‘ಕ್ಷಮೆಯಿರಲಿ ತಂದೆ’ ಚಿತ್ರ 12ರಂದು ತೆರೆಗೆ

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗನಟ ಮೂಗು ಸುರೇಶ್ ಜತೆ ಮಲ್ಲಿಕಾರ್ಜುನ ಬಾವಿಕಟ್ಟೆ, ಮನೋಜ್ ಪೂಜಾರ್, ಡಾ. ಮಲ್ಲೇಶ್ ಇದ್ದರು.
ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗನಟ ಮೂಗು ಸುರೇಶ್ ಜತೆ ಮಲ್ಲಿಕಾರ್ಜುನ ಬಾವಿಕಟ್ಟೆ, ಮನೋಜ್ ಪೂಜಾರ್, ಡಾ. ಮಲ್ಲೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೀಕ್ಷಕರ ವಲಯ ಕೊರತೆಯಲ್ಲಿ ಕನ್ನಡ ಚಿತ್ರರಂಗ
  • ಕನ್ನಡ ಚಿತ್ರಗಳು ಗೆದ್ದರೆ ಭಾಷಾ ಬೆಳವಣಿಗೆಗೂ ಬಲ
  • ಹಿರಿಯ ರಂಗನಟ ಮೂಗು ಸುರೇಶ್ ಹೇಳಿಕೆ
ದಾವಣಗೆರೆ: ಚೊಚ್ಚಲ ಬಾರಿಗೆ ನನ್ನದೇ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಇಷ್ಟಪಟ್ಟು ಮಾಡಿರುವ ‘ಕ್ಷಮೆಯಿರಲಿ ತಂದೆ’ ಸಿನಿಮಾ ಜೂ. 12ರಂದು ರಾಜ್ಯದ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹಿರಿಯ ರಂಗನಟ ಮೂಗು ಸುರೇಶ್ ಹೇಳಿದರು.
ದೇವೀರಮ್ಮ ಮಲ್ಲಿಕಾರ್ಜುನ ಸ್ವಾಮಿ ಫಿಲಂಸ್ ಬ್ಯಾನರ್‌ನಡಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಹಾಗೂ ಅನಗತ್ಯ ವೆಚ್ಚವಿಲ್ಲದೆ ಸಿನಿಮಾ ನಿರ್ಮಿಸಿದ್ದೇನೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಹೆಚ್ಚಿನ ಬಾಡಿಗೆ ಕಟ್ಟಲಾಗದು. ಹೀಗಾಗಿ ಮಲ್ಟಿಫ್ಲೆಕ್ಸ್‌ಗಳನ್ನೇ ನೆಚ್ಚಿದ್ದೇನೆ. ಹಾಕಿದ ಬಂಡವಾಳವಾದರೂ ಕೈ ಸೇರುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ಮಂಜುನಾಥ ಹೆಗ್ಡೆ, ರೇಣುಕಾ ಬಾಲಿ, ಶ್ರೀಮಂತ್, ವಿನ್ಯಾ ಶೆಟ್ಟಿ ಹಾಗೂ ನಾನು ನಟಿಸಿದ್ದೇನೆ. ಚಿತ್ರದಲ್ಲಿ ಒಳ್ಳೆಯ ಲೊಕೇಷನ್‌ಗಳನ್ನು ಸೆರೆಹಿಡಿಯಲಾಗಿದೆ. ಸೂರ್ಯಕಾಂತ್ ಉತ್ತಮ ಛಾಯಾಗ್ರಹಣ ಮಾಡಿದ್ದು ಮುತ್ತುರಾಜ್ ಸಂಕಲನ, ಪುಣ್ಯೇಶ್ ಕುಮಾರ್ ಸಂಗೀತ ನಿರ್ದೇಶನವಿದೆ. ಚಿತ್ರದಲ್ಲಿ ಉತ್ತಮ ಸಂದೇಶವಿದೆ.
ತಮಿಳು, ಮಲೆಯಾಳಂ ಚಿತ್ರಗಳಿಗಿರುವಷ್ಟು ಹೆಚ್ಚಿನ ವೀಕ್ಷಕರ ವಲಯ ಕನ್ನಡ ಚಿತ್ರರಂಗಕ್ಕಿಲ್ಲ. ಕಡಿಮೆ ಬಜೆಟ್‌ನಲ್ಲೂ ಉತ್ತಮ ಕತೆಗಳಿರುವ ಕನ್ನಡ ಸಿನಿಮಾಗಳನ್ನು ಜನರು ಬೆಂಬಲಿಸಿದ್ದಾರೆ. ಮತ ಹಾಕಿ ರಾಜಕಾರಣಿಗಳನ್ನು ಗೆಲ್ಲಿಸುವ ಜನರು ಚಿತ್ರಗಳನ್ನು ಗೆಲ್ಲಿಸಬೇಕು. ಕನ್ನಡ ಚಿತ್ರಗಳು ಗೆದ್ದರೆ ಕನ್ನಡ ಭಾಷೆಯೂ ಬೆಳೆಯಲಿದೆ. ಕಲಾವಿದರೂ ಬದುಕುತ್ತಾರೆ ಎಂದು ಹೇಳಿದರು.
ಮಧ್ಯಮ ವರ್ಗದ ಸರ್ಕಾರಿ ನೌಕರರ ಕುಟುಂಬದಲ್ಲಿ ನಡೆಯುವ ಕತೆ ಇದು. ಮಗನ ಭವಿಷ್ಯ ಹೇಗೆ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದ ಸಾರಾಂಶವನ್ನು ಈಗಲೇ ಬಿಟ್ಟುಕೊಡಲಾಗದು. 50 ವರ್ಷ ರಂಗಭೂಮಿಯಲ್ಲಿ ಬೆಳೆದ ನಾನು ಚಿತ್ರರಂಗಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಿದ್ದೇನೆ ಎಂದರು.
ಇತ್ತೀಚೆಗೆ ಬೆಂಗಳೂರಲ್ಲಿ ಚಿತ್ರದ ಟ್ರೇಲರ್ ವಿಡಿಯೋ ಹಾಗೂ ಪೋಸ್ಟರ್ ಬಿಡುಗಡೆಯಾಗಿದೆ. ಕುಟುಂಬದವರು ಒಟ್ಟಿಗೆ ನೋಡಬಹುದಾದ ಸಿನಿಮಾ ಇದಾಗಿದೆ. ಪ್ರೇಕ್ಷಕರು ಸಿನಿಮಾ ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ಮಲ್ಲಿಕಾರ್ಜುನ ಬಾವಿಕಟ್ಟೆ, ಮನೋಜ್ ಪೂಜಾರ್, ಡಾ. ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net