ಚಿರಡೋಣಿಯಲ್ಲಿ ಭತ್ತದ ಬಂಗಾರದ ಬೆಳೆ paddy

ಬಸವಾಪಟ್ಟಣದ ಚಿರಡೋಣಿ ಗ್ರಾಮದಲ್ಲಿ ಭತ್ತ ಬೆಳೆದಿರುವ ರೈತ. paddy
ಬಸವಾಪಟ್ಟಣದ ಚಿರಡೋಣಿ ಗ್ರಾಮದಲ್ಲಿ ಭತ್ತ ಬೆಳೆದಿರುವ ರೈತ. paddy
Published on

ಪ್ರಮುಖ ಮುಖ್ಯಾಂಶಗಳು

  • ಚಿರಡೋಣಿಯಲ್ಲಿ ಭತ್ತದ ಬಂಗಾರದ ಬೆಳೆ
  • ಎಕರೆಗೆ 45 ಕ್ವಿಂಟಲ್ ಇಳುವರಿ
  • ಹೊಸ ಭರವಸೆ ಮೂಡಿಸಿದ ರೈತರು
ಎಂ.ಬಿ. ರಾಜಪ್ಪ ಬಸವಾಪಟ್ಟಣ
ಸಮೀಪದ ಚಿರಡೋಣಿ ಗ್ರಾಮ ಈ ಬಾರಿ ಭತ್ತದ ಸಮೃದ್ಧ ಬೆಳೆಯಿಂದ ಕೃಷಿ ವಲಯದ ಗಮನ ಸೆಳೆಯುತ್ತಿದೆ. ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ಚಿರಡೋಣಿ ಗ್ರಾಮದ ರೈತರು ದಾಖಲೆಯ ಮಟ್ಟದ ಇಳುವರಿ ಪಡೆದಿರುವುದು ವಿಶೇಷವಾಗಿದೆ.
ಸಾಮಾನ್ಯವಾಗಿ ಎಕರೆಗೆ 25ರಿಂದ 30 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದ ರೈತರು, ಈ ಬಾರಿ ಎಕರೆಗೆ 40ರಿಂದ 45 ಕ್ವಿಂಟಲ್‌ವರೆಗೆ ಫಸಲು ಪಡೆದಿದ್ದಾರೆ. ಉತ್ತಮ ಮಳೆ ಹಂಚಿಕೆ, ಸರಿಯಾದ ಸಮಯದಲ್ಲಿ ನಾಟಿ, ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದ್ದು ಹಾಗೂ ರೋಗಬಾಧೆ ಕಡಿಮೆ ಕಾಣಿಸಿಕೊಂಡಿರುವುದು ಉತ್ತಮ ಉತ್ಪಾದನೆಗೆ ಕಾರಣವಾಗಿದೆ.
ಗ್ರಾಮದ ಆಂಧ್ರ ಕ್ಯಾಂಪಿನ ರೈತರಾದ ಸಿ.ಎಚ್.ದುರ್ಗಾರಾವ್ ತಮ್ಮ 10 ಎಕರೆ ಜಮೀನಿನಲ್ಲಿ ಭತ್ತ ಬೆಳೆದು ಸರಾಸರಿ ಎಕರೆಗೆ 45 ಕ್ವಿಂಟಲ್ ಇಳುವರಿ ಪಡೆದಿದ್ದಾರೆ.
ಇದೇ ರೀತಿಯಲ್ಲಿ ವೀರೇಂದ್ರ, ರಾಜು ಬಾಬು, ಸತ್ಯಪ್ರಸಾದ್ ಎಕರೆಗೆ 40 ರಿಂದ 45 ಕ್ವಿಂಟಲ್‌ವರೆಗೆ ಇಳುವರಿ ಪಡೆದಿದ್ದಾರೆ. ಈ ಭಾಗದ ಹೊಲಗಳಲ್ಲಿ ಬಂಗಾರದ ಬಣ್ಣದಲ್ಲಿ ಕಂಗೊಳಿಸುತ್ತಿರುವ ಭತ್ತದ ರಾಶಿಗಳು ರೈತರ ಮುಖದಲ್ಲಿ ಹೊಸ ಸಂತಸ ಮೂಡಿಸಿವೆ. ಕಟಾವು ಕಾರ್ಯದಲ್ಲಿ ರೈತರು ಮತ್ತು ಕುಟುಂಬದವರು ಉತ್ಸಾಹದಿಂದ ತೊಡಗಿಸಿಕೊಂಡಿದ್ದು ಗ್ರಾಮೀಣ ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ವೈಜ್ಞಾನಿಕ ಕೃಷಿ ಮೊರೆ

ಈ ಬಾರಿ ವೈಜ್ಞಾನಿಕ ಕೃಷಿಯಿಂದ ಭತ್ತದ ಬೆಳೆಗೆ ಉತ್ತಮ ಫಲ ನೀಡಿದೆ. ಸರಿಯಾದ ಸಮಯದಲ್ಲಿ ಮಳೆ ಬಂದಿದ್ದು, ಬೆಳೆಗೂ ರೋಗಬಾಧೆ ಕಡಿಮೆ ಇದ್ದ ಕಾರಣ ಉತ್ತಮ ಫಸಲು ಬಂದಿದೆ. ಗಾಳಿ- ಮಳೆಗೆ ಬೆಳೆ ಹೆಚ್ಚು ಹಾನಿಯಾಗದೆ ಗಟ್ಟಿಯಾಗಿ ನಿಂತಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಸಮೀಪದ ತ್ಯಾವಣಿಗೆ ಸೇರಿದಂತೆ ಹಲವು ಭಾಗಗಳಲ್ಲಿ ಆಲಿಕಲ್ಲಿನ ಮಳೆಯಿಂದ ಬೆಳೆ ಹಾನಿ ಸಂಭವಿಸಿದ್ದರೂ, ಚಿರಡೋಣಿ ಗ್ರಾಮದಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ. ನೀರು ನಿಲ್ಲದಿರುವುದು, ಹವಾಮಾನ ಅನುಕೂಲಕರವಾಗಿದ್ದ ಕಾರಣ ಬೆಳೆ ಉತ್ತಮವಾಗಿದೆ ಎಂದು ರೈತ ದುರ್ಗಾರಾವ್ ತಿಳಿಸಿದರು.

ದೇವರ ಕೃಪೆಯಿಂದ ಉತ್ತಮ ಫಸಲು

ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗಿತ್ತು. ದೇವರ ಕೃಪೆಯಿಂದಲೇ ಈ ಬಾರಿ ಉತ್ತಮ ಫಸಲು ದೊರೆತಿದೆ ಎನ್ನುವುದು ರೈತರ ಮಾತಾಗಿದೆ.
ಚಿರಡೋಣಿ ಗ್ರಾಮದ ರೈತರು ಈ ಬಾರಿ ಪಡೆದಿರುವ ದಾಖಲೆಯ ಮಟ್ಟದ ಭತ್ತದ ಇಳುವರಿ ಕೃಷಿಯ ಮೇಲಿನ ವಿಶ್ವಾಸವನ್ನು ಮತ್ತೊಮ್ಮೆ ಗಟ್ಟಿಗೊಳಿಸಿದ್ದು, ರೈತರ ಬದುಕಿನಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
"

ಚಿರಡೋಣಿ ಭಾಗದ ರೈತರು ಈ ಬಾರಿ ಅತ್ಯುತ್ತಮ ಇಳುವರಿ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ರೈತರು ಹೊಸ ಕೃಷಿ ತಂತ್ರಜ್ಞಾನ, ಸಮರ್ಪಕ ಗೊಬ್ಬರ ನಿರ್ವಹಣೆ ಹಾಗೂ ನೀರಿನ ವ್ಯವಸ್ಥೆ ಅಳವಡಿಸಿಕೊಂಡರೆ ಇನ್ನಷ್ಟು ಹೆಚ್ಚಿನ ಉತ್ಪಾದನೆ ಪಡೆಯಬಹುದು. ಹೊಸ ಪ್ರಯೋಗಗಳಿಂದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಜತೆಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

— ಲತಾ, ಕೃಷಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net