ದಾವಣಗೆರೆಯಲ್ಲಿ ಸೋಮವಾರ, ಸಿದ್ದಗಂಗಾ ಶಾಲೆಯ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಎಸ್.ಜೆ.ಜೆ.ಎಂ. ಶಾಲೆಯ ಶೈಕ್ಷಣಿಕ ಸಲಹೆಗಾರ್ತಿ ಆರ್.ವಾಗ್ದೇವಿ ಅವರಿಗೆ ರಾಜ್ಯ ಮಟ್ಟದ ಎಂ.ಎಸ್.ಎಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿ.ಸಿ.ಚೇತನ್, ಶಾಲೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಗಾಯತ್ರಿ ಚಿಮ್ಮಡ್, ರೇಖಾರಾಣಿ, ಎಸ್.ಆಶಾ, ಡಿ.ಹರಿಣಿ, ಫಾರೂಕ್ ಉಸ್ಮಾನಿ ಇತರರಿದ್ದರು.
ದಾವಣಗೆರೆ:ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಎಡವಿದಾಗ ಅವರಿಗೆ ಶಿಕ್ಷಿಸಬೇಡಿ. ಬದಲಾಗಿ ಅವರನ್ನು ತಿದ್ದಿ ಆಸಕ್ತಿ, ಹಂಬಲ ಬೆಳೆಸುವ ಕಡೆಗೆ ಗಮನ ನೀಡಿದಾಗ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಎಸ್.ಜೆ.ಜೆ.ಎಂ. ಶಾಲೆಯ ಶೈಕ್ಷಣಿಕ ಸಲಹೆಗಾರ್ತಿ ಆರ್.ವಾಗ್ದೇವಿ ಶಿಕ್ಷಕರಿಗೆ ಸಲಹೆ ನೀಡಿದರು.
ಸಿದ್ದಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ, 56ನೇ ವಾರ್ಷಿಕ ಸಂಭ್ರಮ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಎಂ.ಎಸ್.ಎಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮಕ್ಕಳಲ್ಲಿ ಕಲಿಕೆ ಬಗ್ಗೆ ಆಸಕ್ತಿ, ಹಂಬಲ ಮತ್ತು ಪ್ರಾಮಾಣಿಕತೆ ಇರಬೇಕು. ಸ್ವಲ್ಪ ಕಡಿಮೆಯಾದರೂ ಶಿಕ್ಷಕರು ಗುರುತಿಸಿ ತಿದ್ದಬೇಕು. ಮಕ್ಕಳನ್ನು ಎಲ್ಲರೂ ನಿಂದಿಸುತ್ತಾರೆ. ಆದರೆ, ಯಾವ ಮಕ್ಕಳೂ ಸಹ ನಿಷ್ಟ್ರಯೋಜಕರಲ್ಲ. ಇದು ಕಲಿಕೆಯಲ್ಲಿ ಶಿಕ್ಷಕರು ಎಡವಿದ್ದಾರೆಯೇ ಎಂಬುದರ ಸಂಕೇತ ಮಾತ್ರ ಎಂದರು.
ಕಡಿಮೆ ಅಂಕ ಬಂದರೆ, ಅನುತ್ತೀರ್ಣರಾದರೆ, ಯಾರಾದರೂ ನಿಂದಿಸಿದರೆ ವಿದ್ಯಾರ್ಥಿಗಳಲ್ಲಿ ಬೇಸರ ಬೇಡ. ಕಡಿಮೆ ಮತ್ತು ಸಮರ್ಪಕವಾಗಿ ಓದದ್ದಕ್ಕೆ ಲೋಪವಾಗಿದೆ ಎಂದು ಭಾವಿಸಬೇಕು. ಹೊಳೆಯುವ ಹರಳುಗಳಾಗದೆ ವಜ್ರವಾಗಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಒಡೆಯುವ ಹಾಲು ಆಗದೆ ಬಹುಕಾಲ ಬಾಳುವ ತುಪ್ಪವಾಗಬೇಕು.ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು 70 ದಿನಗಳಿವೆ. ಈಗಿನಿಂದಲೇ ಕ್ರಮಬದ್ಧವಾಗಿ ಓದಿದರೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಅವಕಾಶವಿದೆ. ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪ್ರದಾಯ ಟ್ರಸ್ಟ್ ಸಹ ಸಂಸ್ಥಾಪಕ ಡಿ.ಸಿ.ಚೇತನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೈಬೆರಳಲ್ಲೇ ಮಾಹಿತಿ ಸಿಗುವ ಕಾಲವಿದು. ಹೀಗಾಗಿ ಓದು ಕಷ್ಟವಲ್ಲ. ಅನೇಕ ಮಕ್ಕಳು ಬಡತನದ ನಡುವೆ ಮನೆಗೆಲಸ, ಗ್ಯಾರೇಜ್ ಮಾಡಿ ಓದುವವರಿದ್ದಾರೆ. ಕಷ್ಟದ ದಿನಗಳು ಬಲಿಷ್ಠ ವ್ಯಕ್ತಿಯಾಗಿ ರೂಪಿಸಲಿವೆ. ಜೀವನವನ್ನು ಗಂಭೀರವಾಗಿ ಎದುರಿಸಿ ಎಂದು ಹೇಳಿದರು.
ಸಿದ್ಧಗಂಗಾ ಶಾಲೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಸಿಬಿಎಸ್‌ಇ ವಿಭಾಗದ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಸಹ ಶಿಕ್ಷಕರಾದ ಎಸ್.ಆಶಾ, ಡಿ.ಹರಿಣಿ, ಫಾರೂಕ್ ಉಸ್ಮಾನಿ ಇದ್ದರು. ಸಿಬಿಎಸ್‌ಇ 10ನೇ ತರಗತಿಯ ಪ್ರತಿಭಾನ್ವಿತ 26 ಮಕ್ಕಳನ್ನು ಪುರಸ್ಕರಿಸಲಾಯಿತು. ಮುಖ್ಯ ಶಿಕ್ಷಕಿ ರೇಖಾರಾಣಿ ಕಾರ್ಯಕ್ರಮ ನಿರೂಪಿಸಿದರು.