ಲೋ ನವೀನ..ಚಿತ್ರಕ್ಕೆ ಉತ್ತಮ ಸ್ಪಂದನೆ

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ನಾಯಕನಟ, ಹಿನ್ನೆಲೆಗಾಯಕ ನವೀನ್ ಸಜ್ಜು ಜತೆ ಗುಡ್ಡಪ್ಪ ಇದ್ದರು.
ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ನಾಯಕನಟ, ಹಿನ್ನೆಲೆಗಾಯಕ ನವೀನ್ ಸಜ್ಜು ಜತೆ ಗುಡ್ಡಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಈಡೇರಿದೆ ಒಳ್ಳೆಯ ಸಿನಿಮಾ ಮಾಡುವ ಕನಸು
  • ಒಳ್ಳೆಯ ಕಂಟೆಂಟ್ ಇದ್ದರೆ ಜನ ಕೈ ಬಿಡಲ್ಲ
  • ನಟ, ಹಿನ್ನೆಲೆಗಾಯಕ ನವೀನ್ ಸಜ್ಜು ಮಾಹಿತಿ
ದಾವಣಗೆರೆ: ಮೇ 15ರಂದು ಬಿಡುಗಡೆಯಾದ ‘ಲೋ ನವೀನ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮೈಸೂರು ಭಾಗದಲ್ಲಿ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ ಎಂದು ಚಿತ್ರದ ನಾಯಕನಟ, ಹಿನ್ನೆಲೆಗಾಯಕ ನವೀನ್ ಸಜ್ಜು ಹೇಳಿದರು.
ವಾರಕ್ಕೆ 8 ಸಿನಿಮಾ ಬಿಡುಗಡೆ ಆಗುತ್ತಿವೆ. ಆದರೆ ಸಣ್ಣ ಬಜೆಟ್ ಇದ್ದರೂ ಉತ್ತಮ ಕಂಟೆಂಟ್ ಇದ್ದರೆ ಜನರು ಕೈ ಬಿಡೋದಿಲ್ಲ ಎಂಬುದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2013ರಲ್ಲಿ ಲೂಸಿಯಾ ಸಿನಿಮಾ ಮೂಲಕ ಗಾಯಕನಾಗಿ ಚಿತ್ರರಂಗಕ್ಕೆ ಬಂದ ನನಗೆ ಉತ್ತಮ ಹಿನ್ನೆಲೆಗಾಯಕ ಪ್ರಶಸ್ತಿಯೂ ಬಂದಿತ್ತು. ಇದುವರೆಗೆ 400ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನೆಲೆಗಾಯನ ಮಾಡಿದ್ದೇನೆ. ರಂಗಭೂಮಿಯಲ್ಲಿ ನಟನೆ ಮೂಲಕ ಹಾಡುಗಾರಿಕೆಗೆ ಬಂದ ನನಗೆ ಒಳ್ಳೆಯ ಸಿನಿಮಾ ಮಾಡುವ ಕನಸಿತ್ತು. ಇದೀಗ ನೆರವೇರಿದೆ ಎಂದು ಹೇಳಿಕೊಂಡರು.
ಲೋ ನವೀನ.. ಕಮರ್ಷಿಯಲ್ ಅಂಶವುಳ್ಳ, ಕುಟುಂಬ ಸದಸ್ಯರು ನೋಡಬಹುದಾದ ಪಕ್ಕಾ ಮನರಂಜನೆಯ ಚಿತ್ರ. ಮೈಸೂರು, ನಂಜನಗೂಡು, ಚನ್ನರಾಯಪಟ್ಟಣ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಪ್ರೀತಿಯ ಕಂಟೆಂಟ್, ಅಣ್ಣ-ತಂಗಿ ಬಾಂಧವ್ಯದ ಚಿತ್ರವಿದು. ಹಳ್ಳಿಯ ಮುಗ್ಧ ಹುಡುಗ ನಗರಕ್ಕೆ ಹೋದಾಗ ಜೀವನ ಕಟ್ಟಿಕೊಳ್ಳುವ ಕತೆ ಚಿತ್ರದಲ್ಲಿದೆ.
ಸು ಫ್ರಂ ಸೋ.. ಲವ್ ಮಾಕ್ಟೇಲ್ ನಂತರದಲ್ಲಿ ಜನರಿಗೆ ಸ್ಫೂರ್ತಿದಾಯಕ ಸಿನಿಮಾ ನೀಡುವ ಕನಸಿತ್ತು. ಲೋ ನವೀನ.. ಚಿತ್ರ ಜನರಿಗೆ ಇಷ್ಟವಾಗುತ್ತಿದೆ. ಇತ್ತೀಚೆಗೆ ಅಶ್ವಿನಿ ಪುನೀತ್‌ರಾಜಕುಮಾರ್ ಅವರಿಂದ ಪ್ರಶಂಸೆ ಸಿಕ್ಕಿರುವುದು ಸಂತೋಷ ನೀಡಿದೆ ಎಂದರು.
ಮುದ್ದೆ-ಉಪ್ಸಾರು ಕುರಿತಂತೆ ಸೋಬಾನೆ ಹಾಡುಗಾರ್ತಿಯರಿಂದಲೇ ಹಾಡಿಸಲ್ಪಟ್ಟ ‘ಕ್ವಾಣಾಣೇ.. ನಂದಾಣೆ ವಾಲಾವೋ..’ ಜಾನದಪ ಶೈಲಿಯ ಹಾಡು ಜಾಲತಾಣದಲ್ಲಿ 9.5 ಕೋಟಿ ವೀಕ್ಷಕರನ್ನು ಸೆಳೆದಿದೆ. ನಿಂಗಣ್ಣೋಯ್ ಸೇರಿ ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು ಚಿತ್ರಕ್ಕೆ ನಾನು ಸಂಗೀತ ನಿರ್ದೇಶನ ಮಾಡಿದ್ದಾಗಿ ಹೇಳಿದರು.
ಧನುರ್ದಾರಿ ಪವನ್ ನಿರ್ದೇಶನದ ಚಿತ್ರವನ್ನು ಎನ್.ಎಸ್. ಸ್ಟುಡಿಯೋ ಕೀರ್ತಿಸ್ವಾಮಿ ಬೆನ್ ಚಿಕ್ಕಸ್ವಾಮಿ ಚಿತ್ರ ನಿರ್ಮಾಣ ಮಾಡಿದ್ದಾರೆ. ವರ್ಷಾ ಗಿರಿಧರ್ ನಾಯಕಿಯಾಗಿ ನಟಿಸಿದ್ದಾರೆ. ರೇಷ್ಮಾ ವಿ ಗೌಡ, ಪ್ರಕಾಶ್ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಇತರರು ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು. ಹೊಂಬಾಳೆ ಫಿಲಂಸ್‌ನ ಗುಡ್ಡಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net