ರೋಗಿಗಳ ಆಶಾಕಿರಣ ‘ಹೃದಯ ಜ್ಯೋತಿ’

ಹೃದಯಜ್ಯೋತಿ
ಹೃದಯಜ್ಯೋತಿ
Published on

ಪ್ರಮುಖ ಮುಖ್ಯಾಂಶಗಳು

  • ಪುನೀತ್ ರಾಜಕುಮಾರ್ ಹೆಸರಿನ ಯೋಜನೆ
  • ಹರಿಹರ, ಜಗಳೂರು ತಾಲೂಕು ಆಸ್ಪತ್ರೆಗಳಲ್ಲಿ ಸೇವೆ
ರಮೇಶ ಜಹಗೀರದಾರ್ ದಾವಣಗೆರೆ : ಡಾ. ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆ ಹೃದ್ರೋಗಿಗಳಿಗೆ ಆಶಾಕಿರಣವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇದರ ಪ್ರಯೋಜನ ಪಡೆದ 250 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇತ್ತೀಚೆಗೆ ಹಠಾತ್ ಮತ್ತು ತೀವ್ರ ಹೃದಯಘಾತದಿಂದ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚಾಗಿವೆ. ಇದೇ ಕಾರಣಕ್ಕೆ ಯುವಕರು ಅಕಾಲಿಕ ಮರಣಕ್ಕೆ ತುತ್ತಾದ ಉದಾಹರಣೆಗಳಿವೆ. ರೋಗ ಲಕ್ಷಣಗಳು ಪ್ರಾರಂಭವಾದ 60 ನಿಮಿಷಗಳಲ್ಲಿ (ಗೋಲ್ಡನ್ ಅವರ್) ತುರ್ತು ಚಿಕಿತ್ಸೆ ನೀಡಿದಲ್ಲಿ ಅಪಾಯ ಕಡಿಮೆ ಮಾಡಬಹುದು.
ಇದನ್ನು ಮನಗಂಡು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಸಾಂಕ್ರಾಮಿಕ ರೋಗಗಳ ವಿಭಾಗದ ಮೂಲಕ ಡಾ. ಪುನೀತ್ ರಾಜಕುಮಾರ್ ಹೃದಯ ಜೋತಿ ಯೋಜನೆಯು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಸ್ಥಾಪಿತಗೊಂಡು ಹೃದಯಾಘಾತದ ನಿರ್ವಹಣೆಯ ಸೇವೆ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿ 2023ರ ಮಾರ್ಚ್‌ನಲ್ಲಿ ಆರಂಭಗೊಂಡು, ಎರಡನೇ ಹಂತದಲ್ಲಿ 2024ರ ಮಾರ್ಚ್‌ನಿಂದ ಸೇವೆ ನೀಡಲಾಗುತ್ತಿದ್ದೆ. ಇಲ್ಲಿಯವರೆಗೆ 86 ತಾಲೂಕು ಹಾಗೂ ಜಿಲ್ಲಾಮಟ್ಟದ ಆಸ್ಪತ್ರೆಗಳು ಸ್ಪೋಕ್ಸ್‌ಗಳಾಗಿ, ಹೃದಯ ಸಂಬಂಧಿ ಸಮಗ್ರ ಚಿಕಿತ್ಸೆ ನೀಡುವ ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಇತರ ಆಯ್ದ ಖಾಸಗಿ ಆಸ್ಪತ್ರೆಗಳು ಹಬ್‌ಗಳಾಗಿ ಕಾರ್ಯ ನಿರ್ವಹಿಸುತ್ತಿವೆ.
ಎದೆನೋವು ಅಥವಾ ಹೃದ್ರೋಗದ ಲಕ್ಷಣಗಳಿರುವ ವ್ಯಕ್ತಿ ಈ ಆಸ್ಪತ್ರೆಗೆ ಬಂದಾಗ ಇಸಿಜಿ ಮಾಡಿ ಅದನ್ನು ತಜ್ಞ ವೈದ್ಯರ ಅಭಿಪ್ರಾಯಕ್ಕಾಗಿ ಆನ್‌ಲೈನ್ ಮೂಲಕ ಕಳಿಸಲಾಗುತ್ತದೆ. ತಜ್ಞ ವೈದ್ಯರು ಇಸಿಜಿ ವರದಿಯನ್ನು ಗಮನಿಸಿ 2ರಿಂದ 5 ನಿಮಿಷಗಳಲ್ಲಿ ಅಭಿಪ್ರಾಯ ತಿಳಿಸುತ್ತಾರೆ.
ಕೆಲವರಿಗೆ ಹೃದಯಾಘಾತ ಆಗಿದ್ದರೆ ಅವರನ್ನು ತಕ್ಷಣ ನಿಗದಿತ ಆಸ್ಪತ್ರೆಗೆ (ಹಬ್ ಕೇಂದ್ರ) ಕಳಿಸಲಾಗುತ್ತದೆ. ಅಗತ್ಯ ಇರುವವರಿಗೆ ಟೆನೆಕ್ಟೆಪ್ಲೇಸ್ ಎಂಬ ಜೀವ ರಕ್ಷಕ ಔಷಧವನ್ನು ನೀಡಲಾಗುತ್ತದೆ. ಕೆಲವರಿಗೆ ಏನೂ ಸಮಸ್ಯೆ ಇಲ್ಲದಿರಬಹುದು.

27 ಸಾವಿರ ಜನರ ತಪಾಸಣೆ

ದಾವಣಗೆರೆ ಜಿಲ್ಲೆಯಲ್ಲಿ ಹರಿಹರ ಮತ್ತು ಜಗಳೂರು ತಾಲೂಕು ಆಸ್ಪತ್ರೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು ಇದುವರೆಗೆ ಒಟ್ಟು 27 ಸಾವಿರ ಜನರನ್ನು ಹೃದಯ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ 250 ಮಂದಿ ಹೃದಯಾಘಾತ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದ ವಿಶೇಷತೆ ಎಂದರೆ, ತುರ್ತು ಹೃದಯಾಘಾತ ರೋಗಿಗಳಿಗೆ ಟೆನೆಕ್ಟೆಪ್ಲೇಸ್ ಎಂಬ ಜೀವ ರಕ್ಷಕ ಔಷಧವನ್ನು ಸಮಯಕ್ಕೆ ಸರಿಯಾಗಿ ಉಚಿತವಾಗಿ ನೀಡಲಾಗುತ್ತದೆ. ಜತೆಗೆ ಟೆಲಿಮೆಡಿಸಿನ್ ವ್ಯವಸ್ಥೆಯ ಮೂಲಕ ತಜ್ಞ ವೈದ್ಯರ ಸಲಹೆ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜಗಳೂರು ಮತ್ತು ಹರಿಹರ ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜನಸಾಮಾನ್ಯರಿಗೆ ತ್ವರಿತ ಮತ್ತು ಗುಣಮಟ್ಟದ ಹೃದಯ ಚಿಕಿತ್ಸೆಯನ್ನು ಒದಗಿಸುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಮಹತ್ವದ ಆರೋಗ್ಯ ಸೇವೆಯಾಗಿ ಪರಿಣಮಿಸಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಸಿಬ್ಬಂದಿಯ ಸಮನ್ವಯದ ಫಲವಾಗಿ ಅನೇಕ ಜೀವಗಳನ್ನು ಉಳಿಸಲು ಈ ಯೋಜನೆ ನೆರವಾಗುತ್ತಿದೆ.
"

ಡಾ. ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆ ಗ್ರಾಮೀಣ ಜನರಿಗೆ ವರದಾನವಾಗಿದೆ. ಹೃದಯಸಂಬಂಧಿ ಕಾಯಿಲೆಗಳಿಗೆ ತಾಲೂಕುಮಟ್ಟದಲ್ಲೆ ಚಿಕಿತ್ಸೆಯ ವ್ಯವಸ್ಥೆಯಾಗುತ್ತಿದೆ. ಇದರಿಂದ ರೋಗಿಗಳ ಸಾವಿನ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ. ಈ ಯೋಜನೆಯು ಶೀಘ್ರವೇ ಇತರ ತಾಲೂಕುಗಳಿಗೆ ವಿಸ್ತರಣೆಯಾಗಲಿದೆ.

— ಡಾ.ಜಿ.ಡಿ. ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net