ವೈದ್ಯಕೀಯ ಕಾಲೇಜು ಸ್ಥಾಪನೆ ಆಶಯ

ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಶನಿವಾರ, ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮಾಜಿ ಸಂಸದ ದಿ. ಜಿ. ಮಲ್ಲಿಕಾರ್ಜುನಪ್ಪ ಅವರ 12 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಲಾಯಿತು. ವಿ. ಸೋಮಣ್ಣ, ಜಿ.ಎಂ. ಸಿದ್ದೇಶ್ವರ, ಡಾ. ಮುರುಗೇಶ್ ಆರ್. ನಿರಾಣಿ, ಜಿ.ಎಂ. ಪ್ರಸನ್ನ ಕುಮಾರ್, ಜಿ.ಎಂ. ಲಿಂಗರಾಜು, ಜಿ.ಎಸ್. ಅನಿತ್ ಕುಮಾರ್, ಡಾ. ಎಸ್.ಆರ್. ಶಂಕಪಾಲ್, ಡಾ. ಎಂ. ವೇಣುಗೋಪಾಲ್ ರಾವ್, ಡಾ. ಸುನೀಲ್ ಕುಮಾರ್ ಬಿ.ಎಸ್. ಇದ್ದರು.
ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಶನಿವಾರ, ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮಾಜಿ ಸಂಸದ ದಿ. ಜಿ. ಮಲ್ಲಿಕಾರ್ಜುನಪ್ಪ ಅವರ 12 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಲಾಯಿತು. ವಿ. ಸೋಮಣ್ಣ, ಜಿ.ಎಂ. ಸಿದ್ದೇಶ್ವರ, ಡಾ. ಮುರುಗೇಶ್ ಆರ್. ನಿರಾಣಿ, ಜಿ.ಎಂ. ಪ್ರಸನ್ನ ಕುಮಾರ್, ಜಿ.ಎಂ. ಲಿಂಗರಾಜು, ಜಿ.ಎಸ್. ಅನಿತ್ ಕುಮಾರ್, ಡಾ. ಎಸ್.ಆರ್. ಶಂಕಪಾಲ್, ಡಾ. ಎಂ. ವೇಣುಗೋಪಾಲ್ ರಾವ್, ಡಾ. ಸುನೀಲ್ ಕುಮಾರ್ ಬಿ.ಎಸ್. ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣದಲ್ಲಿ ಜಿಎಂ ಕುಟುಬದ ಹೆಜ್ಜೆ ಗುರುತು
  • ಕೇಂದ್ರ ಸಚಿವ ಸೋಮಣ್ಣ ಶ್ಲಾಘನೆ
  • 12 ಅಡಿ ಎತ್ತರದ ಪ್ರತಿಮೆ ಅನಾವರಣ
ದಾವಣಗೆರೆ : ಶಿಕ್ಷಣ ಕ್ಷೇತ್ರದಲ್ಲಿ ಜಿಎಂ ಮನೆತನ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವಂತಾಗಲಿ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಆಶಿಸಿದರು.
ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಶನಿವಾರ, ಸಂಸ್ಥಾಪಕರ ದಿನಾಚರಣೆ ಅಂಗವಾಗಿ, ಸಂಸ್ಥೆಯ ಸಂಸ್ಥಾಪಕ, ಮಾಜಿ ಸಂಸದ ದಿ. ಜಿ. ಮಲ್ಲಿಕಾರ್ಜುನಪ್ಪ ಅವರ 12 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಜಿಎಂ ಸಂಸ್ಥೆಯು ಶಿಕ್ಷಣದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತ ಬಂದಿದೆ. ಜಿಎಂ ವಿಶ್ವವಿದ್ಯಾಲಯ 10 ಸಾವಿರ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆಯುತ್ತ, ಗುಣಮಟ್ಟ ಮತ್ತು ಮೂಲಸೌಲಭ್ಯದಲ್ಲಿ ಯಾವುದೇ ಸಂಸ್ಥೆಗೂ ಕಡಿಮೆ ಇಲ್ಲದಂತೆ ಬೆಳೆದಿದೆ. ‘ವಿದ್ಯೆಗೆ ಇನ್ನೊಂದು ಹೆಸರು ಜಿಎಂಯು’ ಎನ್ನುವ ರೀತಿಯಲ್ಲಿ ಸಂಸ್ಥೆ ಹೆಸರಾಗಿದೆ ಎಂದು ಹೇಳಿದರು.
ಜಿ. ಮಲ್ಲಿಕಾರ್ಜುನಪ್ಪ ಅವರು ರೈತ ಮುಖಂಡರಾಗಿ, ಸಂಸದರಾಗಿ, ಸಾರ್ವಜನಿಕ ಬದುಕಿನಲ್ಲಿ ಯಶಸ್ಸು ಕಂಡವರು. ತಮ್ಮ ಗ್ರಾಮವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದವರು. ಅವರ ದೂರದೃಷ್ಟಿ, ಮಾರ್ಗದರ್ಶನದ ಅಡಿಯಲ್ಲಿ ಜಿಎಂ ಕುಟುಂಬದ ಸದಸ್ಯರು ಒಗ್ಗಟ್ಟಿನಿಂದ ಮುಂದೆ ಸಾಗುತ್ತಿರುವುದು ಆದರ್ಶಪ್ರಾಯವಾಗಿದೆ ಎಂದರು.
ಶ್ರೀಶೈಲ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್, ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಉಪ ಕುಲಪತಿ ಡಾ. ಎಂ. ವೇಣುಗೋಪಾಲ್ ರಾವ್, ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್. ಉಪಸ್ಥಿತರಿದ್ದು ಪಿಎಚ್.ಡಿ ಪದವಿ ಪುರಸ್ಕೃತರನ್ನು ಹಾಗೂ ಗಣ್ಯರನ್ನು ಗೌರವಿಸಿದರು.
ಜಿಎಂ ಕುಟುಂಬದ ಸದಸ್ಯರು, ಜಿಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರಾಚಾರ್ಯರು, ಡೀನ್‌ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶ್ ಜಿ. ಟಿಲ್ವೆ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬಿ. ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿದರು.

ವ್ಯಕ್ತಿಯಲ್ಲ, ಶಕ್ತಿ

ನಮ್ಮ ತಂದೆಯವರಾದ ಜಿ. ಮಲ್ಲಿಕಾರ್ಜುನಪ್ಪ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೇ ಶಕ್ತಿಯಾಗಿದ್ದರು. ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿ, ಯಶಸ್ವಿ ಉದ್ಯಮಿಯಾಗಿ, ಮಹಾನ್ ಶಿಕ್ಷಣ ಪ್ರೇಮಿಯಾಗಿ ಬದುಕಿದವರು ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಬಣ್ಣಿಸಿದರು.
ದಾವಣಗೆರೆ ಜಿಲ್ಲೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ಹಾಗೂ ಇಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ತರುವಲ್ಲಿ ಅವರ ಕೊಡುಗೆ ಅಪಾರವಾದುದು. ಮಧ್ಯ ಕರ್ನಾಟಕದ ಅಭಿವೃದ್ಧಿಯ ಇತಿಹಾಸವನ್ನು ತಿರುವಿ ಹಾಕಿದರೆ ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರು ಅಜರಾಮರವಾಗಿರುತ್ತದೆ ಎಂದು ಸ್ಮರಿಸಿದರು.
ಮಧ್ಯ ಕರ್ನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಹಾಗೂ ಆಧುನಿಕ ಶಿಕ್ಷಣ ಸಿಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಅವರು ಶ್ರೀಶೈಲ ಶಿಕ್ಷಣ ಟ್ರಸ್ಟ್ನ್ನು ಸ್ಥಾಪಿಸಿದರು. ಈ ಟ್ರಸ್ಟ್‌ನ ಆಶ್ರಯದಲ್ಲಿ ಜಿ.ಎಂ. ಗ್ರೂಪ್ ಸಂಸ್ಥೆಗಳಡಿ 2001ರಲ್ಲಿ ಸ್ಥಾಪಿತವಾದ ‘ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯವು’ ಕೇವಲ 129 ವಿದ್ಯಾರ್ಥಿಗಳಿಂದ ತನ್ನ ಶೈಕ್ಷಣಿಕ ಪಯಣವನ್ನು ಆರಂಭಿಸಿದ್ದು, ಪ್ರಸ್ತುತ 10,230 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.
ಇದರ ಜತೆಗೆ ಜಿ.ಎಂ. ಹಾಲಮ್ಮ ಪದವಿಪೂರ್ವ ಕಾಲೇಜು, ಜಿ.ಎಂ. ಪಾಲಿಟೆಕ್ನಿಕ್ ಕಾಲೇಜು ಹಾಗೂ ಜಿ.ಎಂ. ಫಾರ್ಮಸಿ ಕಾಲೇಜುಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. 2023ರಲ್ಲಿ ಪ್ರಾರಂಭವಾದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್‌ಗಳ ಜತೆಗೆ, ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕವಾಗಿರುವ ಪ್ರಮುಖ ಕೌಶಲ ಆಧಾರಿತ ಕೋರ್ಸ್‌ಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
"

ಕೇವಲ 200 ವಿದ್ಯಾರ್ಥಿಗಳಿಂದ ಆರಂಭವಾದ ಜಿ.ಎಂ. ಸಂಸ್ಥೆ ಈಗ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಡಾ. ಪ್ರಭಾಕರ್ ಕೋರೆ ಅವರು ಕೆ.ಎಲ್.ಇ ಸಂಸ್ಥೆಯನ್ನು ಮುನ್ನಡೆಸಿದ ಮಾದರಿಯಲ್ಲೇ, ಮುಂದಿನ ದಿನಗಳಲ್ಲಿ ಜಿ.ಎಂ. ವಿಶ್ವವಿದ್ಯಾಲಯವು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ’ಕೆಜಿಯಿಂದ ಪಿಜಿ’ ವರೆಗೆ ಶಿಕ್ಷಣ ನೀಡುವ ಜಾಗತಿಕ ಸಂಸ್ಥೆಯಾಗಿ ಬೆಳೆಯಲಿ.

— ಡಾ. ಮುರುಗೇಶ್ ಆರ್. ನಿರಾಣಿ, ಮಾಜಿ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net