ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಬಿ. ವಾಮದೇವಪ್ಪ, ಸತ್ಯಭಾಮಾ ಮಂಜುನಾಥ್ ಇತರರಿದ್ದರು. ----
ದಾವಣಗೆರೆ: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಮೈಸೂರು, ಬೆಂಗಳೂರು, ಕಲಬುರಗಿ, ಬೆಳಗಾವಿಯಿಂದ ತಲಾ ಒಬ್ಬ ಓದುಗರಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಈ ವರ್ಷದಿಂದ ಹೆಚ್ಚುವರಿ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದರು.
‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ದಾವಣಗೆರೆಯಲ್ಲಿ ಮಂಗಳವಾರ ಸಾಹಿತಿ, ಲೇಖಕರ ಮನೆಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡಿದರು.
ಇದುವರೆಗೆ ತಲಾ ಒಬ್ಬ ಪ್ರಕಾಶಕ, ಲೇಖಕ, ಮುದ್ರಕ, ಸಂಶೋಧಕ, ಕಲಾವಿದರಿಗೆ ಇದುವರೆಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಓದುಗರೇ ನಮಗೆ ತಾಯಿಬೇರು. ಹೀಗಾಗಿ ಮನೆಗೊಂದು ಗ್ರಂಥಾಲಯದಡಿ ಕೊಂಡು ಪುಸ್ತಕ ಓದುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದರು.
ನಂಜನಗೂಡು ತಿರಮಲಾಂಬ, ಹಾ.ಮಾ.ನಾಯಕ, ಪಿ.ಆರ್. ತಿಪ್ಪೇಸ್ವಾಮಿ, ಗಳಗನಾಥ ಹೆಸರಲ್ಲಿ ಈ ಹೊಸ ನಾಲ್ಕು ಪ್ರಶಸ್ತಿ ಸ್ಥಾಪಿಸಲಾಗಿದೆ. ತಲಾ 25 ಸಾವಿರ ನಗದು, ಫಲಕ ಒಳಗೊಂಡ ಈ ಪ್ರಶಸ್ತಿಗಳನ್ನು ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ನೀಡಲಾಗುತ್ತಿದೆ.
ಎಲ್ಲ ಜಿಲ್ಲೆಯಲ್ಲೂ ಗ್ರಂಥಾಲಯ ಜಾಗೃತ ಅನುಷ್ಠಾನ ಸಮಿತಿ ಸದಸ್ಯರು ಪ್ರಶಸ್ತಿಗೆ ಸೂಚಿಸುವ ಕೆಲ ಹೆಸರುಗಳ ಕುರಿತಂತೆ ಪ್ರಾಧಿಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಜುಲೈ 27ರಂದು ಈ ಬಗ್ಗೆ ಸಭೆ ನಡೆಯಲಿದೆ ಎಂದು ಹೇಳಿದರು.
ಪ್ರಾಧಿಕಾರಕ್ಕೆ 33 ವರ್ಷಗಳಾಗಿದ್ದು, ಇದುವರೆಗೆ ದೊಡ್ಡ ಮಟ್ಟದ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಆದರೆ ಜನಸಾಮಾನ್ಯರ ಸನಿಹದ ಸಣ್ಣ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸಿನಲ್ಲಿ ಪುಸ್ತಕ ಪ್ರೀತಿ ಬಿತ್ತುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಮನುಷ್ಯನ ವ್ಯಕ್ತಿತ್ವಕ್ಕೆ ಮೆರುಗು ನೀಡುವ, ಎದೆಯ ನೋವುಗಳನ್ನು ದೂರ ಮಾಡುವ ಶಕ್ತಿ ಪುಸ್ತಕಗಳಿಗಿದೆ. ಪುಸ್ತಕ ಕೇವಲ ಸರಕಾಗದೆ ಅದೊಂದು ಸಂಸ್ಕೃತಿಯಾಗಿ ಮನಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕು ಎಂಬ ಆಶಯದಡಿ ‘ಮನೆಗೊಂದು ಗ್ರಂಥಾಲಯ’ ಯೋಜನೆ ರೂಪುಗೊಂಡಿದೆ ಎಂದರು.
ನಮ್ಮಲ್ಲಿ ಅದ್ಭುತ ಗ್ರಂಥಾಲಯಗಳಿದ್ದರೂ ಅಲ್ಪಸಂಖ್ಯಾತರಾಗುತ್ತಿದ್ದೇವೆ. ಈ ಪರಿಸ್ಥಿತಿ ಮುಂದುವರಿದರೆ ಮುಂದಿನ ಪೀಳಿಗೆಯಲ್ಲಿ ಪುಸ್ತಕ ಸಂಸ್ಕೃತಿಯೇ ಇಲ್ಲವಾಗುವ ಅತಂಕವಿದೆ. ಹೀಗಾಗಿ ರಾಜ್ಯಾದ್ಯಂತ 1 ಲಕ್ಷ ಮನೆಗಳಲ್ಲಿ ‘ಮನೆಗೊಂದು ಗ್ರಂಥಾಲಯ’ ಸ್ಥಾಪಿಸುವ ಗುರಿಯಿದೆ. ಈ ಮೂಲಕ ಕನಿಷ್ಠ 1 ಕೋಟಿ ಮನಸ್ಸುಗಳನ್ನು ತಲುಪಿ, ಪುಸ್ತಕ ಸಂಸ್ಕೃತಿ ಜೀವಂತವಾಗಿರಿಸುವ ಇಂಗಿತವಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪಡೆದ ಕೃತಿಗಳು ಓದುಗರಿಗೆ ಸಿಗುವಂತೆ ಎಲ್ಲ ಸರ್ಕಾರಿ ಗ್ರಂಥಾಲಯಗಳಲ್ಲಿ ಇರಿಸಬೇಕು ಎಂದರಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹವಾಗುವ ಗ್ರಂಥಾಲಯ ತೆರಿಗೆ ಹಣ ಎತ್ತ ಹೋಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿ.ಕೆ.ಕುಲಕರ್ಣಿ, ವಿ.ಹನುಮಂತಪ್ಪ, ಡಾ.ಎ.ಟಿ.ಪಾಟೀಲ, ಸಂಧ್ಯಾ ಸುರೇಶ್, ಸತ್ಯಭಾಮಾ ಮಂಜುನಾಥ್, ಆನಂದ ಋಗ್ವೇದಿ, ಕೆ .ಎನ್. ಜಯಪ್ರಕಾಶ್, ಪಾಪು ಗುರು ಮೊದಲಾದವರ ಮನೆಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಸಮಿತಿಯ ಸಂಚಾಲಕ ಎನ್.ಟಿ.ಯರ‌್ರಿಸ್ವಾಮಿ, ಸದಸ್ಯರಾದ ಸುಕನ್ಯಾ ತ್ಯಾವಣಗಿ, ಮಂಜುಳಾ ಸುನಿಲ್, ಕೆ.ಎನ್. ಶೈಲಜಾ, ಫಕೀರೇಶ ಆದಾಪುರ, ರಾಜೇಂದ್ರ ಪ್ರಸಾದ್ ನೀಲಗುಂದ, ಕಸಾಪ ಪದಾಧಿಕಾರಿ ಕೆ. ರಾಘವೇಂದ್ರ ನಾಯರಿ, ಪ್ರಕಾಶ್ ಜಿಗಳಿ, ವೀರೇಶ್, ಸುರೇಶ್ ಕುಣಿಬೆಳೆಕೆರೆ, ಆವರಗೆರೆ ರುದ್ರಮುನಿ ಇತರರಿದ್ದರು.