ಬೇಸಿಗೆಗೂ ಮುನ್ನ ಅಂತರ್ಜಲ ಖಾಲಿ !

ಎಚ್. ಬಸವಪುರದಲ್ಲಿ ಅಡಕೆ ತೋಟದ ರಕ್ಷಣೆಗೆ ಕೊಳವೆಬಾವಿ ಕೊರೆಸುತ್ತಿರುವುದು.Borewell
ಎಚ್. ಬಸವಪುರದಲ್ಲಿ ಅಡಕೆ ತೋಟದ ರಕ್ಷಣೆಗೆ ಕೊಳವೆಬಾವಿ ಕೊರೆಸುತ್ತಿರುವುದು.Borewell
Published on

ಪ್ರಮುಖ ಮುಖ್ಯಾಂಶಗಳು

  • ಜಲಪಾತ್ರೆಗಳು ಬಣ ಬಣ
  • ಇಣುಕಿತು ಬರಗಾಲ
  • ತೋಟಕ್ಕೆ ಬೋರ್‌ವೆಲ್ ಲಾರಿಗಳು ಲಗ್ಗೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ಜಿಲ್ಲಾದ್ಯಂತ ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ, ಜನವರಿಯಲ್ಲೇ ಅಂತರ್ಜಲ ಮಟ್ಟ ಕುಸಿದಿದೆ. ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ಬಹುತೇಕ ಗ್ರಾಮ ಗಳಲ್ಲಿ ಕೊಳವೆಬಾವಿಗಳಲ್ಲಿ ನೀರು ಪಾತಾಳಕ್ಕಿಳಿದಿದೆ.
ಅಡಕೆ, ತೆಂಗು, ಮಾವು ಸೇರಿ ಇತರ ತೋಟಗಾರಿಕೆ ಬೆಳೆಗಳ ರಕ್ಷಣೆಗೆ ರೈತರು ಮತ್ತೆ ಕೊಳವೆಬಾವಿ ಕೊರೆಸಲು ಮುಂದಾಗಿದ್ದು ಹಳ್ಳಿಗಳಲ್ಲಿ ನಿತ್ಯವೂ ಬೋರ್‌ವೆಲ್ ಯಂತ್ರಗಳ ಸದ್ದು ಕೇಳಿಬರುತ್ತಿದೆ.
ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಜಾರಿಗೆ ತಂದ ರಾಜನಹಳ್ಳಿ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶ ಕಂಡಿಲ್ಲ.
ಕಳಪೆ ಪೈಪ್‌ಲೈನ್ ಅಳವಡಿಕೆಯಿಂದ ನೀರು ಕೆರೆ ಸೇರುವ ಮುನ್ನವೇ ಪೋಲಾಗುತ್ತಿದೆ. ಕೆರೆಗಳು ಬಣಗುಡುತ್ತಿರುವು ಕಾರಣ ಅಂತರ್ಜಲ ವೃದ್ಧಿಯಾಗದೆ ಕೊಳವೆ ಬಾವಿಗಳು ಬತ್ತುತ್ತಿವೆ.
ಡ್ರಿಲ್ಲಿಂಗ್ ದರ ಏರಿಕೆ: ನೀರಿನ ಕೊರತೆಯ ನಡುವೆ ಬೋರ್‌ವೆಲ್ ಮಾಲೀಕರು ಡ್ರಿಲ್ಲಿಂಗ್ ದರ ಹೆಚ್ಚಿಸಿದ್ದಾರೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
1- 300 ಅಡಿವರೆಗೆ ಪ್ರತಿ ಅಡಿಗೆ 100-115 ರೂ., 300 ಅಡಿ ದಾಟಿದ ನಂತರ ಪ್ರತಿ 100 ಅಡಿಗೆ ರೂ. 10 ರಿಂದ 30 ರೂ. ರವರೆಗೆ ದರ ಏರಿಸಲಾಗಿದೆ. ಡ್ರಿಲ್ಲಿಂಗ್ ಬಿಟ್‌ಗಳ ಬೆಲೆ ಹೆಚ್ಚಾಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂಬುದು ಬೋರ್‌ವೆಲ್ ಮಾಲೀಕರ ವಾದ. ಆದರೆ, ಬೆಳೆ ಉಳಿಸಿಕೊಳ್ಳಲು ಸಾಲ ಮಾಡಿಯಾದರೂ ಕೊಳವೆ ಬಾವಿ ಕೊರೆಯಿಸುವ ಅನಿವಾರ್ಯತೆ ಅನ್ನದಾತರದು.

ಅಚ್ಚುಕಟ್ಟಲ್ಲಿ ಬವಣೆ

ಬಾಡ, ಲೋಕಿಕೆರೆ, ಮಳಲ್ಕೆರೆ, ಕಂದಗಲ್ಲು ಸೇರಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಗೊಳಪಡುವ ಗ್ರಾಮಗಳ ಲ್ಲೂ ಅಂತರ್ಜಲ ಕುಸಿತದ ಬಿಸಿ ತಟ್ಟಿದೆ. ಮಾಯಕೊಂಡ, ಹುಚ್ಚವ್ವನಹಳ್ಳಿ, ಎಚ್. ಬಸವಪುರ, ಕೊಡಗನೂರು ಭಾಗದ ಅಡಕೆ ತೋಟಗಳ ಉಳಿವಿಗೆ ಬೋರ್‌ವೆಲ್ ಮೊರೆ ಹೋಗುವುದು ಅನಿವಾರ್ಯ ವಾಗಿದೆ.
"

22 ಕೆರೆ ತುಂಬಿಸುವ ಯೋಜನೆಯಡಿ ಆನಗೋಡು ಹೋಬಳಿಯ ಕೆರೆಗಳು ಸೇರಿದ್ದರೂ ಇದುವರೆಗೂ ನಿರೀಕ್ಷಿಸಿದಷ್ಟು ನೀರು ಸಿಕ್ಕಿಲ್ಲ. ಸರ್ಕಾರ ಕೂಡಲೇ ಗಮನಹರಿಸಿ ಹೊಸ ಪೈಪ್‌ಲೈನ್ ಅಳವಡಿಸುವ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.

22 ಕೆರೆ ಯೋಜನೆಯ ಹೊಸ ಪೈಪ್‌ಲೈನ್ ಅಳವಡಿಕೆಗೆ ಈಗಾಗಲೇ 18 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಹೆಚ್ಚುವರಿ 75 ಕೋಟಿ ರೂ. ಬಿಡುಗಡೆಗೆ ಸಿಎಂ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.

ನಮ್ಮ ಭಾಗದಲ್ಲಿ ಜನವರಿಯಲ್ಲೇ ನೀರು ಕಡಿಮೆಯಾಗಿದೆ. ಕೆರೆ ತುಂಬಿಸುವ ಯೋಜನೆಗಳ ನಿರ್ವಹಣೆ ಕಡೆಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net