ದಾವಣಗೆರೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಶಾಲೆಯ ಶಿಕ್ಷಕಿಯರು ರಾಶಿ ಪೂಜೆ ನೆರವೇರಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗ್ರಾಮೀಣ ಪರಿಸರ ನಿರ್ಮಾಣ
ಹಬ್ಬದ ವಿಶೇಷತೆಯ ಪರಿಚಯ
ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು
ದಾವಣಗೆರೆ:ಅಲ್ಲೊಂದು ಪುಟ್ಟ ಹಳ್ಳಿಯೇ ಸೃಷ್ಟಿಯಾಗಿತ್ತು. ಕೃಷಿ ಜಮೀನು, ಧಾನ್ಯಗಳ ರಾಶಿ, ಬೆವರು ಸುರಿಸಿ ದುಡಿಯುವ ರೈತರ ಪರಿಶ್ರಮ, ಪಶು ಸಂಪತ್ತು ಸೇರಿ ಒಟ್ಟಾರೆ ಗ್ರಾಮೀಣ ಜನಜೀವನದ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನ ಅಲ್ಲಿ ನಡೆಯಿತು.
ನಗರದ ಮಯೂರ್ ಗ್ಲೋಬಲ್ ಸ್ಕೂಲ್‌ನಲ್ಲಿ ಮಂಗಳವಾರ ಕಂಡುಬಂದ ದೃಶ್ಯವಿದು. ಸುಗ್ಗಿ ಹಬ್ಬ ಸಂಕ್ರಾಂತಿಯ ವಿಶೇಷತೆಯನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿಯವರು ವಿಭಿನ್ನವಾಗಿ ಆಯೋಜನೆ ಮಾಡಿದ್ದರು.
ಶಾಲೆಯ ಆವರಣವನ್ನು ಮಾವಿನ ತೋರಣ, ಬಾಳೆ ಕಂದು, ತೆಂಗಿನ ಗರಿಗಳಿಂದ ಅಲಂಕರಿಸಲಾಗಿತ್ತು. ಬಣ್ಣ ಬಣ್ಣದ ರಂಗೋಲಿಯನ್ನು ಹಾಕಲಾಗಿತ್ತು. ಶಾಲೆಯವರೇ ಸಾಕಿದ ಹಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಪ್ಪಟ ಗ್ರಾಮೀಣ ಸೊಗಡಿನ ಉಡುಪುಗಳಲ್ಲಿ ಮಿಂಚಿದರು. ಬಾಲಕರು ಅಂಗಿ, ಪಂಚೆ ತೊಟ್ಟು ಬಂದಿದ್ದರು, ಬಾಲಕಿಯರು ಸಾಂಪ್ರದಾಯಿಕ ಸೀರೆಯುಟ್ಟಿದ್ದರು.
ಸುಗ್ಗಿ ಹಬ್ಬ ಅಲ್ಲಿ ರಂಗೇರಿತ್ತು. ಬಾಗಿಲ ಮೂಲಕ ಒಳಗೆ ಪ್ರವೇಶಿಸಿದರೆ ರಂಗೋಲಿಯ ಹಿನ್ನೆಲೆಯಲ್ಲಿ ಅಕ್ಕಿ, ರಾಗಿ, ಜೋಳ ಇನ್ನಿತರ ಧಾನ್ಯಗಳ ರಾಶಿ ಹಾಕಲಾಗಿತ್ತು. ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ರಾಶಿ ಪೂಜೆ ನೆರವೇರಿಸಿದರು. ಭೂಮಿ ತಾಯಿಗೆ ನಮಿಸಿದರು.
ಬಣ್ಣ ಬಣ್ಣದ ಮಣ್ಣಿನ ಮಡಕೆಗಳು ಆವರಣವನ್ನು ತುಂಬಿಕೊಂಡಿದ್ದವು. ಹಣ್ಣು, ಅಡಕೆ, ಬೆಲ್ಲ, ಹಳ್ಳಿಯ ಊಟದ ಪದಾರ್ಥಗಳು ಕಂಡುಬಂದವು. ಥರ್ಮೋಕೋಲ್ ಇನ್ನಿತರ ಪರಿಕರಗಳನ್ನು ಉಪಯೋಗಿಸಿ ನೇಗಿಲು, ಜೋಡೆತ್ತುಗಳನ್ನು ಮಾಡಿದ್ದರು. ಬಿದಿರು ಬುಟ್ಟಿ, ಮೊರ, ಹುಲ್ಲಿನ ಹೊರೆ, ಭತ್ತದ ಸಸಿಗಳು ಇದ್ದವು.
ಪುಟ್ಟ ಬಾಲಕನೊಬ್ಬ ಬಳೆಗಾರನ ವೇಶದಲ್ಲಿ ಕುಳಿತಿದ್ದ. ಬಾಲಕಿಯೊಬ್ಬಳು ಶಾವಿಗೆ ಮಣೆಯಲ್ಲಿ ಶಾವಿಗೆ ಮಾಡುತ್ತಿದ್ದಳು. ಬೀಸುವ ಕಲ್ಲಿನಲ್ಲಿ ರಾಗಿ ಬೀಸುವುದು, ಒನಕೆಯಿಂದ ಧಾನ್ಯ ಕುಟ್ಟುವುದು, ಕಡೆಗೋಲಿನಿಂದ ಮೊಸರು ಕಡೆದು ಮಜ್ಜಿಗೆ ಮಾಡುವುದು, ಹಾಲು ಉಕ್ಕಿಸುವುದು, ರೊಟ್ಟಿ ಸುಡುವುದು ಹೀಗೆ ಹಳ್ಳಿಯಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯಗಳನ್ನು ಮಕ್ಕಳಿಂದಲೇ ಮಾಡಿಸಲಾಯಿತು. ಅವರಿಗೆ ಶಿಕ್ಷಕಿಯರು ನೆರವಾದರು.
"
ಮಕ್ಕಳಿಗೆ ಗ್ರಾಮೀಣ ಹಬ್ಬಗಳ ವಿಶೇಷತೆ ತಿಳಿಯಬೇಕು. ಅವುಗಳನ್ನು ಆಚರಿಸುವ ಉದ್ದೇಶವನ್ನು ಅರ್ಥ ಮಾಡಿಸುವ ದೃಷ್ಟಿಯಿಂದ ಶಾಲೆಯ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ಸಂಸ್ಕೃತಿಯ ಮಹತ್ವ ಮಕ್ಕಳಿಗೆ ಅರ್ಥವಾಗಬೇಕು. ಹಳ್ಳಿ ಸೊಗಡಿನ ಪರಿಚಯವಾಗಬೇಕು.