ಹೊನ್ನಾಳಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕರೆ ನೀಡಿದ್ದ ಹೊನ್ನಾಳಿ- ನ್ಯಾಮತಿ ಬಂದ್ ವೇಳೆ ಶಾಸಕ ಡಿ.ಜಿ.ಶಾಂತನಗೌಡ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆಗೂಡಿ ಏಕಾಏಕಿ ನಮ್ಮ ಮೇಲೆ ಹಲ್ಲೆ ಮಾಡುವ ಜತೆಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಪಾದಿಸಿದ್ದಾರೆ.
ಶಾಸಕರಿಗೆ ಹೊಡೆದಾಡಲು ತಾಕತ್ತಿಲ್ಲ, ಅದಕ್ಕಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಕರೆದುಕೊಂಡು ಬಂದಿದ್ದರು. ತಾಕತ್ತಿದ್ದರೆ ಅವರೇ ಹೊಡೆದಾಡಬಹುದಿತ್ತು. ಇಲ್ಲಿಯವರೆಗೂ ನಾನು ಸಾಮರಸ್ಯದಿಂದ ಇದ್ದೆ. ಇನ್ನು ಮುಂದೆ ನಮ್ಮದು ಸಂಘರ್ಷದ ರಾಜಕಾರಣ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾವು ಕರೆ ನೀಡಿದ್ದ ಬಂದ್ ವಿರುದ್ಧ ಶಾಸಕ ಶಾಂತನಗೌಡ ಅವರಿಗೆ ಆಕ್ಷೇಪಗಳಿದ್ದರೆ ಅವರು ಪೊಲೀಸರಿಗೆ ಹೇಳಿ ನಮ್ಮನ್ನು ಬಂಧಿಸಲು ಸೂಚಿಸಬಹುದಿತ್ತು. ಅದನ್ನು ಬಿಟ್ಟು ಮಧ್ಯಪ್ರವೇಶ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು. ಒಬ್ಬ ಶಾಸಕರಾಗಿ ನಿಮ್ಮ ನಡವಳಿಕೆ ಹೇಗಿರಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಎಂದರು.
ನನ್ನ ಮೇಲೆ ಕಮಿಷನ್ ಆರೋಪ ಮಾಡುವ ಶಾಸಕರು,ಕಮಿಷನ್ ತೆಗೆದುಕೊಳ್ಳಲು ಯಾರ‌್ಯಾರನ್ನು ಬಿಟ್ಟಿದ್ದಾರೆ ಎಂಬುದನ್ನು ತೋರಿಸಲೇ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.
ನನ್ನ ವಿರುದ್ಧ ದೂರು ನೀಡುವುದಾಗಲೀ.,ನನ್ನನ್ನು ಹೆದರಿಸುವ ಪ್ರಯತ್ನಗಳಿಗಾಗಲೀ ನಾನು ಹಿಂದಡಿ ಇಡುವುದಿಲ್ಲ. ರಾಜಕೀಯ ಜೀವನದಲ್ಲಿ ಅನೇಕ
ಹೋರಾಟಗಳನ್ನು ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ನೂರಾರು ಪ್ರಕರಣಗಳನ್ನು ದಾಖಲಿಸಿದೆ. ಅದಕ್ಕೆಲ್ಲ ಹೆದರುವ ಮಾತೆ ಇಲ್ಲ ಎಂದರು.
ಬಿಜೆಪಿ ಮುಖಂಡ ಎಂ.ಎಸ್. ಫಾಲಾಕ್ಷಪ್ಪ ಮಾತನಾಡಿ, ನಮ್ಮ ಮೇಲೆ ಹಲ್ಲೆ ಮಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರನ್ನು ಬಂಧಿಸುವ ಜತೆಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮೆಕ್ಕೆಜೋಳ,ಭತ್ತಕ್ಕೆ ಬೆಂಬಲ ಬೆಲೆ ನೀಡುವ ಬಗ್ಗೆ ಶಾಸಕರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಬಳಿ ಚರ್ಚಿಸಿಯೇ ಇಲ್ಲ. ಹಾಗಿದ್ದೂ ತಾಲೂಕಿನ ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಹರಿಹಾಯ್ದರು.
ಬಿಜೆಪಿ ತಾಲೂಕಾಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಪ್ರಧಾನ ಕಾರ್ಯದರ್ಶಿ ರಂಗನಾಥ್, ಶಿವಾನಂದ, ಇಂಚರ ಮಂಜುನಾಥ್, ಎಸ್.ಎಸ್. ಬೀರಪ್ಪ, ಕುಂದೂರು ಅನಿಲ್, ರಂಗನಾಥ್, ಬಾಬು ಹೋಬಳದಾರ್ ಇತರ ಬಿಜೆಪಿ ಮುಖಂಡರು ಇದ್ದರು.