ಅಧಿಕ ಮಾಸ ಆಚರಣೆಯಿಂದ ಆರೋಗ್ಯ ಸಮೃದ್ಧಿ

ದಾವಣಗೆರೆಯಲ್ಲಿ ಆದರ್ಶ ಯೋಗ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರವಚನಕಾರ ಗೋಪಾಲಾಚಾರ್ಯ ಮಣ್ಣೂರ್ ಅವರನ್ನು ಸನ್ಮಾನಿಸಲಾಯಿತು. ಡಾ. ರಾಘವೇಂದ್ರ ಗುರೂಜಿ, ಕೆ.ಈಶ್ವರ್ ಇದ್ದರು.
ದಾವಣಗೆರೆಯಲ್ಲಿ ಆದರ್ಶ ಯೋಗ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರವಚನಕಾರ ಗೋಪಾಲಾಚಾರ್ಯ ಮಣ್ಣೂರ್ ಅವರನ್ನು ಸನ್ಮಾನಿಸಲಾಯಿತು. ಡಾ. ರಾಘವೇಂದ್ರ ಗುರೂಜಿ, ಕೆ.ಈಶ್ವರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 33 ಸಂಖ್ಯೆಯಲ್ಲಿ ದಾನ ನೀಡಿದರೆ ಸಿಗಲಿದೆ ಪುಣ್ಯಫಲ
  • ಪ್ರವಚನಕಾರ ಗೋಪಾಲಾಚಾರ್ಯ ಮಣ್ಣೂರ್ ಹೇಳಿಕೆ
  • ವಿಶ್ವಯೋಗ ಮಂದಿರದಲ್ಲಿ ಉಪನ್ಯಾಸ ಕಾರ್ಯಕ್ರಮ
ದಾವಣಗೆರೆ: ಅಧಿಕ ಮಾಸದ ಆಚರಣೆಯಿಂದ ಸಂತೋಷ, ಆರೋಗ್ಯ, ಶಾಂತಿ, ಸಮೃದ್ಧಿಯ ಜತೆಗೆ ಅಪೇಕ್ಷೆಗಳು ಶೀಘ್ರ ನೆರವೇರಲಿವೆ. ಮೋಕ್ಷ ಸಹಿತ ಪುರುಷಾರ್ಥಗಳು ಲಭಿಸಲಿವೆ ಎಂದು ಹಿರಿಯ ಪ್ರವಚನಕಾರ, ವಾಗ್ಮಿ ಗೋಪಾಲಾಚಾರ್ಯ ಮಣ್ಣೂರ್ ಅಭಿಪ್ರಾಯಪಟ್ಟರು.
ದೇವರಾಜ ಅರಸು ಬಡಾವಣೆಯ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕ ಮಾಸ ಮಹತ್ವ ಮತ್ತು ಆಚರಣೆಯ ಫಲ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಧಿಕ ಮಾಸವು ಪ್ರತಿ ಮೂವತ್ಮೂರು ತಿಂಗಳಿಗೆ ಬರುವ ಒಂದು ಹೆಚ್ಚಿನ ತಿಂಗಳಾಗಿದೆ. ಈ ಪವಿತ್ರ ಮಾಸದಲ್ಲಿ ಮೂವತ್ಮೂರು ಸಂಖ್ಯೆಯಲ್ಲಿ ದಾನ ನೀಡಿದರೆ ಹೆಚ್ಚಿನ ಪುಣ್ಯ ಸಿಗಲಿದೆ. ಅಪೂಪ (ಅತಿರಸ) ಕಂಚಿನ ಪಾತ್ರೆಯಲ್ಲಿಟ್ಟು ಕೊಟ್ಟರೆ ಉತ್ತಮ ಫಲ ಪ್ರಾಪ್ತಿಯಾಗಲಿದೆ.
ಇದು ಸಾಧ್ಯವಾಗದಿದ್ದಲ್ಲಿ ಮೂವತ್ಮೂರು ಮಾವಿನ ಹಣ್ಣು, ಬಾಳೆ ಹಣ್ಣು, ಬೆಲ್ಲದ ಅಚ್ಚು, ಉತ್ತತ್ತಿ, ಬಾದಾಮಿ, ಕಲ್ಲು ಸಕ್ಕರೆ ಇಲ್ಲವೇ 33 ರೂ. ದಕ್ಷಿಣೆಯನ್ನು ಆಚಾರ-ವಿಚಾರ- ಜಪ-ಪಾರಾಯಣ ಇತ್ಯಾದಿ ಆಚರಣೆಯುಳ್ಳ ತಮ್ಮ ಗುರುಗಳಿಗೆ ಭಕ್ತಿಪೂರ್ವಕವಾಗಿ ಕೊಟ್ಟು ನಮಸ್ಕರಿಸಬೇಕು. ಆಗ ದಾನಿಗಳಿಗೆ ಹೆಚ್ಚಿನ ಸುಖ, ಆರೋಗ್ಯ, ಶಾಂತಿ ಸಿಗಲಿದೆ ಎಂದು ವಿವರವಾಗಿ ಹೇಳಿದರು.
ಪ್ರಾರಂಭದಲ್ಲಿ ಕು. ಚಿನ್ಮಯಿ ಹಿಂದೂಸ್ತಾನಿ ಸಂಗೀತ ಸುಧೆ ನಡೆಸಿಕೊಟ್ಟರು. ಪ್ರತಿಷ್ಠಾನದ ಯೋಗಗುರು ಡಾ. ರಾಘವೇಂದ್ರ ಗುರೂಜಿ ಸ್ವಾಗತಿಸಿದರು.
ವಿಶೇಷ ಆಹ್ವಾನಿತರಾಗಿ ನೋಟರಿ ಪಬ್ಲಿಕ್ ಕೆ.ಈಶ್ವರ್, ಪುಷ್ಪಾ ಈಶ್ವರ್, ಎಲ್.ಐ.ಸಿ.ಯ ಪಿ. ಶೇಷಾದ್ರಿ, ದೂಡಾದ ಕಲ್ಲೇಶ್, ನಿವೃತ್ತ ಇಂಜಿನಿಯರ್ ಸಾಂಬಶಿವಯ್ಯ, ನಿವೃತ್ತ ಡಿಡಿಪಿಐ ಗಂಗಾಧರಸ್ವಾಮಿ, ದಾನಿ ನಾಗರಾಜ್, ಎಚ್. ಮಂಜುನಾಥ್ ಇದ್ದರು. ಬಾಲಕಿ ಎ.ಎಂ. ಇಂಪನಾ ಗಾಂಧಾರಿ ವಿದ್ಯೆಯ ಪ್ರಕಾರಗಳನ್ನು ಪ್ರದರ್ಶಿಸಿದಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net