಮಿ ಶ್ರೀಮಂತವಾಗಿದೆ, ಇದಕ್ಕೆ ರಂಗಮಂದಿರಗಳೂ ಕಾರಣ. ಅಲ್ಲಿ ಪ್ರತಿ ತಾಲೂಕಿನಲ್ಲೂ 2-3 ನಾಟಕ ಥಿಯೇಟರ್‌ಗಳಿವೆ ಎಂದ ಅವರು, ನಾವಿಂದು ಜಾತ್ರೆಗಳಲ್ಲಿ ನಾಟಕ ಪ್ರದರ್ಶಿಸುವ ಸಂದರ್ಭದಲ್ಲಿ ‘ನಮ್ಮ ನಾಟಕದಲ್ಲಿ ಅಶ್ಲೀಲ ಇಲ್ಲ’ ಎಂದು ಮೈಕ್ ಹಚ್ಚಿ ಹೇಳುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು.
ಎಲ್ಲ ವೃತ್ತಿಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇವೆ. ವೃತ್ತಿ ರಂಗಭೂಮಿ ಎಂದರೆ ಬರೀ ಡಬಲ್ ಮೀನಿಂಗ್, ಅಶ್ಲೀಲತೆ ಹೆಚ್ಚು ಎಂದು ಸಾರಾಸಗಟಾಗಿ ನಿಂದಿಸುವುದು ಸರಿಯಲ್ಲ. ನಾಟಕ ಜನರನ್ನು ರಂಜಿಸಬೇಕು, ಖುಷಿ ನೀಡಬೇಕು. ಅದರ ಜತೆಗೆ ಹೆಣ್ಣುಮಕ್ಕಳು ತಲೆ ತಗ್ಗಿಸದೆ ತಲೆ ಎತ್ತಿ ನೋಡುವಂತೆಯೂ ಆಗಬೇಕು ಎಂದರು.
90ರ ದಶಕದಲ್ಲಿ ನಾಟಕ, ಸಿನಿಮಾ ಎರಡರಲ್ಲೂ ಡಬಲ್ ಮೀನಿಂಗ್ ಶುರುವಾಯಿತು. ಆದರೆ ಇಂದು ಮೊಬೈಲ್ ಇರುವಾಗ ದ್ವಂದಾರ್ಥದ ಸಂಭಾಷಣೆ ಬೇಕಿಲ್ಲ. ಯಾವ ಕಲಾವಿದರಲ್ಲಿ ಶಕ್ತಿ ಇಲ್ಲವೋ, ಒಳ್ಳೆಯ ನಿರ್ದೇಶಕರು ಸಿಗದೇ ಹೋದಾಗ ದ್ವಂದಾರ್ಥದ ಮಾತುಗಳನ್ನೇ ಹೆಚ್ಚು ಬಳಸುತ್ತಾರೆ. ಇದನ್ನೇ ನಂಬಿದ ನಾಟಕ ಕಂಪನಿಗಳ ಬಹಳದಿನ ಉಳಿಯುವುದಿಲ್ಲ. ಅಂಥಹ ಕಲಾವಿದರಿಗೆ ಹೆಸರೂ ಬರುವುದಿಲ್ಲ ಎಂದು ಹೇಳಿದರು.
ಮೈಸೂರು ರಂಗಾಯಣ ಮಾದರಿಯಲ್ಲೇ ವೃತ್ತಿ ರಂಗಭೂಮಿ ಬೆಳೆಸುವ ಆಶಯದಿಂದ ವೃತ್ತಿ ರಂಗಾಯಣ ತರಲಾಯಿತು. ಆದರೆ ವೃತ್ತಿ ನಾಟಕಗಳ ಬೆಳವಣಿಗೆ ಅದು ಪೂರಕವಾಗಿ ಕೆಲಸ ಮಾಡುತ್ತಿಲ್ಲ. ಕಂಪನಿ ಮಾಲೀಕರು-ಕಲಾವಿದರಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಸುಮ್ಮನಿದ್ದೇವೆ. ವೃತ್ತಿ ರಂಗಭೂಮಿಯಲ್ಲಿ ಅನುಭವ ಇದ್ದವರೇ ನಿರ್ದೇಶಕರಾಗಿ ಬರಬೇಕು. ಇಲ್ಲವೇ ಅಕಾಡೆಮಿಗೆ ಬರಬೇಕು. ಆಗ ಒಂದಷ್ಟು ಕೆಲಸ ಆಗಬಹುದು ಎಂದೂ ಅನಿಸಿಕೆ ಹಂಚಿಕೊಂಡರು.
ವೃತ್ತಿ ನಾಟಕ ಕಂಪನಿಗಳಿಗೇಕೆ ಅನುದಾನ ನೀಡಬೇಕು ಎಂದು ರಾಜಪ್ಪ ದಳವಾಯಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಕರೆ ಮಾಡಿ ಅವರ ಹೇಳಿಕೆ ವಿರೋಧಿಸಿದ್ದೆ. ಕಳೆದ 3-4 ವರ್ಷದಿಂದ ನಾಟಕ ಕಂಪನಿಗಳ ವೆಚ್ಚ ಮತ್ತು ಕಲೆಕ್ಷನ್ ಎರಡೂ ಸರಿದೂಗುತ್ತಿಲ್ಲ. ಹೀಗಾಗಿ ಅವು ಸುಧಾರಿಸಿಕೊಳ್ಳಲಾದರೂ ಅನುದಾನ ಬೇಕು ಎಂದು ಪ್ರತಿಪಾದನೆ ಮಾಡಿದರು.
ವೃತ್ತಿ ನಾಟಕ ಕಂಪನಿಗಳು ಮತ್ತೊಂದೆಡೆ ಸ್ಥಳಾಂತರ ಮಾಡಿ ನಾಟಕ ಪ್ರದರ್ಶಿಸಲು ಇಂದು 3ರಿಂದ 5 ಲಕ್ಷ ರೂ. ವೆಚ್ಚವಾಗಲಿದೆ. ಹೀಗಾಗಿ ಕೆಲವರು ಕಂಪನಿಯನ್ನು ಇತರರಿಗೆ ಕೊಡುವವರಿದ್ದಾರೆ. ಯುವಕರ ಮೇಲೆ ವಿಶ್ವಾಸವಿಟ್ಟು ಅದನ್ನು ನೀಡುವುದೂ ತಪ್ಪಲ್ಲ ಎಂದೂ ಹೇಳಿದರು.
ಗಟ್ಟಿನಾಟಕ ನೀಡಿದರೆ ಜನರು ಕೈಹಿಡಿಯುತ್ತಾರೆ. ಗಳಿಸಿದ್ದನ್ನು ಉಳಿಸಬೇಕು. ಮತ್ತೊಬ್ಬರ ಬಳಿ ಕೈಚಾಚದೆ ಸ್ವಾಭಿಮಾನದಿಂದ ಬದುಕಬೇಕು. ರಂಗಭೂಮಿ ಕಲಾವಿದರು ರಾಜಕೀಯ ಮಾಡುವುದನ್ನು ಬಿಡಬೇಕು. ನಮ್ಮೊಳಗೆ ಯಾರಾದರೂ ಬೆಳೆದಾಗ ಹೊಟ್ಟೆಉರಿದುಕೊಳ್ಳುವುದನ್ನೂ ಬಿಡಬೇಕು. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಕೆಲ ಕಲಾವಿದರು ಉತ್ತಮವಾಗಿದ್ದಾರೆ. ಅವರ ಮಕ್ಕಳನ್ನು 2 ಲಕ್ಷ ರೂ.ವರೆಗೆ ಶುಲ್ಕ ಕಟ್ಟಿ ಓದಿಸುತ್ತಿದ್ದಾರೆ. ಇಷ್ಟಿದ್ದೂ ಕಲಾವಿದರು ಯಾಕೆ ಅಳಬೇಕು? ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಾಪೋಷಕ ಚಿಂದೋಡಿ ಚಂದ್ರಧರ, ಚಿಂದೋಡಿಲೀಲಾ ಟ್ರಸ್ಟ್ ವತಿಯಿಂದ ಪ್ರತಿ ತಿಂಗಳ ಮೊದಲ ಭಾನುವಾರದಂತೆ ನಿರಂತರವಾಗಿ ನಾಟಕ ಪ್ರದರ್ಶನಗಳನ್ನು ನಡೆಸುವ ಅಭಿಲಾಷೆ ಇದೆ. ಕಲಾವಿದರ ಸಂಘಟನೆಗಳು ಒಂದೇ ವೇದಿಕೆಗೆ ಬರಬೇಕು
ಕಲಾಪೋಷಕ ಚಿಂದೋಡಿ ಚಂದ್ರಧರ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಮಾಜಿ ಅಧ್ಯಕ್ಷ ಎ. ಭದ್ರಪ್ಪ ಮಾತನಾಡಿ ನಾಟಕ ಪ್ರದರ್ಶನಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡುವ ಸಹಾಯಧನ ಹೆಚ್ಚಿಸಬೇಕು ಎಂದರು.
ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ ಅಧ್ಯಕ್ಷ ಎನ್.ಎಸ್. ರಾಜು ಮಾತನಾಡಿ ಸಂಗೀತ ಪ್ರದರ್ಶನಕ್ಕೆ 50 ಸಾವಿರ ರೂ, ಪೌರಾಣಿಕ ನಾಟಕಕ್ಕೆ 1 ಲಕ್ಷ ರೂ., ಸಾಮಾಜಿಕ ನಾಟಕಕ್ಕೆ 75 ಸಾವಿರ ರೂ. ಅನುದಾನ ನೀಡುವಂತೆ ರಂಗ ಸಂಘಟಕರ ಸಮಾವೇಶದಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಮಹೇಶ್ವರಪ್ಪ ದೊಡ್ಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನಿವೃತ್ತ ಬ್ಯಾಂಕ್ ನೌಕರ ಎ.ಕೊಟ್ರಪ್ಪ ಕಿತ್ತೂರು, ವಕೀಲ ನಾಗರಾಜ್ ಕುಡುಪಲಿ, ಹಿರಿಯ ಪತ್ರಕರ್ತ ಬಸವರಾಜ ಐರಣಿ, ತಿಪ್ಪೇಶರಾವ್ ಚವ್ಹಾಣ್, ಕೆ.ಎಸ್.ಕೊಟ್ರೇಶ್ ಇತರರಿದ್ದರು.
ಚಿಂದೋಡಿಲೀಲಾ ಟ್ರಸ್ಟ್ ವತಿಯಿಂದ ಪ್ರತಿ ತಿಂಗಳ ಮೊದಲ ಭಾನುವಾರದಂತೆ ನಿರಂತರವಾಗಿ ನಾಟಕ ಪ್ರದರ್ಶನಗಳನ್ನು ನಡೆಸುವ ಅಭಿಲಾಷೆ ಇದೆ. ವೃತ್ತಿ ರಂಗಭೂಮಿ ಕಲಾವಿದರ ಸಂಘಟನೆಗಳು ಒಂದೇ ವೇದಿಕೆ ಅಡಿಯಲ್ಲಿ ಒಗ್ಗೂಡಬೇಕು.