ಭೂಮಿಯಲ್ಲಿ ಹದವಾದ ತೇವಾಂಶವಿದ್ದರೆ ಬಿತ್ತನೆಗೆ ಮುಂದಾಗಿ

 ಮಾಯಕೊಂಡ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ವೀಕ್ಷಿಸುತ್ತಿರುವ ಎಡಿಎ ಡಿ.ಎಂ. ಶ್ರೀಧರಮೂರ್ತಿ. sowing
ಮಾಯಕೊಂಡ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ವೀಕ್ಷಿಸುತ್ತಿರುವ ಎಡಿಎ ಡಿ.ಎಂ. ಶ್ರೀಧರಮೂರ್ತಿ. sowing
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಎಡಿಎ ಶ್ರೀಧರಮೂರ್ತಿ ಸಲಹೆ
  • ಮಾಯಕೊಂಡ ಹೋಬಳಿಯ ಜಮೀನುಗಳಿಗೆ ಭೇಟಿ
ಮಾಯಕೊಂಡ: ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಹಾಗೂ ಅಣಜಿ ಹೋಬಳಿಗಳ ಹಲವು ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ತುಂತುರು ಮಳೆಯಾಗುತ್ತಿದೆ. ಬೀಜ ಮೊಳಕೆಯೊಡೆದು ಬರುವಷ್ಟು ಹದವಾದ ತೇವಾಂಶವಿದ್ದರೆ ಮಾತ್ರ ಮುಂಗಾರು ಹಂಗಾಮಿನ ಮೆಕ್ಕೆಜೋಳ ಹಾಗೂ ರಾಗಿ ಬಿತ್ತನೆ ಮಾಡಿ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ರೈತರಿಗೆ ಸಲಹೆ ನೀಡಿದರು.
ಮಾಯಕೊಂಡ ಹೋಬಳಿಯ ಹಲವು ಗ್ರಾಮಗಳ ಜಮೀನುಗಳಿಗೆ ಬುಧವಾರ ಭೇಟಿ ನೀಡಿ, ಮೆಕ್ಕೆಜೋಳ ಮತ್ತು ರಾಗಿ ಬಿತ್ತನೆ ಕಾರ್ಯವನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.
ಸಾಮಾನ್ಯವಾಗಿ ಮೇ ಕೊನೆಯ ವಾರ ಹಾಗೂ ಜೂನ್ ಮೊದಲ ವಾರದಲ್ಲಿ ಬಿತ್ತನೆ ಆರಂಭಗೊಂಡು ಜೂನ್ ಅಂತ್ಯಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ರೋಹಿಣಿ ಮಳೆಯು ತಾಲೂಕಿನ ಯಾವ ಗ್ರಾಮಗಳಲ್ಲೂ ಉತ್ತಮವಾಗಿ ಸುರಿಯಲಿಲ್ಲ.
ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ದಿನದ ಕೆಲವು ಸಮಯ ಮಾತ್ರ ತುಂತುರು ಮಳೆಯಾಗುತ್ತಿದೆ. ಬಿತ್ತನೆಗೆ ಭೂಮಿ ಇನ್ನೂ ಸಂಪೂರ್ಣ ಹದಗೊಳ್ಳದಿದ್ದರೂ, ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೆಕ್ಕೆಜೋಳ ಬಿತ್ತನೆ ಕಡಿಮೆ ಮಾಡಿ, ರಾಗಿ, ಸಿರಿಧಾನ್ಯ, ಹಣ್ಣು ಹಾಗೂ ತರಕಾರಿ ಬೆಳೆಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬೇಕು ಎಂದರು.
ಆನಗೋಡು ಹೋಬಳಿಯಲ್ಲಿ 18 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿ ಇದ್ದು, ಪ್ರಸಕ್ತ ವರ್ಷ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಪ್ರಸ್ತುತ ಬೀಳುತ್ತಿರುವ ಮಳೆಗೆ ಮತ್ತೆ ರಾಗಿ, ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದಾರೆ ಎಂದು ಆನಗೋಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀನಿವಾಸ್ ಹೇಳಿದರು.
ಮಾಯಕೊಂಡ ಹೋಬಳಿಯಲ್ಲಿ 8 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದ್ದು, ಇದರಲ್ಲಿ ಮುಂಗಾರು ಹಂಗಾಮಿಗೆ ಈವರೆಗೆ ಕೇವಲ 2.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವಾರದಿಂದ ಹೋಬಳಿಯಲ್ಲಿ ಮಳೆ ಬೀಳುತ್ತಿರುವುದರಿಂದ ರೈತರು ಬಿತ್ತನೆ ಚುರುಕುಗೊಳಿಸಿದ್ದಾರೆ ಎಂದು ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಬೀರಪ್ಪ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net