ನರವೈಜ್ಞಾನಿಕ ಆರೋಗ್ಯದತ್ತ ಗಮನ ಅಗತ್ಯ

ದಾವಣಗೆರೆಯಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಆಯೋಜಿಸಿದ್ದ ಮಿದುಳು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಎಸ್ಪಿ ಎಚ್.ಟಿ. ಶೇಖರ್ ಉದ್ಘಾಟಿಸಿದರು. ನರರೋಗ ತಜ್ಞ ಡಾ.ಎ.ಎಚ್. ಹರೀಶ್, ಡಿವೈಎಸ್ಪಿ ತಿಪ್ಪೇಸ್ವಾಮಿ, ಪಿಐ ಕಿರಣ್‌ಕುಮಾರ್, ಪ್ರಶಾಂತ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬೇಕು ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ
  • ದಾವಣಗೆರೆ ಎಸ್ಪಿ ಎಚ್.ಟಿ. ಶೇಖರ್ ಹೇಳಿಕೆ
  • ಪೊಲೀಸ್ ಸಿಬ್ಬಂದಿಗೆ ಮಿದುಳು ಹೆಲ್ತ್ ಜಾಗೃತಿ

ದಾವಣಗೆರೆ: ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಹಾಗೂ ನರವೈಜ್ಞಾನಿಕ ಆರೋಗ್ಯದ ಕಡೆಗೂ ನಾವು ಒತ್ತು ನೀಡಬೇಕಿದೆ. ಆರೋಗ್ಯವಂತ ಮಿದುಳು ಆರೋಗ್ಯವಂತ ಸಮಾಜದ ಅಡಿಪಾಯವಾಗಿದ್ದು ಉತ್ತಮ ನಾಯಕತ್ವ ಮತ್ತು ಸೇವೆಗೆ ಸಹಕಾರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಹೇಳಿದರು.

ವಿಶ್ವ ಮಿದುಳು ದಿನಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಆಯೋಜಿಸಿದ್ದ ಮಿದುಳು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸರ ಕರ್ತವ್ಯವು ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲದೆ ಸಂಕಷ್ಟದ ಸಂದರ್ಭಗಳಲ್ಲಿ ಸಮಚಿತ್ತದಿಂದ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನೂ ಒಳಗೊಂಡಿದೆ. ಪೊಲೀಸ್ ಸಿಬ್ಬಂದಿ ನಿತ್ಯ ಸ್ವಲ್ಪ ಸಮಯವನ್ನು ಆರೋಗ್ಯಕ್ಕಾಗಿ ಮೀಸಲಿಡಬೇಕು. ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಸಮರ್ಪಕ ನಿದ್ರೆ ಹಾಗೂ ಪೌಷ್ಟಿಕ ಆಹಾರವು ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ ಎಂದರು.
ಪ್ರತಿಯೊಬ್ಬರೂ ಒತ್ತಡ ನಿರ್ವಹಿಸುವ ಕೌಶಲ ಬೆಳೆಸಿಕೊಳ್ಳಬೇಕು. ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಹಿಂಜರಿಯಬಾರದು. ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯಬೇಕು ಎಂದು ಹೇಳಿದರು.
ಮಾನವನ ಜೀವನದಲ್ಲಿ ಹೃದಯಕ್ಕಿಂತಲೂ ಹೆಚ್ಚಿನ ಮಹತ್ವ ಮಿದುಳಿಗಿದೆ. ಅದಿಲ್ಲದೆ ಮಾನವನ ಅಸ್ತಿತ್ವವೇ ಇಲ್ಲ. ವ್ಯಕ್ತಿಯ ಆಲೋಚನೆ, ಸ್ಮರಣಶಕ್ತಿ, ನಿರ್ಧಾರ ಸಾಮರ್ಥ್ಯ, ಭಾವನೆಗಳು, ವರ್ತನೆ, ಕಾರ್ಯಕ್ಷಮತೆ ಎಲ್ಲವೂ ಮಿದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ.
ಇಂದಿನ ವೇಗದ ಜೀವನಶೈಲಿ, ನಿರಂತರ ಒತ್ತಡ, ನಿದ್ರಾಹೀನತೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಿದುಳು ಸಂಬಂಧಿತ ಕಾಯಿಲೆಗಳು ಹೆಚ್ಚಿವೆ. ಆರೋಗ್ಯಕರ ಜೀವನಶೈಲಿ ಅಳವಡಿಕೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಮಿದುಳಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಈ ಕಾಲದ ಅಗತ್ಯವಾಗಿದೆ. ಪಾರ್ಶ್ವವಾಯು, ಮರೆವಿನ ಕಾಯಿಲೆ, ಅಪಸ್ಮಾರ ಸೇರಿ ಅನೇಕ ನರರೋಗಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ನಿಯಮಿತ ವೈದ್ಯಕೀಯ ತಪಾಸಣೆ ಪ್ರತಿಯೊಬ್ಬರ ಆದ್ಯತೆ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಜಿ. ಆಸ್ಪತ್ರೆಯ ನರರೋಗ ತಜ್ಞ ಡಾ.ಎ.ಎಚ್. ಹರೀಶ್ ಮಾತನಾಡಿ ಮಿದುಳು ಸಂಬಂಧಿತ ಕಾಯಿಲೆಗಳ ಲಕ್ಷಣಗಳು, ಅಪಾಯಕಾರಕ ಅಂಶಗಳು, ತಡೆಗಟ್ಟುವ ಕ್ರಮಗಳು, ಪಾರ್ಶ್ವವಾಯು ಸಂದರ್ಭದಲ್ಲಿ ಗೋಲ್ಡನ್ ಹವರ್ ಚಿಕಿತ್ಸೆಯ ಮಹತ್ವದ ಕುರಿತು ವಿವರ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಂ.ಬಿ. ನಾಗೇಂದ್ರಪ್ಪ, ಡಿವೈಎಸ್ಪಿ ತಿಪ್ಪೇಸ್ವಾಮಿ, ಪೊಲೀಸ್ ನಿರೀಕ್ಷಕರಾದ ಕಿರಣ್‌ಕುಮಾರ್, ಪ್ರಶಾಂತ್ ಇದ್ದರು.
---
ದಾವಣಗೆರೆಯಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಆಯೋಜಿಸಿದ್ದ ಮಿದುಳು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಎಸ್ಪಿ ಎಚ್.ಟಿ. ಶೇಖರ್ ಉದ್ಘಾಟಿಸಿದರು. ನರರೋಗ ತಜ್ಞ ಡಾ.ಎ.ಎಚ್. ಹರೀಶ್, ಡಿವೈಎಸ್ಪಿ ತಿಪ್ಪೇಸ್ವಾಮಿ, ಪಿಐ ಕಿರಣ್‌ಕುಮಾರ್, ಪ್ರಶಾಂತ್ ಇದ್ದರು.
----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net