ನಾಲ್ಕು ಬಗೆಯಲ್ಲಿ ಕಸ ವಿಂಗಡಣೆ ಕಡ್ಡಾಯ

ಡಾ.ಎನ್. ಮಹಾಂತೇಶ್
ಡಾ.ಎನ್. ಮಹಾಂತೇಶ್
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ಆಯುಕ್ತ ಮಹಾಂತೇಶ್ ಹೇಳಿಕೆ
  • ಸ್ವಚ್ಛತೆಗೆ ಸಹಕರಿಸಲು ಮನವಿ
ದಾವಣಗೆರೆ : ನಗರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಮನೆ ಅಥವಾ ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲಿಯೇ ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಎನ್. ಮಹಾಂತೇಶ್ ತಿಳಿಸಿದ್ದಾರೆ.
ತ್ಯಾಜ್ಯವನ್ನು ಕೊಳೆಯುವ ಹಸಿ ತ್ಯಾಜ್ಯ, ಕೊಳೆಯದ ಒಣ ತ್ಯಾಜ್ಯ (ಮರುಬಳಕೆಗೆ ಯೋಗ್ಯ ಹಾಗೂ ಯೋಗ್ಯವಲ್ಲದ ದಹನಕಾರಿ ತ್ಯಾಜ್ಯ), ಸ್ಯಾನಿಟರಿ ತ್ಯಾಜ್ಯ (ಬಳಸಿದ ತಕ್ಷಣವೆ ಕಂಪನಿ ಒದಗಿಸಿದ ಪೌಚ್ ಅಥವಾ ಪಾಲಿಕೆ ಸೂಚಿಸಿದ ರೀತಿಯಲ್ಲಿ ಸುತ್ತಿ ನೀಡಬೇಕು), ವಿಶೇಷ ಆರೈಕೆ ತ್ಯಾಜ್ಯ ಎಂದು ವಿಂಗಡಿಸಬೇಕು ಎಂದು ಹೇಳಿದ್ದಾರೆ.
ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ಸಾರ್ವಜನಿಕರು, ಉದ್ದಿಮೆದಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ಪಾಲಿಕೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನಿಯಮಗಳು

ಹೋಟೆಲ್, ಕಲ್ಯಾಣ ಮಂಟಪ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ಸಮುಚ್ಚಯಗಳು ದಿನವೊಂದಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸಿದಲ್ಲಿ, ಅಥವಾ 20 ಸಾವಿರ ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದ್ದಲ್ಲಿ, ಅಥವಾ ದಿನಕ್ಕೆ 40 ಸಾವಿರ ಲೀಟರ್ ನೀರು ಬಳಕೆ ಮಾಡುತ್ತಿದ್ದಲ್ಲಿ ಅವರನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ ಎಂದು ಪರಿಗಣಿಸಲಾಗುವುದು.
ಅವರು ತಮ್ಮ ಆವರಣದಲ್ಲಿಯೆ ಹಸಿ ಕಸವನ್ನು ಸಂಸ್ಕರಿಸಬೇಕು (ಕಾಂಪೋಸ್ಟ್/ಬಯೋಗ್ಯಾಸ್). ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಕೃತ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ಮಹಾಂತೇಶ್ ತಿಳಿಸಿದ್ದಾರೆ.

ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ

ರಸ್ತೆ, ಚರಂಡಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದು ಅಥವಾ ಕಸಕ್ಕೆ ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಘನತ್ಯಾಜ್ಯ ನಿರ್ವಹಣೆ ಉಪ ವಿಧಿಗಳನ್ವಯ ದಂಡ ವಿಧಿಸಲಾಗುವುದು. ತಪ್ಪು ಮರುಕಳಿಸಿದರೆ ಪರಿಸರ ಸಂರಕ್ಷಣಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net