ಮಾಗಿ ಉಳುಮೆಯಿಂದ ಹೆಚ್ಚು ಇಳುವರಿ Ploughing

ಆನಗೋಡು ಹೋಬಳಿ ನರಗನಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಮೂಲಕ ಮಾಗಿ ಉಳುಮೆ ಮಾಡುತ್ತಿರುವುದು. ploughing
ಆನಗೋಡು ಹೋಬಳಿ ನರಗನಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಮೂಲಕ ಮಾಗಿ ಉಳುಮೆ ಮಾಡುತ್ತಿರುವುದು. ploughing
Published on

ಪ್ರಮುಖ ಮುಖ್ಯಾಂಶಗಳು

  • ಜಮೀನುಗಳಲ್ಲಿ ಮೆಕ್ಕೆಜೋಳ ಕಟಾವು ಜೋರು
  • ಮಣ್ಣಿನ ಫಲವತ್ತತೆ, ಜೀವಕೋಶಗಳು ವೃದ್ಧಿ
  • ಕ್ರಿಮಿಕೀಟಗಳ ನಾಶ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ಮೆಕ್ಕೆಜೋಳ ಕಟಾವು ಕಾರ್ಯ ಪೂರ್ಣಗೊಂಡ ಜಮೀನಿನಲ್ಲಿ ಹಿಂಗಾರು ಹಂಗಾಮಿನ ಮಾಗಿ ಉಳುಮೆ ಭರದಿಂದ ಸಾಗುತ್ತಿದೆ.
ಈ ಮೂರು ಹೋಬಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಮುಂಗಾರಿಗೆ ಮಳೆಯಾಶ್ರಿತ ಬೆಳೆ ಮೆಕ್ಕೆಜೋಳವನ್ನು ಪ್ರಮುಖವಾಗಿ ಬೆಳೆಯುತ್ತಿದ್ದಾರೆ. ಬಳಿಕ ಹಿಂಗಾರಿಗೆ ಮಾಗಿ ಉಳುಮೆ ಕೈಗೊಳ್ಳುವುದು ರೂಢಿಯಾಗಿದೆ.
ದಾವಣಗೆರೆ ತಾಲೂಕಿನಲ್ಲಿ ಈ ವರ್ಷ ಒಟ್ಟು 65,254 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ನಡೆದಿದ್ದು, ಅದರಲ್ಲಿ 32,500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು 31,917 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಜೋಳ, ತೊಗರಿ, ಎಣ್ಣೆಕಾಳುಗಳನ್ನು ಬೆಳೆದಿದ್ದಾರೆ. ಇವುಗಳಲ್ಲಿ ಮೆಕ್ಕೆಜೋಳ ಮತ್ತು ರಾಗಿ ಕಟಾವು ಬಹುತೇಕ ಮುಕ್ತಾಯಗೊಂಡಿದೆ. ತೊಗರಿ ಬೆಳೆ ಕಾಯಿ ಕಟ್ಟಿ ಒಣಗುತ್ತಿದ್ದು, ಮುಂದಿನ ವಾರಗಳಲ್ಲಿ ಕಟಾವು ನಡೆಯಲಿವೆ.
ರೈತರು ಟ್ರಾೃಕ್ಟರ್ ಬಳಸಿ ಫ್ಲೋ ಮತ್ತು ಬಾಂಡ್ಲಿ ಹೊಡೆಯುವ ಮೂಲಕ ಮಾಗಿ ಉಳುಮೆ ಮಾಡುತ್ತಿದ್ದಾರೆ. ಹಿಂಗಾರಿನಲ್ಲಿ ಮಾಗಿ ಉಳುಮೆ ಮಾಡುವುದ ರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ, ಜೀವಕೋಶಗಳ ಸಂಖ್ಯೆ ವೃದ್ಧಿಯಾಗುತ್ತದೆ ಮತ್ತು ಅನಾವಶ್ಯಕ ಕ್ರಿಮಿಕೀಟಗಳು ನಾಶವಾಗುತ್ತವೆ.
ಜತೆಗೆ ಮುಂಗಾರು ಬಿತ್ತನೆ ಸಮಯಕ್ಕೆ ಮಣ್ಣು ಹದವಾಗುತ್ತದೆ. ಮೆಕ್ಕೆಜೋಳ ಕಟಾವಿನ ನಂತರ ಜಮೀನಲ್ಲಿದ್ದ ಕಸ ಕಡ್ಡಿ, ಹುಲ್ಲುಗಳು ಮಣ್ಣಿನಲ್ಲಿ ಬೆರೆತು ಗೊಬ್ಬರವಾಗಿ ಪರಿವರ್ತನೆಯಾಗಿ ಮುಂಗಾರು ಬೆಳೆಗೆ ಉತ್ತಮ ಪೋಷಕಾಂಶ ಒದಗಿಸುತ್ತದೆ. ಅಲ್ಲದೇ ಉತ್ತಮ ಇಳುವರಿ ತಂದು ಕೊಡುತ್ತದೆ. ದೀಪಾವಳಿ ಬಳಿಕ ಸುರಿದ ಭಾರಿ ಮಳೆ ಮಾಗಿ ಉಳುಮೆಗೆ ಅನುಕೂಲ ಮಾಡಿಕೊಟ್ಟಿದೆ ಎನ್ನುತ್ತಾರೆ ರೈತರು.

ಮುಂಗಾರು ಹಂಗಾಮಿನ ಬೆಳೆಗಳನ್ನು ಕಟಾವು ಮಾಡಿದ ನಂತರ ಭೂಮಿಗೆ ಮಾಗಿ ಉಳುಮೆ ಮಾಡಬೇಕು. ಇದರಿಂದ ಇಡೀ ಜಮೀನಿಗೆ ಒಮ್ಮೆ ಕೊಟ್ಟಿಗೆ ಗೊಬ್ಬರ ಹಾಕಿದಂತಾಗುತ್ತದೆ. ಮಣ್ಣು ಫಲಭರಿತವಾಗಿ ಹದಗೊಳ್ಳುತ್ತದೆ ಮತ್ತು ಮುಂಗಾರು ಬೆಳೆಗಳಿಗೆ ಸಮರ್ಪಕ ಪೌಷ್ಟಿಕಾಂಶ ಸಿಗುತ್ತದೆ.

ನರಗನಹಳ್ಳಿ, ಚಿನ್ನಸಮುದ್ರ, ಗಂಗನಕಟ್ಟೆ, ಹೊನ್ನನಾಯಕನಹಳ್ಳಿ, ಓಬಣ್ಣನಹಳ್ಳಿ, ಬಾವಿಹಾಳು ಸೇರಿ ಇತರ ಗ್ರಾಮಗಳಲ್ಲಿ ಈಗಾಗಲೇ ಮೆಕ್ಕೆಜೋಳ ಕಟಾವು ಕಾರ್ಯ ಬಹುತೇಕ ಮುಗಿದಿದ್ದು, ರೈತರು ಟ್ರ್ಯಾಕ್ಟರ್ ಮೂಲಕ ಹಿಂಗಾರು ಮಾಗಿ ಉಳುಮೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net