ರಸಗೊಬ್ಬರ ವಿತರಣೆಗೆ ಪಂಚ ಸೂತ್ರಗಳು

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ಎಚ್.ಟಿ. ಶೇಖರ್, ಜಿಯಾವುಲ್ಲಾ ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ಎಚ್.ಟಿ. ಶೇಖರ್, ಜಿಯಾವುಲ್ಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಸಲು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ
  • ಉಸ್ತುವಾರಿ ಸಮಿತಿ ಸಭೆ
ದಾವಣಗೆರೆ: ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳ ಜತೆಗೆ ರಸಗೊಬ್ಬರಗಳ ಮಿತವಾದ ಬಳಕೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ರಸಗೊಬ್ಬರ ಪೂರೈಕೆದಾರ ಕಂಪನಿಗಳ ಪ್ರತಿನಿಧಿಗಳು ಹಾಗೂ ಮಾರಾಟಗಾರರಿಗೆ ಸಮರ್ಪಕ ಪೂರೈಕೆ ಕುರಿತಂತೆ ಪಂಚ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಮೊದಲನೆಯದಾಗಿ ರಸಗೊಬ್ಬರಗಳನ್ನು ಪೂರೈಸುವ ಕಂಪನಿಗಳು ಹಾಗೂ ಮಾರಾಟಗಾರರು ರೈತರಿಗೆ ಇತರೆ ಕೃಷಿ ಪರಿಕರಗಳನ್ನು ಲಿಂಕ್ ಮಾಡಬಾರದು ಎಂದು ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ರಸಗೊಬ್ಬರ ನಿಯಂತ್ರಣ ಆದೇಶ 1985ರಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರಸಗೊಬ್ಬರ ಉತ್ಪಾದಕ ಸಂಸ್ಥೆಗಳು ಶೇ. 25ರಷ್ಟು ರಸಗೊಬ್ಬರಗಳನ್ನು ಕಾಪು ದಾಸ್ತಾನಿನಡಿ ಕಡ್ಡಾಯವಾಗಿ ಪೂರೈಸಬೇಕು. ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಸಗೊಬ್ಬರ ನಿಗ್ರಹಣಾ ಸಮಿತಿಗಳನ್ನು ರಚಿಸಲಾಗಿದೆ.
ರೈತರು ಯಾವುದೇ ಕಾರಣಕ್ಕೂ ಲೂಸ್ ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಅಧಿಕೃತ ಮಾರಾಟಗಾರರಿಂದಲೇ ಬಿಲ್ಲುಗಳನ್ನು ಪಡೆದು ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಬಳಕೆ ಮಾಡಲು ಸೂಚಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತರು ಎಫ್‌ಐಡಿ ಮತ್ತು ಆಧಾರ್ ಕಾರ್ಡ್ ವಿವರ ನೀಡಿ ಅವಶ್ಯವಿರುವ ರಸಗೊಬ್ಬರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳ ಬದಲಾಗಿ ರಾಗಿ, ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಹಾಗೂ ನೈಸರ್ಗಿಕ ಕೃಷಿಯೊಂದಿಗೆ, ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಲಹೆ ನೀಡಿದರು.
ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಸರಬರಾಜು ಸರಪಳಿ ವ್ಯತ್ಯಯವಾಗುವುದರಿಂದ ಏಕದಳ ಧಾನ್ಯಗಳ ಬದಲಾಗಿ ಸೋಯಾಬೀನ್, ಸೂರ್ಯಕಾಂತಿ, ನೆಲಗಡಲೆಯಂತಹ ಎಣ್ಣೆಕಾಳು ಬೆಳೆಗಳನ್ನು ಹಾಗೂ ಸೋಯಾಬೀನ್ ತೊಗರಿ, ಅವರೆ, ಅಲಸಂದೆ, ಹೆಸರು, ಉದ್ದಿನ ದ್ವಿದಳ ಧಾನ್ಯಗಳನ್ನು ಬೆಳಯಲು ಹೇಳಿದರು.
ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ರಸಗೊಬ್ಬರಗಳನ್ನು ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ, ರೈತರಿಗೆ ಬಿಲ್ಲುಗಳನ್ನು ನೀಡಲು ಸೂಚಿಸಿದರು. ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ, ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಮಾತನಾಡಿ, ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಗಳ ಕುರಿತು ತಿಳಿಸಿದರು. ಜಿಲ್ಲೆಗೆ ಅವಶ್ಯವಿರುವ 60,444 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ 77,883 ಕ್ವಿಂಟಾಲ್ ದಾಸ್ತಾನು ಲಭ್ಯವಿದ್ದು ಬಿತ್ತನೆ ಬೀಜದ ಯಾವುದೇ ಕೊರತೆ ಇಲ್ಲ ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳಿದ್ದರು.
"

ರಸಗೊಬ್ಬರ ಮಾರಾಟಗಾರರು ಯಾವುದೇ ನಕಲಿ ಆ್ಯಪ್‌ಗಳಿಗೆ ಮಾರುಹೋಗದೆ, ಅಧಿಕೃತ ಕೆ-ಕಿಸಾನ್ ತಂತ್ರಾಂಶದ ಮೂಲಕ ಮಾರಾಟ ಮಾಡಬೇಕು. ಕೃತಕ ಅಭಾವವನ್ನು ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಚಿಲ್ಲರೆ ರಸಗೊಬ್ಬರ ಮಾರಾಟಗಾರರು, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಪೋಲೀಸ್ ಬ್ಯಾರಿಕೇಡ್ ಅಳವಡಿಸಲು ಕಾಯದೆ ತಮ್ಮದೇ ಆದ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಂಡು ವ್ಯವಸ್ಥಿತವಾಗಿ ರಸಗೊಬ್ಬರವನ್ನು ಯಾವುದೇ ಅಹಿತಕರ ಘಟನೆಯಾಗದಂತೆ ವಿತರಣೆ ಮಾಡಬೇಕು.

— ಎಚ್.ಟಿ. ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net