ಮಳೆ ವೈಫಲ್ಯದ ಹಾನಿ ಪರಿಹಾರಕ್ಕೆ ಬೆಳೆ ವಿಮೆ ಮಾಡಿಸಿ

ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು. ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಇಒ ಸುಮಲತಾ, ಪೌರಾಯುಕ್ತೆ ಈರಮ್ಮ ಇದ್ದರು. crop insurance
ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು. ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಇಒ ಸುಮಲತಾ, ಪೌರಾಯುಕ್ತೆ ಈರಮ್ಮ ಇದ್ದರು. crop insurance
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲ ಇಲಾಖೆ ಅಧಿಕಾರಿಗಳು ಅಂಕಿಅಂಶ ಸಂಗ್ರಹಿಸಿ
  • ಶಾಸಕ ಬಿ.ಪಿ. ಹರೀಶ್ ಸಲಹೆ
  • ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಹರಿಹರ: ಮಳೆಬಾರದೆ ನಷ್ಟ ಅನುಭವಿಸುತ್ತಿರುವ ರೈತರು, ಅದರಿಂದ ಹೊರಬರಲು ಬೆಳೆ ವಿಮೆ ಮಾಡಿಸಿ ಶಾಸಕ ಬಿ.ಪಿ. ಹರೀಶ್ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ತಾಲೂಕು ಸೇರಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ಬರದ ಛಾಯೆ ಆವರಿಸುತ್ತಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಸರ್ಕಾರಕ್ಕೆ ಪರಿಹಾರ ಕೇಳುವ ಬದಲು ಬೆಳೆವಿಮೆ ಮಾಡಿಸಿ ಅಧಿಕ ಪರಿಹಾರ ಪಡೆದುಕೊಳ್ಳಿ. ಮಾಹಿತಿ ಪ್ರಕಾರ ತಾಲೂಕಿನಲ್ಲಿ ಇನ್ನೂ 3900 ರೈತರು ಬೆಳೆ ವಿಮೆಯನ್ನು ಮಾಡಿಸಬೇಕಿದೆ ತಪ್ಪದೆ ಎಲ್ಲರೂ ಜು.31ರೊಳಗೆ ನೋಂದಣಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ರಾಜ್ಯಾದ್ಯಂತ ಮಳೆ ಕಡಿಮೆಯಾಗಿ ಬರದ ವಾತಾವರಣ ಕಂಡು ಬಂದಿದ್ದು ರಾಜ್ಯ ಸರ್ಕಾರ ಯಾವ ಸಂದರ್ಭದಲ್ಲಿಯಾದರೂ ತಾಲೂಕಿನ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಕೇಳಬಹುದು. ಎಲ್ಲ ಇಲಾಖೆಗಳ ಅಧಿಕಾರಿಗಳು ಅಂಕಿಅಂಶವನ್ನು ಸಂಗ್ರಹಿಸಿಡಿ ಹಾಗೂ ನಿರ್ವಹಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು. ನಗರಸಭೆ, ಗ್ರಾಪಂ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಕೊಳವೆಬಾವಿ ಹಾಗೂ ಶುದ್ಧ ನೀರಿನ ಘಟಕಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಕುಡಿಯುವ ನೀರಿನ ಸಮಸ್ಯೆಯುಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಹಾಗೂ ತಾಪಂ ಇಒಗೆ ಸೂಚನೆ ನೀಡಿದರು.
ಬರದ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳು ಗಂಗಾ ಕಲ್ಯಾಣ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಿ, ದಾಖಲೆಗಳ ನೆಪ ಹೇಳಿ ಕಾಲಹರಣ ಮಾಡಬೇಡಿ. ನಂತರ ದಾಖಲೆಗಳನ್ನು ಪಡೆದುಕೊಳ್ಳುವ ಮೂಲಕ ರೈತರಿಗೆ ಹಾಗೂ ಗ್ರಾಹಕರಿಗೆ ಸಹಕಾರ ನೀಡಿ ಎಂದು ಎಇಇ ಲಕ್ಷ್ಮಣ್‌ಗೆ ಸೂಚನೆ ನೀಡಿದರು.
ನಗರದ ಶೇರಾಪುರದಲ್ಲಿ ನಿರ್ಮಿಸಿರುವ ಕೆಎಚ್‌ಬಿ ಬಡಾವಣೆಯ ನಿವೇಶನಗಳನ್ನು ನಗರಸಭೆಗೆ ಹಸ್ತಾಂತರಿಸದ ಕಾರಣ ಫಲಾನುಭವಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ನಗರಸಭೆ ಹಾಗೂ ಕೆಎಚ್‌ಬಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಹರಿಹರ ನಗರ ವ್ಯಾಪ್ತಿಯಲ್ಲಿ 275 ಕೊಳವೆ ಬಾವಿಗಳಿದ್ದು 15 ಶುದ್ಧ ನೀರಿನ ಘಟಕಗಳಿವೆ, ಎಲ್ಲವೂ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಶುದ್ಧ ನೀರು ಘಟಕಗಳು ದುರಸ್ತಿ ಮಾಡಿಸಬೇಕಾಗಿದೆ. ಇದಕ್ಕಾಗಿ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಮೇಲಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ ಎಂದು ನಗರಸಭಾ ಜೆಇ ಮಂಜುನಾಥ್ ಮಾಹಿತಿ ನೀಡಿದರು.
ಪಶು ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 90 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ. ಸದ್ಯ ಜಾನುವಾರಗಳ ಮೇವಿಗೆ ತೊಂದರೆಯಿಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ತಾಲೂಕಿನ ಮೇವು ಹೊರಗಡೆ ಮಾರಟವಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಈರಮ್ಮ, ಕೆಎಚ್‌ಬಿ ಎಇಇ ಪ್ರಿಯಾ ಇತರರಿದ್ದರು.
"

ಈಗಾಗಲೇ ನಾವು ತಾಲೂಕಿನ ರೈತರೊಂದಿಗೆ ಗ್ರೋಪ್ ಕರೆಗಳನ್ನು ಮಾಡುವ ಮೂಲಕ ಅಗತ್ಯ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದೆವೆ. ಒಂದು ಹೆಕ್ಟರ್ ಭತ್ತದ ಬೆಳೆಗೆ 2196 ರೂ. ಕಟ್ಟಿದರೆ 1,06,000 ರೂ., ಮೆಕ್ಕೆಜೋಳಕ್ಕೆ 1366 ರೂ. ಪಾವತಿಸಿದರೆ 67,500 ರೂ. ವಿಮೆ ಬರುತ್ತದೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಅಥವಾ ಸೈಬರ್ ಕೇಂದ್ರಗಳಲ್ಲಿ ಅಗತ್ಯ ದಾಖಲೆ ನೀಡಿ ನೋಂದಣಿ ಮಾಡಿಸಿ.

— ನಟರಾಜ್ ಕೃಷಿ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net