ಜಿಲ್ಲೆಯಲ್ಲಿ ಎಚ್‌ಪಿವಿ ಲಸಿಕೆ ಅಭಿಯಾನ

 ಡಾ. ರೇಣುಕಾರಾಧ್ಯ ಎ.ಎಂ.
ಡಾ. ರೇಣುಕಾರಾಧ್ಯ ಎ.ಎಂ.
Published on

ಪ್ರಮುಖ ಮುಖ್ಯಾಂಶಗಳು

  • ಗರ್ಭಕಂಠ ಕ್ಯಾನ್ಸರ್ ತಡೆಯುವ ಉದ್ದೇಶ
  • 18,706 ಬಾಲಕಿಯರಿಗೆ ನೀಡುವ ಗುರಿ
ದಾವಣಗೆರೆ : ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ ಎಚ್‌ಪಿವಿ ಲಸಿಕೆ ಅಭಿಯಾನ ಶುಕ್ರವಾರದಿಂದ ಆರಂಭವಾಗಲಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರೇಣುಕಾರಾಧ್ಯ ಎ.ಎಂ. ಹೇಳಿದ್ದಾರೆ.
ಈ ಲಸಿಕೆಯನ್ನು ಉಚಿತವಾಗಿ 14ರಿಂದ 15 ವಯಸ್ಸಿನ ಬಾಲಕಿಯರಿಗೆ ಮಾತ್ರ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 18,706 ಬಾಲಕಿಯರನ್ನು ಈ ಉದ್ದೇಶಕ್ಕೆ ಗುರುತಿಸಲಾಗಿದೆ. ಈಗಾಗಲೇ ಜಿಲ್ಲೆಗೆ 7,535 ಲಸಿಕೆ ಬಂದಿವೆ. ಲಸಿಕೆ ನೀಡುವಿಕೆ ರಿಯಲ್ ಟೈಮ್ನಲ್ಲಿ ಆನ್‌ಲೈನ್ ಯು-ವಿನ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ವಾರದಲ್ಲಿ ಎರಡು ದಿನ ಅಂದರೆ ಬುಧವಾರ ಹಾಗೂ ಶುಕ್ರವಾರದಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಲೆಗಳಲ್ಲಿ ಅರಿವು

ದೇಶಾದ್ಯಂತ ಮೊಟ್ಟಮೊದಲ ಬಾರಿಗೆ ಈ ಅಭಿಯಾನ ನಡೆಯುತ್ತಿದೆ. ಇದು ಜೀವಮಾನದಲ್ಲಿ ಒಮ್ಮೆ ಮಾತ್ರ ನೀಡುವ ಲಸಿಕೆಯಾಗಿದ್ದು ಒಂದು ಲಸಿಕೆಯ ಬೆಲೆ 4 ಸಾವಿರ ರೂ. ಆಗಿದ್ದು ಸರ್ಕಾರ ಇದನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ ಎಂದು ಡಾ. ರೇಣುಕಾರಾಧ್ಯ ತಿಳಿಸಿದ್ದಾರೆ.
ಈ ಕುರಿತು ಶಾಲೆಗಳಲ್ಲಿ ಪಾಲಕರು ಹಾಗೂ ಶಿಕ್ಷಕರ ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಭೆ ನಡೆಸಿ ಎಚ್‌ಪಿವಿ ಲಸಿಕೆ ಮಹತ್ವದ ಬಗ್ಗೆ ವಿವರಿಸಿ ತಿಳಿವಳಿಕೆ ನೀಡುತ್ತಿದ್ದಾರೆ. ಮಕ್ಕಳು ಪಾಲಕರ ಜತೆ ಬಂದು ಲಸಿಕೆ ಪಡೆದುಕೊಳ್ಳಬೇಕಾಗುತ್ತದೆ. ಲಸಿಕೆಯನ್ನು ಕಡ್ಡಾಯಗೊಳಿಸಿಲ್ಲ ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ 2022ರಲ್ಲಿ 6.5 ಲಕ್ಷ ಮಹಿಳೆಯರಲ್ಲಿ ಹಾಗೂ ಭಾರತದಲ್ಲಿ 78 ಸಾವಿರ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗಿದೆ. ಭಾರತದಲ್ಲಿ 34 ಸಾವಿರ ಮಹಿಳೆಯರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ಜಗತ್ತಿನ 159 ದೇಶಗಳಲ್ಲಿ 55 ಕೋಟಿ ಜನರಿಗೆ ಇಲ್ಲಿಯವರೆಗೆ ಎಚ್‌ಪಿವಿ ಲಸಿಕೆ ನೀಡಲಾಗಿದ್ದು ಅಡ್ಡಪರಿಣಾಮವಾಗಿಲ್ಲ. ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. 2024ರ ಅಂದಾಜಿನ ಪ್ರಕಾರ ಸುಮಾರು 78,499 ಹೊಸ ಪ್ರಕರಣಗಳು ಪತ್ತೆಯಾಗಿವೆ. 48,392 ಸಾವು ಸಂಭವಿಸಿವೆ, ಆದ್ದರಿಂದ ಈ ಲಸಿಕೆ ಮುಖ್ಯ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net