ಬಡವರನ್ನು ತಲುಪಿದ ಪಂಚ ಗ್ಯಾರಂಟಿ

ದಾವಣಗೆರೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಮನೂರು ಬಸವರಾಜ, ಗಿತ್ತೆ ಮಾಧವ ವಿಠ್ಠಲರಾವ್, ರಾಜೇಶ್ವರಿ, ಕೆ.ಎನ್. ಮಂಜುನಾಥ್, ಅನೀಸ್ ಪಾಷಾ ಇದ್ದರು.
ದಾವಣಗೆರೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಮನೂರು ಬಸವರಾಜ, ಗಿತ್ತೆ ಮಾಧವ ವಿಠ್ಠಲರಾವ್, ರಾಜೇಶ್ವರಿ, ಕೆ.ಎನ್. ಮಂಜುನಾಥ್, ಅನೀಸ್ ಪಾಷಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಮನೂರು ಬಸವರಾಜ ಹೇಳಿಕೆ
  • ಯೋಜನೆ ಪ್ರಗತಿ ಪರಿಶೀಲನಾ ಸಭೆ
  • ಲೋಪದೋಷವಿದ್ದರೆ ಸರಿಪಡಿಸಿ
ದಾವಣಗೆರೆ : ಜಿಲ್ಲೆಯಲ್ಲಿರುವ ಬಡ ಜನರಿಗೆ ಪಂಚ ಗ್ಯಾರಂಟಿಗಳು ತಲುಪುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚ ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ವೇಳೆ ಕೆಲವು ಲೋಪದೋಷ, ತೊಡಕುಗಳು ಉಂಟಾಗಬಹುದು, ಆದರೆ ಅವುಗಳನ್ನು ಅಧಿಕಾರಿಗಳು ಸಕಾಲದಲ್ಲಿ ಸರಿಪಡಿಸಿಕೊಂಡು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಜಿಲ್ಲೆಯ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರು ಬೆರಳಚ್ಚು ನೀಡಿ ಪ್ರತಿ ತಿಂಗಳು ಪಡಿತರ ಪಡೆಯದೇ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಹೆಚ್ಚುವರಿಯಾಗಿ ಪಡಿತರ ಪಡೆಯುತ್ತಿದ್ದಾರೆ ಎಂದು ಮಾಹಿತಿ ಬಂದಿದೆ. ಈ ರೀತಿ ಪಡಿತರ ವಿತರಿಸಲು ಅವಕಾಶವಿಲ್ಲ. ಆಯಾ ತಿಂಗಳಲ್ಲೇ ಪಡಿತರ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ 3,86,715 ಫಲಾನುಭವಿಗಳಿದ್ದು ಏಪ್ರಿಲ್ನಿಂದ ಜುಲೈ ವರೆಗೆ 290.32 ಕೋಟಿ ಮೊತ್ತ ಜಮಾ ಮಾಡಲಾಗಿದೆ.
ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ 4651 ಕುಟುಂಬದ ಯಾಜಮಾನಿಯರು ಮರಣ ಹೊಂದಿದ್ದಾರೆ. ಈ ಪೈಕಿ 3750 ಜನ ಮರಣ ಹೊಂದಿದವರ ಮಾಹಿತಿಯನ್ನು ಪಡೆದು 2.96 ಕೋಟಿ ರೂ. ಸರ್ಕಾರಕ್ಕೆ ಜಮಾ ಮಾಡಲಾಗಿದೆ ಎಂದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 11.81 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು ಇದಕ್ಕಾಗಿ 346.43 ಕೋಟಿ ರೂ. ಹಣವನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ.
ಯುವನಿಧಿ ಯೋಜನೆಯಡಿ ಜುಲೈ ಅಂತ್ಯಕ್ಕೆ 9248 ಫಲಾನುಭವಿಗಳಿಗೆ 24.69 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಯುವನಿಧಿಯಡಿ ಒಟ್ಟು 167 ಬಗೆಯ ಕೌಶಲಾಧಾರಿತ ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ ತರಬೇತಿ ನೀಡುವಂತೆ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ 5.15 ಲಕ್ಷ ಗ್ರಾಹಕರು ನೋಂದಣಿಯಾಗಿದ್ದು ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ 24.41 ಕೋಟಿ ರೂ. ಸಹಾಯಧನ ಪಾವತಿಸಲಾಗಿದೆ ಎಂದು ತಿಳಿಸಿದರು.

ಬೃಹತ್ ಉದ್ಯೋಗ ಮೇಳ 22ಕ್ಕೆ

ಡಿ. 22 ರಂದು ನಗರದ ಯುಬಿಡಿಟಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ಇದರಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಯುವನಿಧಿ ಫಲಾನುಭವಿಗಳಿಗೆ ತುಂಬಾ ಉಪಯುಕ್ತವಾಗಲಿದೆ. ಈ ಉದ್ಯೋಗ ಮೇಳದಲ್ಲಿ ಕೆಲಸ ಸಿಗದವರಿಗೆ ಯುವನಿಧಿಯಡಿ ನೋಂದಣಿ ಮಾಡಿಸಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಆಹಾರ ಗೋದಾಮಿಗೆ ಖುದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ಯೋಗ್ಯವಲ್ಲದ ಅಕ್ಕಿ ಮತ್ತು ಬೇಳೆಯನ್ನು ಹಿಂದಿರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಾಸ್ತಾನು ಸರಬರಾಜುದಾರರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದರು.
ನ್ಯಾಯಬೆಲೆ ಅಂಗಡಿಗಳ ಬಗ್ಗೆ ಕೇಳಿ ಬರುತ್ತಿರುವ ತೂಕ ವ್ಯತ್ಯಾಸದ ಬಗ್ಗೆ ಎಲ್ಲಿಯೂ ಪ್ರಕರಣ ಕಂಡು ಬಂದಿಲ್ಲ. ಜನನ ಮತ್ತು ಮರಣ ಪ್ರಮಾಣಗಳ ನೋಂದಣಿ ಪ್ರಕ್ರಿಯೆಗೂ ಹಾಗೂ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಮರಣ ಪ್ರಮಾಣ ಕಡಿಮೆ ಇರುವುದಾಗಿ ಅಂಕಿ ಅಂಶಗಳಿವೆ. ಸ್ಪಷ್ಟವಾಗಿ ನೋಂದಣಿ ಮಾಡುವಂತೆ ಹೇಳಿದರು.
ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ರಾಜೇಶ್ವರಿ, ಕೆ.ಎನ್. ಮಂಜುನಾಥ್, ಅನೀಸ್ ಪಾಷಾ, ಸದಸ್ಯರಾದ ಡೋಲಿ ಚಂದ್ರು, ಎಸ್.ಎಸ್. ಗಿರೀಶ್, ಶ್ರೀನಿವಾಸ್, ನಾಗರಾಜ್, ಶಿವಶಂಕರ್ ಕೈದಾಳ್, ಲಿಯಾಖತ್ ಅಲಿ, ಷಂಶೀರ್, ಶಶಿಕಲಾ, ಕೆ.ಜಿ. ಉಮೇಶ್ ಸಭೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net