ಮಳೆಯ ಆಶಾಭಾವವಿರಲಿ, ಬರದ ಆತಂಕ ಬೇಡ

ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ್, ಡಿ.ಜಿ.ಶಾಂತನಗೌಡ, ಶಿವಗಂಗಾ ಬಸವರಾಜು, ಬಸವಂತಪ್ಪ, ಸಮರ್ಥ್ ಶಾಮನೂರು ಇತರರಿದ್ದರು.
ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ್, ಡಿ.ಜಿ.ಶಾಂತನಗೌಡ, ಶಿವಗಂಗಾ ಬಸವರಾಜು, ಬಸವಂತಪ್ಪ, ಸಮರ್ಥ್ ಶಾಮನೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಂಗಾರು ಕೊರತೆ ಎದುರಿಸಲು ಸರ್ಕಾರ ಸನ್ನದ್ಧ
  • ಕುಡಿವ ನೀರಿಗೆ ಅನುದಾನದ ಅಭಾವ ಇಲ್ಲ
  • ಮೇಲುಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ
ದಾವಣಗೆರೆ: ಸದ್ಯಕ್ಕೆ ಮುಂಗಾರು ಕೊರತೆ ಎದುರಾಗಿದ್ದರೂ ಜುಲೈ, ಆಗಸ್ಟ್‌ನಲ್ಲೂ ಮಳೆ ಬರುವ ನಿರೀಕ್ಷೆ ಇದೆ. ಹೀಗಾಗಿ ಆಶಾಭಾವನೆ ಇರಲಿ. ಈಗಲೇ ಬರದ ಆತಂಕ ಬೇಡ ಎಂದು ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಕೊರತೆ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಕುಡಿವ ನೀರು, ಮೇವಿನ ಅಭಾವ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾರಲ್ಲೂ ಆತಂಕ ಬೇಕಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಅಭ್ಯಂತರವಿಲ್ಲ. ಕುಡಿವ ನೀರಿನ ಅಭಾವವಿರುವೆಡೆ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬಹುದು. ಕುಡಿವ ನೀರಿಗೆ ಅನುದಾನದ ಕೊರತೆ ಇಲ್ಲ. ಎಲ್ಲಾ ಡಿಸಿಗಳಿಗೆ ಸಿಎಂ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದೂ ಜಾರ್ಜ್ ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಈ ಬಾರಿ ಶೇಕಡಾ 58ರಷ್ಟು ಮಳೆ ಕೊರತೆಯಾಗಿದ್ದು, ಶೇ. 8ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಶೇ. 65ರಷ್ಟು ಬಿತ್ತನೆಯಾಗಿತ್ತು ಎಂದು ವಿವರಿಸಿದರು.
ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿದಿದೆ. ಕಳೆದ ವರ್ಷ 186 ಅಡಿಗಳಷ್ಟಿದ್ದ ನೀರಿನ ಮಟ್ಟ ಈ ಸಲ 136 ಅಡಿಗೆ ತಲುಪಿದೆ. ಕಳೆದ ವರ್ಷ 12 ಸಾವಿರ ಕ್ಯೂಸೆಕ್ ಇದ್ದ ಡ್ಯಾಂನ ಒಳಹರಿವು ಈಗ 211 ಕ್ಯೂಸೆಕ್‌ನಷ್ಟಿದೆ. ಕನಿಷ್ಠ 15 ಟಿಎಂಸಿ ನೀರು ಸಂಗ್ರಹವಾಗದಿದ್ದರೆ ಕುಡಿವ ನೀರಿಗೆ ಅಭಾವ ತಲೆದೋರಲಿದೆ. 4 ತಿಂಗಳಿಗಾಗುವಷ್ಟು ರಸಗೊಬ್ಬರದ ದಾಸ್ತಾನಿದೆ ಎಂದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಜಿಲ್ಲೆಯ 14 ಗ್ರಾಪಂಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸಿದೆ. ವಿನಾಯಕ ಕ್ಯಾಂಪ್‌ಗೆ ಟ್ಯಾಂಕರ್ ವ್ಯವಸ್ಥೆ, 13 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಅವಲಂಬಿಸಲಾಗಿದೆ. 48 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಬಿಡುಗಡೆಯಾದ 3 ಕೋಟಿ ರೂ. ತುರ್ತು ನಿಧಿಯಡಿ ಮೊದಲ ಹಂತದಲ್ಲಿ 1 ಕೋಟಿ ರೂ.ನಲ್ಲಿ ಶಾಸಕರ ಟಾಸ್ಕ್‌ಫೋರ್ಸ್ ಮೂಲಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜಿಲ್ಲಾದ್ಯಂತ 36 ಹೊಸ ಕೊಳವೆಬಾವಿ ಕೊರೆಸಲಾಗಿದ್ದು, 30 ಯಶಸ್ವಿಯಾಗಿವೆ ಎಂದರು.
ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗಾಗಿ ರೈತರೇ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳು ತಿಳಿಸುತ್ತಿದ್ದಾರೆ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಇಲಾಖೆಯ ವಾಹನದಲ್ಲೇ ಹೊಸ ಪರಿವರ್ತಕ ತಂದು ಅಳವಡಿಸಲಾಗುತ್ತಿದೆ ಎಂದು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಾಟೀಲ್ ಹೇಳಿದರು. ಅಗತ್ಯಬಿದ್ದಲ್ಲಿ ಇಲಾಖೆಯಿಂದಲೇ ಖಾಸಗಿ ವಾಹನ ವ್ಯವಸ್ಥೆ ಮಾಡುವಂತೆಯೂ ಸಚಿವರು ಸೂಚಿಸಿದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಮಾತನಾಡಿ, ಚನ್ನಗಿರಿ ಕ್ಷೇತ್ರವು ಕುಡಿವ ನೀರಿಗಾಗಿ ಸೂಳೆಕೆರೆ ಮೇಲೆ ಶೇ.70 ರಷ್ಟು ಅವಲಂಬಿತವಾಗಿದೆ. ಚಿತ್ರದುರ್ಗಕ್ಕೂ ಇಲ್ಲಿಂದಲೇ ನೀರು ಪೂರೈಸಲಾಗುತ್ತಿದೆ. ಹೀಗಾಗಿ ಇಲ್ಲಿ ನೀರಿನ ಆತಂಕ ಹೆಚ್ಚಾಗಿದೆ. ಹೊಸ ಬೋರ್‌ವೆಲ್ ಕೊರೆಸಲು ಅನುಮತಿಸಬೇಕು ಎಂದು ಕೋರಿದರು. ಸಭೆಯಲ್ಲಿ ಕೆಪಿಟಿಸಿಎಲ್ ಎಂಡಿ ರಾಮ್‌ಪ್ರಸಾದ್ ಮನೋಹರ್, ರಾಜೇಂದ್ರ ಇದ್ದರು.

ವಿದ್ಯುತ್ ಉಪಕೇಂದ್ರಗಳ ಕುರಿತು ಸಭೆ

ಜಿಲ್ಲೆಯ ವಿದ್ಯುತ್ ಉಪ ಕೇಂದ್ರಗಳ ನಿರ್ವಹಣೆ, ಸಮಸ್ಯೆ ಕುರಿತಂತೆ ಚರ್ಚಿಸಲು ಶೀಘ್ರವೇ ಸಭೆ ಕರೆಯುವಂತೆ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಡಿಸಿ ಅವರಿಗೆ ಸೂಚಿಸಿದರು. ಹರಿಹರ ನಗರದಲ್ಲಿ ಕುಡಿವ ನೀರು ಪೂರೈಕೆಗೆ ಸಮಗ್ರ ಯೋಜನೆ ರೂಪಿಸಬೇಕು. ಕೆಯುಡಿಎಸ್‌ಸಿ ಅಧಿಕಾರಿಗಳ ಸಭೆ ಆಯೋಜಿಸಿ ಎಂದೂ ಸಲಹೆ ನೀಡಿದರು.
ದಾವಣಗೆರೆಯ ಎಸ್ಸೆಸ್ಸೆಂ ನಗರದಲ್ಲಿ ಹೊಸ ಎಸ್‌ಟಿಪಿ ಪ್ಲಾಂರ್ಟ್ ನಿರ್ಮಾಣಕ್ಕೆ ಭೂಮಿ ಮಂಜೂರಾಗಿದೆ. ಅದರ ಪಕ್ಕದಲ್ಲೇ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೂ ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ನಡೆಸಬೇಕು ಎಂದೂ ಸಚಿವರಲ್ಲಿ ಮನವಿ ಮಾಡಿದರು.
ಅಕ್ರಮ ನೀರೆತ್ತುವಿಕೆ ತಡೆಗೆ ಕಾರ್ಯಪಡೆ ರಚಿಸಿ
ನದಿಯ ನೀರನ್ನು ಪಂಪ್‌ಸೆಟ್, ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಅನಧಿಕೃತವಾಗಿ ಎತ್ತುತ್ತಿರುವುದರಿಂದ ನಾಲೆಯ ಕೊನೇಭಾಗಕ್ಕೆ ನೀರು ತಲುಪುತ್ತಿಲ್ಲ. ಬೆಸ್ಕಾಂನಿಂದ ವಿದ್ಯುತ್ ಕಳ್ಳತನ ಪತ್ತೆ ಹಚ್ಚುವ ಮಾದರಿಯಲ್ಲೇ, ನೀರಾವರಿ ಇಲಾಖೆಯಲ್ಲೂ ಅಕ್ರಮ ನೀರು ಎತ್ತುವಿಕೆ ತಡೆಗೆ ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಮನವಿ ಮಾಡಿದರು.
ಬ್ಯಾರೇಜ್ ಮೂಲಕ ಹರಿಹರಕ್ಕೆ ನೀರುಣಿಸಿ
ಮಳೆಯ ಕೊರತೆಯಿಂದಾಗಿ ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗಿದೆ. ಮಳೆಯಾಗದಿದ್ದಲ್ಲಿ ಇನ್ನೆರಡು ದಿನದಲ್ಲಿ ಹರಿಹರ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ. ಹೀಗಾಗಿ ರಾಜನಹಳ್ಳಿ ಬ್ಯಾರೇಜ್ ಮೂಲಕ ತಾತ್ಕಾಲಿಕವಾಗಿ ನೀರು ಪೂರೈಸಬೇಕು ಎಂದು ಶಾಸಕ ಬಿ. ಪಿ. ಹರೀಶ್ ಸಚಿವರಲ್ಲಿ ಮನವಿ ಮಾಡಿದರು. ಹರಿಹರಕ್ಕೆ ಪೂರೈಸುವಷ್ಟು ನೀರು ಲಭ್ಯವಿಲ್ಲ ಎಂದು ಅಧಿಕಾರಿ ಉದಯಕುಮಾರ್ ಉತ್ತರಿಸಿದರು.
ತೆರಿಗೆ ದುಡ್ಡಿನತ್ತ ಪಿಡಿಒಗಳ ಕಣ್ಣು!
ಜಿಪಂ ಸಿಇಒ ಶ್ರಮದಿಂದ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಕಂದಾಯ ವಸೂಲಾಗಿದೆ. ಪಿಡಿಒಗಳ ಕಣ್ಣು ಈ ಹಣದ ಮೇಲೆ ಬಿದ್ದಿದ್ದು ಹಳೆಬಿಲ್‌ಗಳಿಗೆ ಹೊಂದಾಣಿಕೆ ಮಾಡಿ ಶೂನ್ಯಖಾತೆ ಮಾಡಲು ಹೊರಟಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ತೆರಿಗೆ ಹಣವನ್ನು ಕುಡಿವ ನೀರಿಗೆ ಬಳಸಲು ನಿರ್ದೇಶನ ನೀಡಬೇಕೆಂದು ಎಂದು ಶಾಸಕ ಬಸವಂತಪ್ಪ ಕೋರಿದರು. ಇದಕ್ಕೆ ಸಚಿವರು ಸ್ಪಂದಿಸಿದರು.
22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ 75 ಕೋಟಿ ರೂ. ಬಿಡುಗಡೆಯಾಗಿದ್ದು ಕಾರ್ಯಾದೇಶ ನೀಡಬೇಕು. ಈ ಮಾರ್ಗದಲ್ಲಿ ಒಂದನೇ ಜಾಕ್‌ವೆಲ್ ಬಳಿ ಹೂಳೆತ್ತಬೇಕು. ನಿರ್ವಹಣೆಗೆ ಅನುದಾನ ಬಿಡುಗಡೆಗೊಳಿಸಬೇಕೆಂದೂ ಮನವಿ ಮಾಡಿದರು.
ಮಳೆ ನೀರು ಕೊಯ್ಲಿಗಿರಲಿ ಆದ್ಯತೆ
ಐದು ವರ್ಷಕ್ಕೊಮ್ಮೆ ಬರ ಪರಿಸ್ಥಿತಿ ಎದುರಿಸುವುದು ಅನಿವಾರ್ಯ. ಆದರೆ ಮುಂಜಾಗ್ರತಾ ಕ್ರಮವಾಗಿ ದೀರ್ಘಾವಧಿಯ ನೀರಿನ ಭದ್ರತೆಗಾಗಿ ಮಳೆ ನೀರು ಕೊಯ್ಲಿಗೆ ಆದ್ಯತೆ ನೀಡಬೇಕಿದೆ. ಜಲಸಿರಿ ಯೋಜನೆಯಡಿ ನೀರು ವ್ಯರ್ಥವಾಗಿ ಹರಿದುಹೋಗದಂತೆ ಜನರ ವಿಶ್ವಾಸ ಪಡೆಯಬೇಕಿದೆ. ನಿರ್ದಿಷ್ಟ ಜನಸಂಖ್ಯೆ ಅನುಸಾರವಾಗಿ ಬೋರ್‌ವೆಲ್‌ಗಳು ಇರುವಂತೆ ಮಾನದಂಡ ರೂಪಿಸಬೇಕು ಎಂದು ದಾವಣಗೆರೆ ದಕ್ಷಿಣ ಶಾಸಕ ಸಮರ್ಥ ಶಾಮನೂರು ಸಲಹೆ ನೀಡಿದರು.
12 ಸಾವಿರ ಕೋಟಿ ರೂ. ಬಾಕಿ
ಏತ ನೀರಾವರಿ ಯೋಜನೆಯಡಿ ವಿದ್ಯುತ್ ಬಾಕಿ ಕಟ್ಟುವುದು ಅನಿವಾರ್ಯ. ಆರ್‌ಡಿಪಿಆರ್ ಸೇರಿ ಕೆಲ ಇಲಾಖೆಗಳಿಂದ ಇಂಧನ ಇಲಾಖೆಗೆ ವಿದ್ಯುತ್ ಬಾಕಿ ಬರಬೇಕಿದೆ. ಈ ಸಂಬಂಧ ಸಿಎಂಗೆ ಶೀಘ್ರವೇ ಮನವರಿಕೆ ಮಾಡಲಾಗುವುದು ಎಂದು ಜಾರ್ಜ್ ಹೇಳಿದರು.
ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಇಂಧನ ಇಲಾಖೆಯಲ್ಲಿ ಸರ್‌ಪ್ಲಸ್ ಹಣ ಎಂಬುದಿಲ್ಲ. ನಾವು ಕೂಡ ಸಾಲ ತಂದು ಕೆಲವು ಸಮಸ್ಯೆ ಪರಿಹರಿಸುತ್ತಿದ್ದೇವೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಶುಲ್ಕ ಕಟ್ಟಿದಲ್ಲಿ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಿ ಕೊಡಲಾಗುತ್ತಿದೆ’ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net