ದೇಸಿ ತಳಿಯ ಹಣ್ಣಿಗೆ ಭಾರಿ ಬೇಡಿಕೆ! Kekkarale fruit

1. ಕೆಂಚಿಕೊಪ್ಪ ಗ್ರಾಮದ ಜಮೀನಿನಲ್ಲಿ ಕೆಕ್ಕರಲ ಹಣ್ಣಿನ ಕೊಯ್ಲು ಮಾಡಿ ರಾಶಿ ಹಾಕುತ್ತಿರುವುದು. 2. ನ್ಯಾಮತಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರೈತ ಮಹಿಳೆಯರು ಕೆಕ್ಕರಲ ಹಣ್ಣನ್ನು ಮಾರಾಟ ಮಾಡುತ್ತಿರುವುದು.Kekkarale fruit
1. ಕೆಂಚಿಕೊಪ್ಪ ಗ್ರಾಮದ ಜಮೀನಿನಲ್ಲಿ ಕೆಕ್ಕರಲ ಹಣ್ಣಿನ ಕೊಯ್ಲು ಮಾಡಿ ರಾಶಿ ಹಾಕುತ್ತಿರುವುದು. 2. ನ್ಯಾಮತಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರೈತ ಮಹಿಳೆಯರು ಕೆಕ್ಕರಲ ಹಣ್ಣನ್ನು ಮಾರಾಟ ಮಾಡುತ್ತಿರುವುದು.Kekkarale fruit
Published on

ಪ್ರಮುಖ ಮುಖ್ಯಾಂಶಗಳು

  • ಇಬ್ಬನಿಯಲ್ಲೇ ಬೆಳೆಯುವ ಕೆಕ್ಕರಲೆ
  • ರೈತರಿಂದ ಗ್ರಾಹಕರಿಗೆ ನೇರ ಮಾರಾಟ
  • ಹೊಲಗಳಿಗೆ ಮುಗಿಬೀಳುವ ಸ್ಥಳೀಯರು
ಷಣ್ಮುಖ.ಬಿ.ಈ. ನ್ಯಾಮತಿ
ಪ್ರಕೃತಿಯ ಮಡಿಲಲ್ಲಿ ಆಯಾ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ವರದಾನ. ಅದರಂತೆ, ಸದ್ಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಎರೆಹೊಲಗಳಲ್ಲಿ ಬೆಳೆಯುವ ಕೆಕ್ಕರಲೆ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರು ಇದರ ರುಚಿಗೆ ಮನಸೋಲುತ್ತಿದ್ದಾರೆ.
ಹಿಂಗಾರು ಹಂಗಾಮಿನ ಜೋಳದ ಜತೆಗೆ ಮಿಶ್ರ ಬೆಳೆಯಾಗಿ ಬೆಳೆಯುವ ಈ ಹಣ್ಣು ಹತ್ತಾರು ದಶಕಗಳ ಇತಿಹಾಸ ಹೊಂದಿದೆ. ಯಾವುದೇ ರಾಸಾಯನಿಕ ಗೊಬ್ಬರ, ಔಷಧ ಅಥವಾ ಹೆಚ್ಚಿನ ನೀರಿನ ಹಂಗಿಲ್ಲದೆ ಕೇವಲ ಇಬ್ಬನಿಯ ತೇವಾಂಶದಲ್ಲಿ ಬೆಳೆಯುತ್ತದೆ. ರೈತರು ಪ್ರತಿವರ್ಷ ಮಾಗಿದ ಹಣ್ಣಿನಿಂದಲೇ ಬೀಜ ಸಂಗ್ರಹಿಸಿ ಮುಂದಿನ ವರ್ಷದ ಬಿತ್ತನೆಗೆ ಬಳಸುವ ಮೂಲಕ ತಳಿ ಸಂರಕ್ಷಣೆ ಮಾಡುತ್ತಿದ್ದಾರೆ.

ನೇರ ಮಾರುಕಟ್ಟೆ

ನ್ಯಾಮತಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತವೇ ಈ ಹಣ್ಣಿನ ಪ್ರಮುಖ ವ್ಯಾಪಾರ ಕೇಂದ್ರ. ರೈತ ಕುಟುಂಬಗಳು ಮುಂಜಾನೆಯೇ ಹೊಲದಿಂದ ಹಣ್ಣುಗಳನ್ನು ತಂದು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿವೆ. ಗಾತ್ರಕ್ಕೆ ಅನುಗುಣವಾಗಿ ಒಂದು ಹಣ್ಣಿಗೆ 20 ರಿಂದ 100 ರೂಪಾಯಿವರೆಗೆ ದರವಿದ್ದು, ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ನೇರ ಆದಾಯ ಸಿಗುತ್ತಿದೆ. ನ್ಯಾಮತಿ ಮಾತ್ರವಲ್ಲದೆ ಹೊನ್ನಾಳಿ, ದಾವಣಗೆರೆ ಹಾಗೂ ಶಿವಮೊಗ್ಗದ ಗ್ರಾಹಕರು ಈ ಹಣ್ಣನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಕರಿಗೂ ಇಲ್ಲಿಂದ ಹಣ್ಣು ರವಾನೆಯಾಗುತ್ತಿದೆ. ಅಲ್ಲದೇ ಹಣ್ಣು ಮಾಗುವವರೆಗೂ ಪ್ರಾಣಿ ಹಾಗೂ ಕಳ್ಳರ ಕಾಟದಿಂದ ತಪ್ಪಿಸಲು ರೈತರು ಹೊಲದಲ್ಲೇ ವಾಸ್ತವ್ಯ ಹೂಡಿ ಕಾವಲು ಕಾಯುತ್ತಾರೆ.

ರುಚಿ ಹೆಚ್ಚಿಸುವ ವಿಧಾನ

ಕೆಕ್ಕರಲ ಹಣ್ಣಿನ ಸಿಪ್ಪೆ ಹಾಗೂ ಬೀಜ ತೆಗೆದು, ಅದಕ್ಕೆ ಬೆಲ್ಲದ ಪುಡಿ, ತೆಂಗಿನ ತುರಿ ಹಾಗೂ ಸ್ವಲ್ಪ ಶುಂಠಿ ಮಿಶ್ರಣ ಮಾಡಿ ಸವಿಯುವುದು ಈ ಭಾಗದ ಸಂಪ್ರದಾಯ. ಈ ಮಿಶ್ರಣವು ಹಣ್ಣಿನ ರುಚಿಯನ್ನು ದುಪ್ಪಟ್ಟು ಮಾಡುತ್ತದೆ ಎಂದು ಗ್ರಾಹಕರು ಹೇಳುತ್ತಾರೆ.

ಚಳಿಗಾಲದಲ್ಲಿ ಈ ಹಣ್ಣು ತಿನ್ನುವುದೇ ಒಂದು ಸಂಭ್ರಮ. ನಾವು ಬುಟ್ಟಿಗಟ್ಟಲೆ ಹಣ್ಣು ಖರೀದಿಸಿ ಸವಿಯುವುದಲ್ಲದೆ, ದೂರದ ಊರಿನಲ್ಲಿರುವ ಸಂಬಂಧಿಕರಿಗೂ ಕಳುಹಿಸುತ್ತೇವೆ. ಬೆಲ್ಲ ಮತ್ತು ತೆಂಗಿನ ತುರಿ ಬೆರೆಸಿದರೆ ಇದರ ರುಚಿ ಅದ್ಭುತವಾಗಿರುತ್ತದೆ.

ನೂರಾರು ವರ್ಷಗಳ ಇತಿಹಾಸವಿರುವ ಈ ದೇಸಿ ಹಣ್ಣಿಗೆ ಶ್ರಮವೇ ಬಂಡವಾಳ. ಔಷಧ, ನೀರು ಅಥವಾ ಕಾರ್ಮಿಕರ ಗೋಜಿಲ್ಲದೆ ಮಿಶ್ರ ಬೆಳೆಯಾಗಿ ಇದನ್ನು ಬೆಳೆಯಬಹುದು. ಕೇವಲ ಅರ್ಧ ಎಕರೆಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net