ಹರಿಹರ Harihar: ಅಂತ್ಯಸಂಸ್ಕಾರ ಮಾಡಲು ಸೂಕ್ತ ಜಾಗವನ್ನು ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ತಾಲೂಕಿನ ಬನ್ನಿಕೋಡು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿದರು.
ಬಾಗಳಿ ಕೆಂಚಮ್ಮ ಬುಧವಾರ ಬೆಳಗ್ಗೆ ನಿಧನ ಹೊಂದಿದ್ದು, ಅಂತ್ಯಸಂಸ್ಕಾರ ಮಾಡಲು ರುದ್ರಭೂಮಿ ಇಲ್ಲದ ಕಾರಣ ಗ್ರಾಮಸ್ಥರು ಮೃತ ದೇಹವನ್ನು ಗ್ರಾಪಂ ಆವರಣದಲ್ಲಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ರುದ್ರಭೂಮಿ ಸಮಸ್ಯೆಯನ್ನು ಇತ್ಯರ್ಥ ಮಾಡುವಂತೆ ಒತ್ತಾಯಿಸುತ್ತ ಬಂದಿದ್ದರು. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರತಿಭಟನೆಗೆ ಕಾರಣವಾಗಿದೆ. ತಹಸೀಲ್ದಾರ್ ಆಗಮಿಸಿ ಸೂಕ್ತ ಭರವಸೆ ನೀಡುವವರೆಗೂ ಇಲ್ಲಿಂದ ಶವವನ್ನು ತೆಗೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗುರುಬಸವರಾಜ್, ಬನ್ನಿಕೋಡು ಗ್ರಾಮಕ್ಕೆ ಸ್ಮಶಾನಕ್ಕೆಂದು 1926ರಲ್ಲಿಯೇ ಸರ್ಕಾರ 2 ಎಕರೆ 16 ಗುಂಟೆ ಜಮೀನನ್ನು ನೀಡಿದೆ. ಆದರೆ ಮೇಲ್ನೋಟಕ್ಕೆ ಒತ್ತುವರಿಯಾಗಿರುವುದು ಕಂಡು ಬರುತ್ತಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಡಿ.22 ರಂದು ಈ ಜಾಗವನ್ನು ಸರ್ವೇ ಮಾಡಿ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗುವುದು. ನಂತರ ಹದ್ದುಬಸ್ತು ಮಾಡಿ ಕೊಡಲಾಗುವುದು ಎಂದು ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಟ್ಟು ಶವ ಸಂಸ್ಕಾರ ಮಾಡಿದ್ದಾರೆ.
ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷೆ ಅನಿತಾ ಹಾಲಪ್ಪ, ಮಾಜಿ ಉಪಾಧ್ಯಕ್ಷ ಕೆ. ಬಸವರಾಜ್, ಸದಸ್ಯರಾದ ಜಯಪ್ಪ, ಸತೀಶ್, ಪಿಡಿಒ ನಾಯಕ್, ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ, ಎಡಿಎಲ್‌ಆರ್, ಗ್ರಾಮದ ಮುಖಂಡರು ಇತರರಿದ್ದರು.