ಸಿಸಿಎಸ್‌ಆರ್ ನಿಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಕೈಗಾರಿಕೆಗಳು, ಕಂಪನಿಗಳ ಪ್ರತಿನಿಧಿಗಳ ಜತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಚ್.ಟಿ. ಶೇಖರ್, ಕೃಷ್ಣಪ್ರಸಾದ್, ಪಡದಯ್ಯ ಸಿ.ಹಿರೇಮಠ್ ಇತರರಿದ್ದರು.
ದಾವಣಗೆರೆ: ಜಿಲ್ಲೆಯ 30 ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಜಿಲ್ಲೆಯ ಕೈಗಾರಿಕೆಗಳು, ಕಂಪನಿಗಳು ಸಿಸಿಎಸ್‌ಆರ್ ನಿಧಿಯಡಿ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮನವಿ ಮಾಡಿದರು.
ಶಾಲಾ ಶಿಕ್ಷಣದಲ್ಲಿ ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಕೈಗಾರಿಕೆಗಳು, ಕಂಪನಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳ ಜತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕೆಪಿಎಸ್ ಶಾಲೆಯಲ್ಲಿ ಓದಿದ ಭರತ್ ಎಂಬ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ ಪೂರ್ಣ ಅಂಕ ಪಡೆದಿದ್ದಾನೆ. ಎಲ್‌ಕೆಜಿಯಿಂದ ಪಿಯುವರೆಗೆ ಒಂದೇ ಸೂರಿನಡಿ ಕೆಪಿಎಸ್ ಶಾಲೆಗಳು ನಡೆಯುತ್ತಿವೆ. ಸಿಸಿಎಸ್‌ಆರ್ ನಿಧಿಯಡಿ ಈ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಶಾಲೆಗಳಲ್ಲಿ ಮಕ್ಕಳ ಸಂಖ್ಯಾಬಲ ಹೆಚ್ಚಲಿದೆ ಎಂದರು.
ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಆದರೆ ನಮ್ಮ ರಾಜ್ಯದ ನೀರು, ವಿದ್ಯುತ್ ಇತರೆ ಸವಲತ್ತು ಪಡೆಯುವ ಕೈಗಾರಿಕೆಗಳು, ಕಾರ್ಪೋರೇಟ್ ಸಂಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ನೆರವು ನೀಡುವ ಜತೆಯಲ್ಲೇ ಸ್ಥಳೀಯವಾಗಿಯೂ ಸಹಕಾರ ನೀಡಬೇಕು ಎಂಬುದು ಮುಖ್ಯಮಂತ್ರಿಯ ಆಶಯ. ಹೀಗಾಗಿ ಈ ಕಾರ್ಯಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಾರ್ಪೋರೇಟ್ ಸಹಭಾಗಿತ್ವ ಉತ್ತೇಜಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಸಿಎಸ್‌ಆರ್ ಕೋಶವನ್ನು ಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಕೆಪಿಎಸ್ ಶಾಲೆಗಳ ಮೂಲ ಸೌಕರ್ಯಕ್ಕಾಗಿ ಜಿಲ್ಲೆಯ 30 ಶಾಲೆಗಳನ್ನು ಗುರುತಿಸಲಾಗಿದೆ. ಇಲ್ಲಿ 7696 ವಿದ್ಯಾರ್ಥಿಗಳಿದ್ದಾರೆ.
ಈ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ, ಡಿಜಿಟಲ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಪೀಠೋಪಕರಣ, ಕುಡಿವ ನೀರು, ಶೌಚಗೃಹ, ಕ್ರೀಡಾಸಾಮಗ್ರಿ, ಬಸ್ ವ್ಯವಸ್ಥೆ, ಸೌರಶಕ್ತಿ ಸೇರಿ ಇನ್ನಿತರೆ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಇದೆ ಎಂದರು.
ಜಿಲ್ಲೆಯ ಕಲ್ಲೇದೇವರಪುರ, ಕೋಲ್ಕುಂಟೆ, ಅಣಜಿ, ಹುಚ್ಚವ್ವನಹಳ್ಳಿ ಸರ್ಕಾರಿ ಶಾಲೆಗಳು ಚಿತ್ರನಟರು, ಎಂಎಲ್ಸಿ, ದಾನಿಗಳ ನೆರವಲ್ಲಿ ಅಭಿವೃದ್ಧಿಯಾದ ನಿದರ್ಶನಗಳಿವೆ. ಹೀಗಾಗಿ ಸ್ಥಳೀಯ ದಾನಿಗಳು ನೀವು ಓದಿದ ಶಾಲೆಗಳಿಗೆ ಸಹಾಯಹಸ್ತ ಚಾಚಬೇಕು. ಸಹಾಯ ನೀಡುವ ಕೈಗಾರಿಕೆಗಳು, ಕಂಪನಿಗೆ ಪ್ರಮಾಣಪತ್ರ ನೀಡುವ ಜತೆಗೆ ಅವರ ಸಮಸ್ಯೆಗಳತ್ತ ಬಗೆಹರಿಸುವಲ್ಲಿ ಜಿಲ್ಲಾಡಳಿತ ಅವರ ಜತೆಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವೆಡೆ ಟೆಂಡರ್ ಇಲ್ಲದಲೇ ಎಸ್‌ಡಿಎಂಸಿ ನೇತೃತ್ವದಲ್ಲೇ ನಡೆದ ಶಾಲಾ ಕಟ್ಟಡ ಕಾಮಗಾರಿಗಳು ಉತ್ತಮವಾಗಿವೆ ಎಂದ ಅವರು, ರೈತರು, ಬಡವರ ಮಕ್ಕಳಿಗೆ ಕನಿಷ್ಠ 2ರಂತೆ ಉಚಿತ ಪ್ರವೇಶಾವಕಾಶ ಕಲ್ಪಿಸುವಂತೆ ಜಿಲ್ಲಾಡಳಿತ ಮಾಡಿದ ಮನವಿಗೆ ಜಿಲ್ಲೆಯ ಖಾಸಗಿ ಪಪೂ, ಪದವಿ ಕಾಲೇಜು ಮಂಡಳಿಗಳು ಸಮ್ಮತಿಸಿವೆ ಎಂದೂ ಹೇಳಿದರು.
ನನ್ನ ಅವಧಿಯಲ್ಲಿ ದಾವಣಗೆರೆ ಜಿಲ್ಲೆಗೆ ಸುಮಾರು 25 ಕೋಟಿ ರೂ. ಮೊತ್ತದ ಸಿಎಸ್‌ಆರ್ ಅನುದಾನ ತರಿಸಿಕೊಳ್ಳಲಾಗಿದೆ. ಚಿಗಟೇರಿ ಆಸ್ಪತ್ರೆಗೆ ಸಲಕರಣೆ, ಯಂತ್ರೋಪಕರಣ ಖರೀದಿಗೆ ಸಹಕಾರವಾಗಿದೆ. ಕುಷ್ಠ ಹಾಗೂ ಕ್ಷಯ ರೋಗಿಗಳಿಗೆ ಜಿಂದಾಲ್ ಸಂಸ್ಥೆಯಿಂದ 1.60 ಕೋಟಿ ರೂ. ಮೊತ್ತದ ಪೌಷ್ಟಿಕ ಆಹಾರ ಪೂರೈಕೆಯಾಗಿದೆ ಎಂದರು.
ನಮ್ಮ ಕೈಗಾರಿಕೆಗಳ ವತಿಯಿಂದ ಪಿಎಂ ಪರಿಹಾರನಿಧಿ, ಸಿಎಂ ಪರಿಹಾರನಿಧಿಗೆ ಹಣ ನೀಡುತ್ತಿದ್ದೆವು. ಇನ್ನು ಸರ್ಕಾರಿ ಶಾಲೆಗಳಿಗೂ ನೆರವು ನೀಡಲಾಗುವುದು ಎಂದು ಉದ್ಯಮಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ. ಶೇಖರ್, ಡಿಡಿಪಿಐ ಕೃಷ್ಣ ಪ್ರಸಾದ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಡದಯ್ಯ ಸಿ.ಹಿರೇಮಠ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಡಿಡಿಪಿಯು ಪಳನಿಸ್ವಾಮಿ ಇತರರಿದ್ದರು.