ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳನ್ನು ಶಾಸಕ ಬಸವರಾಜ್ ಶಿವಗಂಗಾ ಉದ್ಘಾಟಿಸಿದರು. ಡಾ. ರಾಹುಲ್ ದೇವರಾಜ್, ಬಿ.ಜಿ. ಅಮೃತೇಶ್ವರ, ಶಶಿಕಿರಣ್, ನಾಗರಾಜ್ ನಾಡಿಗ್ ಇತರರಿದ್ದರು.basavaraj shivaganga
ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ
ಚನ್ನಗಿರಿ: ಜೀವನವನ್ನು ರೂಪಿಸುವಲ್ಲಿ ಪದವಿ ವ್ಯಾಸಂಗದ ಮೂರು ವರ್ಷ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಮೊಬೈಲ್‌ಗೆ ನೀಡುವ ಸಮಯವನ್ನು ಓದಿನ ಕಡೆಗೆ ಕೇಂದ್ರೀಕರಿಸಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಗ್ರಹಣಶಕ್ತಿ ವ್ಯತ್ಯಾಸವಿರಬಹುದು, ಆದರೆ ಕೀಳರಿಮೆ ಬೇಡ. ಅಂಬೇಡ್ಕರ್ ಅವರು ಹೇಳುವಂತೆ, ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದೆ ಸಮಾಜದಲ್ಲಿ ತಲೆ ಎತ್ತಿ ಬದುಕುವಂತೆ ಮಾಡುತ್ತದೆ. ಪಾಲಕರು ತಮ್ಮ ಕಷ್ಟಗಳನ್ನು ಮರೆತು ಮಕ್ಕಳ
ಶಿಕ್ಷಣಕ್ಕಾಗಿ ಹಣ ಕ್ರೋಡೀಕರಿಸಿ ಕಾಲೇಜಿಗೆ ಕಳುಹಿಸುತ್ತಾರೆ. ಅವರ ನಂಬಿಕೆಯನ್ನು ಹುಸಿಗೊಳಿಸದೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದರು.
ನಮ್ಮ ಕಾಲೇಜು ವಿಶ್ವವಿದ್ಯಾಲಯದ ಮಾದರಿಯಲ್ಲಿ ಬೆಳೆಯಬೇಕು ಎಂಬುದು ನನ್ನ ಆಸೆ. ಈ ನಿಟ್ಟಿನಲ್ಲಿ ಆಡಿಟೋರಿಯಂ ಮರುನಿರ್ಮಾಣಕ್ಕಾಗಿ 90 ಲಕ್ಷ ರೂ., ಬಿಸಿಎ ಕೋರ್ಸ್ ಕಟ್ಟಡಕ್ಕಾಗಿ 1.3 ಕೋಟಿ ರೂ. ಹಾಗೂ ಸ್ನಾತಕೋತ್ತರ ಕಟ್ಟಡ ನಿರ್ಮಾಣಕ್ಕಾಗಿ 2.5 ಕೋಟಿ ರೂ. ಸೇರಿ ಒಟ್ಟು 4.7 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ. ಬದಲಿಗೆ ನನಗೆ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶಿವಮೊಗ್ಗದ ಸಮಾಜ ಸೇವಕ ಹಾಗೂ ಲೇಖಕ ಡಾ. ರಾಹುಲ್ ದೇವರಾಜ್ ಮಾತನಾಡಿ, ಕೇವಲ ಅಂಕಗಳಿಗಾಗಿ ಓದದೆ ಜೀವನ ರೂಪಿಸಿಕೊಳ್ಳಲು ಕಲಿಯಿರಿ. ಇಂದು ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಗ್ರಾಮೀಣ ಭಾಗದ ಮತ್ತು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳೇ ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಡಿಸಿ, ಎಸ್ಪಿ ಆಗುವ ದೊಡ್ಡ ಕನಸು ಕಾಣಬೇಕು ಎಂದು ಪ್ರೇರೇಪಿಸಿದರು.
ಪ್ರಾಚಾರ್ಯ ಬಿ.ಜಿ. ಅಮೃತೇಶ್ವರ, ಗಾಯಕ ಶಶಿಕಿರಣ್, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ನಾಡಿಗ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜ್ಯೋತಿ ಕೋರಿ, ಜೆ. ಜ್ಯೋತಿಪ್ರಸಾದ್, ಸಿ.ವೈ. ರವಿಕುಮಾರ್, ಸಿ.ಆರ್. ನಾಗರಾಜ್, ಸಿ. ರಮೇಶ್, ಎಸ್.ಎಸ್. ಮಧುಕುಮಾರ್ ಇತರರಿದ್ದರು.