ಪ್ರತಿ ಮಗುವೂ ಶಿಕ್ಷಣ ಪಡೆದರೆ ದೇಶದ ಅಭಿವೃದ್ಧಿ

ಮಾಯಕೊಂಡ ಹೋಬಳಿ ದಿಂಡದಹಳ್ಳಿ ಗ್ರಾಮದಲ್ಲಿ ಸಂಸದರ ಅನುದಾನದಡಿ ನಿರ್ಮಾಣಗೊಂಡಿರುವ ಶಾಲಾ ನೂತನ ಕೊಠಡಿಯನ್ನು ಶುಕ್ರವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಬಿ.ಟಿ. ಹನುಮಂತಪ್ಪ, ಡಾ. ಪುಷ್ಪಲತಾ, ನಿರಂಜನ, ಬಸಮ್ಮ ಇತರರಿದ್ದರು.Education
ಮಾಯಕೊಂಡ ಹೋಬಳಿ ದಿಂಡದಹಳ್ಳಿ ಗ್ರಾಮದಲ್ಲಿ ಸಂಸದರ ಅನುದಾನದಡಿ ನಿರ್ಮಾಣಗೊಂಡಿರುವ ಶಾಲಾ ನೂತನ ಕೊಠಡಿಯನ್ನು ಶುಕ್ರವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಬಿ.ಟಿ. ಹನುಮಂತಪ್ಪ, ಡಾ. ಪುಷ್ಪಲತಾ, ನಿರಂಜನ, ಬಸಮ್ಮ ಇತರರಿದ್ದರು.Education
Published on

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ದಿಂಡದಹಳ್ಳಿ ಗ್ರಾಮದ ಶಾಲಾ ಕೊಠಡಿ ಉದ್ಘಾಟನೆ
ಮಾಯಕೊಂಡ: ಪ್ರತಿ ಮಗುವೂ ಉತ್ತಮ ಶಿಕ್ಷಣ ಪಡೆಯಬೇಕು. ಅವರು ವಿದ್ಯಾವಂತರಾದರೆ ಮಾತ್ರ ದೇಶದ ಅಭಿವೃದ್ಧಿ ನಿಶ್ಚಿತ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಹೋಬಳಿಯ ದಿಂಡದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಸದರ ಅನುದಾನದಡಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮನೆಗಳಲ್ಲಿ ಎಷ್ಟೇ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಕರು ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ ಮಕ್ಕಳಲ್ಲಿ ಅಡಗಿರುವ ಸಂಗೀತ, ಕಲೆ, ಕ್ರೀಡೆಯಂತಹ ಪಠ್ಯೇತರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳು ಚನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಸೇರಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ನಾನು ಸಂಸದೆಯಾಗಿ ಎರಡು ವರ್ಷ ಪೂರೈಸಿದ್ದು, ಮೊದಲ ವರ್ಷದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ 85 ಲಕ್ಷ ರೂ. ಹಾಗೂ ಎರಡನೇ ವರ್ಷದಲ್ಲಿ 86 ಲಕ್ಷ ರೂ. ಅನುದಾನ ನೀಡಿದ್ದೇನೆ. ಜಿಲ್ಲೆಯಲ್ಲಿ ಮಾಯಕೊಂಡ ಮತ್ತು ಹರಿಹರ ಕ್ಷೇತ್ರಗಳಿಗೆ ಅತಿ ಹೆಚ್ಚು ಅನುದಾನ ನೀಡಲಾಗಿದ್ದು, ಇದರ ಸದ್ಬಳಕೆಯಾಗಬೇಕು ಎಂದರು. ಸಾರ್ವಜನಿಕ ಕಾಮಗಾರಿಗಳ ಕುರಿತು ಅಧಿಕಾರಿಗಳು ಸ್ಪಷ್ಟವಾಗಿ ನಾಮಫಲಕ ಅಳವಡಿಸಬೇಕು. ಯಾವ ಉದ್ದೇಶಕ್ಕೆ ಅನುದಾನ ನೀಡಲಾಗಿದೆಯೋ ಅದೇ ಕಾಮಗಾರಿ ನಡೆಯಬೇಕು, ಅದನ್ನು ಬದಲಾಯಿಸಲು ಒತ್ತಾಯಿಸಬಾರದು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲವಾಗಿದ್ದು, ರೈತರು ಕಡಿಮೆ ತೇವಾಂಶದಲ್ಲಿ ಬೆಳೆಯುವ ಸೂರ್ಯಕಾಂತಿ, ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಗಳಿಸಬೇಕು ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆ ಸೇರಿ ಹಲವು ರಾಜ್ಯಗಳ ಸಂಸದರು ಮೆಚ್ಚಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಇದುವರೆಗೆ 74,650 ಕೋಟಿ ರೂ. ಬಿಡುಗಡೆಯಾಗಿದ್ದು, ಪ್ರತಿ ಮಹಿಳೆಯ ಖಾತೆಗೆ ನೇರವಾಗಿ 62,000 ರೂ. ಜಮೆಯಾಗಿದೆ ಎಂದರು. ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಟಿ. ಹನುಮಂತಪ್ಪ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಜಿಲ್ಲಾದ್ಯಂತ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಯುವ ಮುಖಂಡ ಆರ್. ಮಂಜುನಾಥ್ ಮಾತನಾಡಿ, ಸಂಸದರ 15 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣಗೊಂಡಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು. ದಕ್ಷಿಣ ವಲಯ ಬಿಇಒ ಡಾ. ಪುಷ್ಪಲತಾ, ಎಸ್‌ಡಿಎಂಸಿ ಅಧ್ಯಕ್ಷ ನಿರಂಜನ, ಮುಖ್ಯಶಿಕ್ಷಕಿ ಬಸಮ್ಮ, ಸಿಆರ್‌ಪಿ ಪ್ರದೀಪ್, ಮಾಯಕೊಂಡ ಎಸ್.ಜಿ. ರುದ್ರೇಶ್, ಗ್ರಾಪಂ ಮಾಜಿ ಸದಸ್ಯೆ ನಳಿನಾ, ಪದ್ಮಾವತಿ, ಕೆಂಚಮ್ಮ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ

ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದನ್ನು ಪ್ರಸ್ತಾಪಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ದೇಶದಲ್ಲಿ 28 ಏಮ್ಸ್ ಆರೋಗ್ಯ ಸಂಸ್ಥೆಗಳಿದ್ದರೂ ಕರ್ನಾಟಕದಲ್ಲಿ ಒಂದೂ ಇಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕದ ಭಾಗವಾದ ರಾಯಚೂರಿನಲ್ಲಿ ಏಮ್ಸ್ ವಿಭಾಗವನ್ನು ತೆರೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿರುವುದಾಗಿ ತಿಳಿಸಿದರು.
"

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ಬಿಲ್ ಜಾರಿಗೊಳಿಸಲು ಸಂಸತ್ತಿನಲ್ಲಿ ಸಂಸದರ ಕೊರತೆಯಿಂದ ಎನ್‌ಡಿಎ ಸರ್ಕಾರ ಸೋತಿದೆ. ಕಾಂಗ್ರೆಸ್ ಪಕ್ಷವು ಕ್ಷೇತ್ರ ಮರುವಿಂಗಡಣೆ ಬಿಲ್ ಅನ್ನು ವಿರೋಧಿಸುತ್ತದೆ. ಕೇಂದ್ರವು ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣದಲ್ಲಿ ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ.

— ಪ್ರಭಾ ಮಲ್ಲಿಕಾರ್ಜುನ್ ಸಂಸದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net