ಶಿಬಿರ ಯಶಸ್ವಿಯಾದರೆ ಒಂದು ಕುಟುಂಬದ ಕಣ್ಣೀರು ಒರೆಸಿದಂತೆ Camp

ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಉದ್ಘಾಟನೆಯಲ್ಲಿ ಶಿವಕುಮಾರ್,ನಾಗರಾಜ್ ಕುಲಾಲ್, ಎಂ. ಲಕ್ಷ್ಮಣ್, ಹೊಸಕೇರಿ ಸುರೇಶ್ ಇತರರಿದ್ದರು.Camp
ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಉದ್ಘಾಟನೆಯಲ್ಲಿ ಶಿವಕುಮಾರ್,ನಾಗರಾಜ್ ಕುಲಾಲ್, ಎಂ. ಲಕ್ಷ್ಮಣ್, ಹೊಸಕೇರಿ ಸುರೇಶ್ ಇತರರಿದ್ದರು.Camp
Published on

ಪ್ರಮುಖ ಮುಖ್ಯಾಂಶಗಳು

  • ಯೋಜನಾಧಿಕಾರಿ ನಾಗರಾಜ್ ಕುಲಾಲ್ ಅಭಿಪ್ರಾಯ
  • 2075ನೇ ಮದ್ಯವರ್ಜನ ಶಿಬಿರ
ಹೊನ್ನಾಳಿ: ಒಂದು ವಾರದ ಮದ್ಯವರ್ಜನ ಶಿಬಿರವು ಯಶಸ್ವಿಯಾದರೆ, ಅದು ಕೇವಲ ಒಬ್ಬ ವ್ಯಕ್ತಿಯ ಬದಲಾವಣೆಯಲ್ಲ, ಬದಲಿಗೆ ಆತನ ಇಡೀ ಕುಟುಂಬ ಹಾಗೂ ತಾಯಂದಿರ ಕಣ್ಣೀರನ್ನು ಒರೆಸಿ ಹೊಸ ಬದುಕು ಕಟ್ಟಿಕೊಟ್ಟಂತೆ ಎಂದು ಶಿಬಿರದ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಹೇಳಿದರು. Camp
ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಸವಾಪಟ್ಟಣ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ದಾವಣಗೆರೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕುಂದೂರು ಹಾಗೂ ನವಜೀವನ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2075ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.
ಮದ್ಯಪಾನವು ಕೇವಲ ವ್ಯಕ್ತಿಯನ್ನಷ್ಟೇ ಅಲ್ಲದೆ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಜಗತ್ತಿನ ಯಾವುದೇ ಧರ್ಮವೂ ಮದ್ಯ ಸೇವನೆಯನ್ನು ಬೆಂಬಲಿಸುವುದಿಲ್ಲ ಎಂದ ಅವರು, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಇಡೀ ರಾಜ್ಯಾದ್ಯಂತ ನಡೆಯುತ್ತಿರುವ ಈ ಜನಕಲ್ಯಾಣ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹೊಸಕೇರಿ ಸುರೇಶ್ ಮಾತನಾಡಿ, ನಾವು ಸಾಲಸೋಲ ಮಾಡಿಯಾದರೂ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಆದರೆ, ದಿನವೂ ಕುಡಿದು ಇಡೀ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ವ್ಯಸನಮುಕ್ತಗೊಳಿಸಲು ನಿಮ್ಮೂರಿಗೆ ಶಿಬಿರ ಬಂದಿದೆ ಎಂದರೆ, ಇಡೀ ಗ್ರಾಮಸ್ಥರು ಇದನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದರು. ಆಂಜನೇಯಸ್ವಾಮಿ ದೇವಸ್ಥಾನದ ಧರ್ಮದರ್ಶಿ ಶಿವಕುಮಾರ್ ಮಾತನಾಡಿ, ಪೂಜ್ಯ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಪ್ಪೇಶಪ್ಪ, ಜನಜಾಗೃತಿ ವೇದಿಕೆ ಅಧ್ಯಕ್ಷ ಚಂದ್ರಣ್ಣ, ಮುಖಂಡರಾದ ಅನಿಲ್, ಮಂಜುನಾಥ್, ದೇವರಾಜ್ ನೆಲಹೊನ್ನೆ, ಜಗದೀಶ್ ಯಕ್ಕನಹಳ್ಳಿ ಹಾಗೂ ಮುಖ್ಯಪೇದೆ ರಾಜಣ್ಣ ಮಾತನಾಡಿದರು. ಕ್ಷೇತ್ರ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ, ಬಿ.ಎಲ್. ಕುಮಾರಸ್ವಾಮಿ, ಸರಳಿನ ಮಂಜಪ್ಪ, ಕತ್ತಿಗೆ ನಾಗರಾಜ್, ರುದ್ರೇಶ್, ಜಿಗಳಿ ಪ್ರಕಾಶ್, ಮಂಜುನಾಥ್, ಅಣಬೇರು ಮಂಜಣ್ಣ ಇತರರಿದ್ದರು.

ಔಷಧವಿಲ್ಲದೆ ವ್ಯಕ್ತಿತ್ವ ಪರಿವರ್ತನೆ

ಮದ್ಯ ಸೇವನೆಯು ಒಂದು ದುಶ್ಚಟವಾಗಿದ್ದು, ಇದು ಮನುಷ್ಯನ ಬದುಕನ್ನು ಸರ್ವನಾಶ ಮಾಡುತ್ತದೆ. ಅಂತಹ ವ್ಯಸನಿಗಳನ್ನು ದಾಸ್ಯದಿಂದ ಮುಕ್ತಗೊಳಿಸಲು ಈ ಶಿಬಿರ ಅತ್ಯಂತ ಉಪಯುಕ್ತವಾಗಿದೆ. ಇಲ್ಲಿ ಯಾವುದೇ ಔಷಧ ನೀಡದೆ ಕೇವಲ ಯೋಗ, ಧ್ಯಾನ, ಪ್ರಾಣಾಯಾಮ, ಭಜನೆ ಹಾಗೂ ತಜ್ಞರಿಂದ ಕೌನ್ಸಲಿಂಗ್ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಪಾನಮುಕ್ತರನ್ನಾಗಿ ಮಾಡಲಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ. ಲಕ್ಷ್ಮಣ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net