ಶೈಕ್ಷಣಿಕ ಸಾಲ ವಿತರಣೆಗೆ ನೀಡಿ ಆದ್ಯತೆ

ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ  ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಡದಯ್ಯ ಹಿರೇಮಠ್, ಕೆನರಾ ಬ್ಯಾಂಕಿನ ಎಜಿಎಂ ವಿಜೇಶ್‌ಕುಮಾರ್ ಇದ್ದರು.
ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಡದಯ್ಯ ಹಿರೇಮಠ್, ಕೆನರಾ ಬ್ಯಾಂಕಿನ ಎಜಿಎಂ ವಿಜೇಶ್‌ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್‌ಗಳಿಗೆ ಸಂಸದೆ ಡಾ.ಪ್ರಭಾ ಸೂಚನೆ
  • ಆರ್ಥಿಕ ಸಾಕ್ಷರತೆ ಜಾಗೃತಿ ಮೂಡಿಸಲು ತಾಕೀತು
  • ಬ್ಯಾಂಕ್ ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ
ದಾವಣಗೆರೆ: ಶೈಕ್ಷಣಿಕ ಸಾಲ ವಿತರಣೆಯಲ್ಲಿ ಪ್ರಥಮಾದ್ಯತೆ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕ್‌ಗಳು ಈ ವರ್ಷ ಒಟ್ಟು 1533 ಶೈಕ್ಷಣಿಕ ಸಾಲ ಮಂಜೂರು ಮಾಡಿ, 62.55 ಕೋಟಿ ರೂ. ಸಾಲ ವಿತರಿಸಿವೆ. ಪಾಲಕರು ಈ ಹಿಂದಿನ ಸಾಲ ತೀರಿಸದೆ ಬಾಕಿದಾರರಾಗಿದ್ದಾರೆ ಎಂಬ ಕಾರಣಕ್ಕೆ ಶೈಕ್ಷಣಿಕ ಸಾಲ ನೀಡಲು ನಿರಾಕರಿಸುವಂತಿಲ್ಲ ಎಂದೂ ತಾಕೀತು ಮಾಡಿದರು.
ಜಿಲ್ಲೆಯ ಎಲ್ಲ ದ್ವಿತೀಯ ಪಿಯುಸಿ ಮತ್ತು ಪದವಿ ಕಾಲೇಜುಗಳ ಡೇಟಾ ಪಡೆದು, ಬ್ಯಾಂಕುಗಳಿಗೆ ನಿರ್ದಿಷ್ಟ ಶಾಲೆಗಳನ್ನು ನಿಯೋಜಿಸಲಾಗುವುದು. ಬ್ಯಾಂಕ್ ಅಧಿಕಾರಿಗಳು ಶಾಲಾವಾರು ಆರ್ಥಿಕ ಸಾಕ್ಷರತೆ ಮತ್ತು ಶೈಕ್ಷಣಿಕ ಸಾಲ ವಿಚಾರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪಡದಯ್ಯ ಹಿರೇಮಠ್ ಮಾತನಾಡಿ, ಐಬಿಎ ನಿಯಮಾವಳಿಯಂತೆ 7.5 ಲಕ್ಷ ರೂ. ವರೆಗಿನ ಶೈಕ್ಷಣಿಕ ಸಾಲಕ್ಕೆ ಶ್ಯೂರಿಟಿ ಅಥವಾ ಜಾಮೀನಿಗೆ ಅಗತ್ಯವಿಲ್ಲ. ವಿದ್ಯಾರ್ಥಿಗಳ ಕೋರ್ಸ್‌ನ ಶುಲ್ಕಕ್ಕೆ ತಕ್ಕಂತೆ ಬ್ಯಾಂಕ್‌ಗಳು ಸಾಲ ನೀಡಬೇಕು. ಮ್ಯಾನೇಜ್‌ಮೆಂಟ್ ಅಥವಾ ಪೇಮೆಂಟ್ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು 4 ಲಕ್ಷ ರೂ.ವರೆಗಿನ ಸಾಲಕ್ಕೆ ಶ್ಯೂರಿಟಿ ನೀಡಬೇಕಿಲ್ಲ ಎಂದು ಹೇಳಿದರು.
ಶೈಕ್ಷಣಿಕ ಸಾಲದ ವಲಯದಲ್ಲಿ ವಸೂಲಾಗದ ಸಾಲದ( ಎನ್‌ಪಿಎ)ಪ್ರಮಾಣ ಅತ್ಯಂತ ಕಡಿಮೆಯಿದೆ. ಆದಕಾರಣ, ಆದ್ಯತಾ ವಲಯದ ಸಾಲ ವಿತರಣೆಯಡಿ ಶೈಕ್ಷಣಿಕ ಸಾಲಗಳಿಗೆ ಬ್ಯಾಂಕುಗಳು ಮೊದಲ ಆದ್ಯತೆ ನೀಡಬೇಕು ಎಂದರು.
ಶಾಲಾಭಿವೃದ್ಧಿಗಿರಲಿ ಸಿಎಸ್‌ಆರ್ ನಿಧಿ
ಬ್ಯಾಂಕ್ ಅಥವಾ ಕಂಪನಿಗಳು ತಮ್ಮ ಗ್ರಾಹಕರುಳ್ಳ ಹಾಗೂ ಲಾಭ ಗಳಿಸುವ ಜಿಲ್ಲೆಯಲ್ಲೇ ಕಡ್ಡಾಯವಾಗಿ ಶೇ.2ರಷ್ಟು ಸಿಎಸ್‌ಆರ್ ಹಣ ವ್ಯಯಿಸಬೇಕು. ಬೇರೆ ಜಿಲ್ಲೆಗಳಿಗೆ ಹಣ ವರ್ಗಾಯಿಸಲು ಅವಕಾಶವಿಲ್ಲ. ಈ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ನೀಡಬೇಕು ಎಂದೂ ಸಂಸದರು ಹೇಳಿದರು.
ಬ್ಯಾಂಕುಗಳು ಶಾಖೆಗಳಿರುವ ವ್ಯಾಪ್ತಿಯಲ್ಲೇ ಅರ್ಹರನ್ನು ಗುರುತಿಸಬೇಕು. ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ, ಲ್ಯಾಬ್ ಉಪಕರಣಗಳ ಪೂರೈಕೆ ಅಥವಾ ವಿಕಲಾಂಗರ ಕಲ್ಯಾಣಕ್ಕಾಗಿ ಬಳಸಲು ಯೋಜಿಸಬೇಕು. ಎಲ್ಲ ಬ್ಯಾಂಕುಗಳ ಸಿಎಸ್‌ಆರ್ ನಿಧಿಯ ಲಭ್ಯತೆಯ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಸಿಇಒ ಅವರಿಗೆ ನೀಡಬೇಕು ಎಂದು ಸೂಚಿಸಿದರು.
ತಿರಸ್ಕೃತರ ಪಟ್ಟಿ ಶೀಘ್ರ ವಿಲೇಗೊಳಿಸಿ
ವಿವಿಧ ಇಲಾಖಾವಾರು ಸಾಲ ಕೋರಿ ಬಂದ ಅರ್ಜಿಗಳ ಪೈಕಿ ತಿರಸ್ಕೃತರ ಪಟ್ಟಿಯನ್ನು ಬ್ಯಾಂಕುಗಳು 6 ತಿಂಗಳವರೆಗೆ ಬಾಕಿ ಇಟ್ಟುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು 15 ದಿನಗಳಿಗೊಮ್ಮೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ತಾಂತ್ರಿಕ ಅಥವಾ ದಾಖಲಾತಿ ಕೊರತೆಯಿದ್ದರೆ ಆ ಅವಕಾಶವನ್ನು ಮುಂದಿನ ಅರ್ಹರಿಗೆ ವರ್ಗಾಯಿಸಬೇಕು ಎಂದೂ ಹೇಳಿದರು.
ಜಿಲ್ಲೆಯಲ್ಲಿ ಎಂ.ಎಸ್.ಎಂ.ಇ ವಲಯ, ನವೋದ್ಯಮಗಳಿಗೆ ನೀಡುವ ಸಾಲದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕು. ಬ್ಯಾಂಕರ್‌ಗಳು ವಾಣಿಜ್ಯ ದೃಷ್ಟಿಯಲ್ಲದೆ ಸಾರ್ವಜನಿಕರ ಆರ್ಥಿಕ ಸಬಲೀಕರಣದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದೂ ಕಿವಿಮಾತು ಹೇಳಿದರು.
ವಿಮಾ ಯೋಜನೆಗಳ ಬಗ್ಗೆ ಅಭಿಯಾನ
ವಾರ್ಷಿಕ 436 ರೂ. ಕಂತು ಕಟ್ಟುವ ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ, ವಾರ್ಷಿಕ 20 ರೂ. ಭರಿಸುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, 60 ವರ್ಷದ ಬಳಿಕ ಖಚಿತ ಪಿಂಚಣಿ ಪಡೆಯುವ ಅಟಲ್ ಪಿಂಚಣಿ ಯೋಜನೆಗಳಡಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲತೆ ಇವೆ. ಯೋಜನೆಗಳ ಕುರಿತಂತೆ ವಿಶೇಷ ಅಭಿಯಾನ ನಡೆಸುವಂತೆ ತಿಳಿಸಿದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ರೈತರಿಗೆ ನೆರವಾಗಲಿದೆ ಕೃಷಿಕ್ ಆ್ಯಪ್
ನಬಾರ್ಡ್‌ನ ಡಿಡಿಎಂ ರಶ್ಮಿರೇಖಾ ಮಾತನಾಡಿ, ಕೃಷಿಕ್ ಆ್ಯಪ್ ಬಳಸಿ ಬಳಸಿ ಅರ್ಹ ರೈತರು ಸರ್ಕಾರದ ಆರ್ಥಿಕ ನೆರವು ಪಡೆಯಬಹುದು. ಜಮೀನಿನ ವಿಸ್ತೀರ್ಣ, ಬೆಳೆಯ ವಿವರಗಳನ್ನು ನಮೂದಿಸಿ, ದೊರೆಯಬಹುದಾದ ಸಾಲದ ಮೊತ್ತ ಹಾಗೂ ಸರ್ಕಾರದ ಬಡ್ಡಿ ರಿಯಾಯಿತಿಯನ್ನು ಲೆಕ್ಕ ಹಾಕಬಹುದು. ಫ್ರೂಟ್ಸ್, ಜನಸಮರ್ಥ್ ಪೋರ್ಟಲ್ ಲಿಂಕ್ ಮೂಲಕವಾಗಿಯೂ ಸಾಲಕ್ಕಾಗಿ ನೋಂದಣಿ ಮಾಡಬಹುದು ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕುರಿತ ಭಿತ್ತಿಪತ್ರ ಇದೇ ವೇಳೆ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಎಫ್‌ಐಡಿಡಿ ಉಪ ವ್ಯವಸ್ಥಾಪಕ ಭೀಮ್ ಚೌದರಿ, ಕೆನರಾ ಬ್ಯಾಂಕಿನ ಎಜಿಎಂ ವಿಜೇಶ್ ಕುಮಾರ್, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
10563 ಕೋಟಿ ರೂ. ಸಾಲ ನೀಡಿಕೆ
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಒಟ್ಟು ಆದ್ಯತಾ ವಲಯಕ್ಕೆ 10563 ಕೋಟಿ ರೂ. ಮೊತ್ತದ ಸಾಲ ನೀಡಲಾಗಿದೆ. ಈ ಪೈಕಿ ಕೃಷಿ ಕ್ಷೇತ್ರದಲ್ಲಿ 7848 ಕೊಟಿ ರೂ. ಹಾಗೂ ಎಂಎಸ್‌ಎಂಇ ಕ್ಷೇತ್ರದಲ್ಲಿ 2464 ಕೋಟಿ ರೂ.ಗಳ ಸಾಲ ನೀಡಲಾಗಿದ್ದು ಈ ಸಾಧನೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ಪ್ರಗತಿ ಸಾಧಿಸಲು ಸೂಚಿಸಿದರು.
ಅಟಲ್ ಪಿಂಚಣಿ ಯೋಜನೆಯಡಿ ಕಳೆದ ವರ್ಷದಲ್ಲಿ 26477 ಪಿಂಚಣಿದಾರರು ನೊಂದಣಿಯಾಗಿದ್ದು ಶೇ. 127ರಷ್ಟು ಸಾಧನೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯ ನಾಲ್ಕನೇ ಸ್ಥಾನದಲ್ಲಿದೆ ಎಂದು ಎಲ್‌ಬಿಎಂ ಪಡದಯ್ಯ ಹಿರೇಮಠ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net