ದಾವಣಗೆರೆ:ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಈ ದಿಸೆಯಲ್ಲಿ ಹಿರಿಯ ಕಲಾವಿದರ ಜತೆಗೆ ಕಾಲೇಜಿನ ವಿದ್ಯಾರ್ಥಿಗಳು ಕನಿಷ್ಠ 2 ವರ್ಷದಲ್ಲಿ ದೊಡ್ಡ ಪ್ರಾಜೆಕ್ಟ್ ಕೆಲಸಗಳಲ್ಲಿ ತೊಡಗಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸಲಹೆ ನೀಡಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ಕಲಾ ಗ್ಯಾಲರಿಯಲ್ಲಿ ಬುಧವಾರ ವಿಶ್ವಕಲಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ, ‘ದೃಶ್ಯಾನುಭವ’ ಕಲಾ ಪ್ರದರ್ಶನ, ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಲಾ ಒಬ್ಬ ಹಿರಿಯ ಕಲಾವಿದರೊಂದಿಗೆ 4-5 ಜನ ಕಲಾ ವಿದ್ಯಾರ್ಥಿಗಳ ತಂಡವನ್ನು ಬಳಸಿಕೊಳ್ಳಬೇಕು. ಸ್ಥಳೀಯ ಹಿರಿಯ ಕಲಾವಿದರು ಸಲಹೆ-ಮಾರ್ಗದರ್ಶನದೊಂದಿಗೆ ಯೋಜನೆ ರೂಪಿಸಬೇಕು. ಸಿದ್ಧಪಡಿಸಿದ ಪ್ರಾಜೆಕ್ಟ್‌ಗಳನ್ನು ಕಾಲೇಜಿನವರು ಹಾಗೂ ಹೊರಗಿನ ಪರಿಣತರಿಂದ ಮೌಲ್ಯಮಾಪನ ಮಾಡುವ ಕ್ರಮವಾದಲ್ಲಿ ಕಾಲೇಜಿಗೆ ಖ್ಯಾತಿ ಸಿಗಲಿದೆ ಎಂದರು.
ಪ್ರತಿಯೊಂದು ಕಲಾಕೃತಿಗಳ ಹಿಂದೆ ಒಂದೊಂದು ವಿಷಯ ಅಡಗಿರುತ್ತದೆ. ಇದರ ಥೀಮ್ ಜನಸಾಮಾನ್ಯರಿಗೆ ಅರ್ಥವಾಗಬೇಕಾದರೆ ಚಿತ್ರ ಕಲಾ ಪ್ರದರ್ಶನಗಳಲ್ಲಿನ ಕಲಾಕೃತಿಗಳ ಬಳಿ ಸಣ್ಣ ಟಿಪ್ಪಣಿ ನಮೂದಿಸಬೇಕು. ಚಿತ್ರಿಸಿದ ಕಲಾವಿದರ ಹೆಸರನ್ನು ನಮೂದಿಸಬೇಕು ಎಂದು ಹೇಳಿದರು.
ಇತ್ತೀಚೆಗೆ ವಜ್ರಮಹೋತ್ಸವ ವರ್ಷಾಚರಣೆ ಹಿನ್ನಲೆಯಲ್ಲಿ ದೃಶ್ಯಕಲಾ ಕಾಲೇಜಿನಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆದಿವೆ. ಇದುವರೆಗೆ ಕಾಲೇಜು ನಡೆದು ಬಂದ ದಾರಿ ಜತೆಗೆ ಮುಂದಿನ ಭವಿಷ್ಯದ ಉದ್ದೇಶಗಳ ಬಗ್ಗೆಯೂ ಆವರಣದಲ್ಲಿ ಬಿತ್ತರಿಸಬೇಕು ಎಂದು ಕಾಲೇಜು ಪ್ರಾಚಾರ್ಯರಿಗೆ ಸೂಚಿಸಿದರು.
ಬೆೆಂಗಳೂರಿನ ಖ್ಯಾತ ಕಲಾವಿದ ಗಣೇಶ ದೊಡ್ಡಮನಿ ಮಾತನಾಡಿ, 1990-91ರಲ್ಲಿ ದಾವಣಗೆರೆ ಕಲಾ ಕಾಲೇಜಿನಿಂದಲೇ ನನ್ನ ಕಲಾಯಾನ ಆರಂಭವಾಯಿತು. ಆರಂಭಿಕ 100 ರೂ. ಮೂಲಕ ಕಲಾ ಪ್ರದರ್ಶನ, ಕಲಾಕೃತಿ ಮಾರಾಟದೊಂದಿಗೆ ದೇಶ ಸಂಚಾರ ಮಾಡಿದ್ದಾಗಿ ಹಂಚಿಕೊಂಡರು. ಪಠ್ಯವಿಷಯಗಳು ಕಲಿಕೆಗೆ ಸೀಮಿತವಾದರೆ ಚಿತ್ರಕಲೆ, ಸಂಗೀತ ಕಲೆಗಳು ಸವಾಲುಗಳನ್ನು ಎದುರಿಸಲು ನೆರವಾಗಲಿವೆ ಎಂದರು.
ಕಾಲೇಜಿನ ಎಂವಿಎ ಪೇಂಟಿಂಗ್ ಹಾಗೂ ಅನ್ವಯಿಕ ಕಲಾ ವಿಭಾಗದ ವಿದ್ಯಾರ್ಥಿಗಳಾದ ಎಸ್.ಎಲ್.ಕೀರ್ತನಾ, ಬಿ.ಯು. ಕುಸುಮಾ, ಚಿದಾನಂದ ಸಿ ಮಠದ್, ಕೀರ್ತನಾ ಅಲ್ಫೋನ್ಸಾ, ಕೆ. ರಾಹುಲ್, ಶಬನಮ್ ದೊಡ್ಡಮನಿ ಅವರ ಸುಮಾರು 40 ಕಲಾಕೃತಿಗಳು ಪ್ರದರ್ಶನಗೊಂಡವು.
ಪೋಸ್ಟರ್, ಕ್ರಿಯೇಟಿವ್ ಕಾಂಪೋಸಿಷನ್, ಪೋರ್ಟ್‌ರೈಟ್, ಮ್ಯೂರಲ್ ಕಲಾಕೃತಿಗಳು ಜಲವರ್ಣ, ಪೋಸ್ಟರ್ ಕಲರ್, ಅಕ್ರಾಲಿಕ್ ಕಲರ್ ಹಾಗೂ ನ್ಯೂಮೀಡಿಯಾ ಮಾದರಿಗಳಲ್ಲಿ ಬಿತ್ತರವಾದವು. ಈ ಪ್ರದರ್ಶನ ಏ.28ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಸತೀಶಕುಮಾರ್ ಪಿ.ವಲ್ಲೇಪುರೆ, ಸಂಚಾಲಕ ಡಾ. ಜೈರಾಜ್ ಎಂ.ಚಿಕ್ಕಪಾಟೀಲ್, ಸಹ ಸಂಚಾಲಕ ರಂಗನಾಥ ಬಿ. ಕುಲಕರ್ಣಿ ಇತರರಿದ್ದರು.