ಬಿಸಿಲಿಗೆ ಒಣಗುತ್ತಿರುವ ರಾಗಿ ಬೆಳೆ

ಹೂವು-ಕಾಳು ಕಟ್ಟುವ ಹಂತದಲ್ಲೇ ತೇವಾಂಶ ಕೊರತೆ, ರೈತರ ನಿರೀಕ್ಷೆ ಹುಸಿ
crop
ದಿಂಡದಹಳ್ಳಿ ಸಮೀಪ ಕಾಳು ಕಟ್ಟುವ ಹಂತದಲ್ಲಿರುವ ರಾಗಿ ಬೆಳೆ.crop
Published on: 

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಕಳೆದೊಂದು ವಾರದಿಂದ ಬಿರು ಬಿಸಿಲಿನ ತಾಪಮಾನಕ್ಕೆ, ಹೂವು ಹಾಗೂ ಕಾಳು ಕಟ್ಟುವ ಹಂತದಲ್ಲಿರುವ ರಾಗಿ ಬೆಳೆ ಭೂಮಿಯಲ್ಲಿ ತೇವಾಂಶವಿಲ್ಲದೆ ಅಕ್ಷರಶಃ ಒಣಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ತಾಲೂಕಿನ ರೈತರು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹಾಗೂ ಕಸಬಾ ಹೋಬಳಿಗಳ ಸಾವಿರಾರು ಎಕರೆಯಲ್ಲಿ ಬೆಳೆದಿರುವ ರಾಗಿ ಬೆಳೆ ಮಳೆಯಿಲ್ಲದೆ ಬಾಡುತ್ತಿದೆ. ಈ ಬಾರಿ ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ಭರವಸೆ ಹುಸಿಯಾಗುತ್ತಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಈಗಾಗಲೇ ಮೆಕ್ಕೆಜೋಳ ಬೆಳೆ ಶೇಕಡಾ 80ರಷ್ಟು ಒಣಗಿವೆ. ರಾಗಿ ಬೆಳೆ ಅಷ್ಟೋ ಇಷ್ಟೋ ಜೀವ ಹಿಡಿದುಕೊಂಡಿದ್ದು, ಇಳುವರಿ ಕುಸಿತದ ಆತಂಕ ಎದುರಾಗಿದೆ. ಕನಿಷ್ಠ ಮನೆಗೆ ಊಟ ಮಾಡಲು ರಾಗಿ ಸಿಕ್ಕರೆ ಸಾಕು, ಎನ್ನುವ ಸ್ಥಿತಿಗೆ ಕೃಷಿಕರು ತಲುಪಿದ್ದಾರೆ.

ರಾಗಿ ಬಿತ್ತನೆ ಶೇ. 60 ರಷ್ಟು ಹೆಚ್ಚಳ

ಕಳೆದ ಎರಡು-ಮೂರು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ತಾಲೂಕಿನಲ್ಲಿ ರಾಗಿ ಬಿತ್ತನೆ ವಿಸ್ತೀರ್ಣ ಶೇ. 60 ರಷ್ಟು ಹೆಚ್ಚಾಗಿದೆ. 2024 - 25ರಲ್ಲಿ ದಾವಣಗೆರೆ ತಾಲೂಕಿನಲ್ಲಿ ಕೇವಲ 1530 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. 2025- 26ರಲ್ಲಿ 1708 ಹೆಕ್ಟೇರ್ ಮತ್ತು 2026 - 27ರಲ್ಲಿ 10,025 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಈಗ ಸೂಕ್ತ ಹದ ಮಳೆ ಬಾರದಿದ್ದರೆ ಬೆಳೆ ಸಂಪೂರ್ಣ ನಾಶವಾಗುವ ಭೀತಿ ರೈತರಲ್ಲಿ ಉಂಟಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಮೇವಿನ ಅಭಾವ

ಮಳೆ ಬಾರದೆ ರಾಗಿ ಸಿಪ್ಪೆ ಹಾಗೂ ಹುಲ್ಲು ಒಣಗಿದರೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ. ಈಗಾಗಲೇ ಮೆಕ್ಕೆಜೋಳದ ಸಪ್ಪೆ ಒಣಗಿದ್ದು, ಪ್ರಸ್ತುತ ಮಳೆಗಾಲದಲ್ಲೇ ಮೇವಿಗೆ ಅಭಾವ ಸೃಷ್ಟಿಯಾಗಿದೆ. ಭದ್ರಾ ನಾಲೆಯ ಅಚ್ಚುಕಟ್ಟು ಭಾಗದಲ್ಲೂ ನೀರಿನ ಅಭಾವದಿಂದ ಭತ್ತ ನಾಟಿ ಮಾಡದಿರುವುದರಿಂದ, ಬೇಸಿಗೆ ವೇಳೆಗೆ ತಾಲೂಕಿನಲ್ಲಿ ಜಾನುವಾರುಗಳಿಗೆ ನೀರು ಮತ್ತು ಮೇವಿನ ಹಾಹಾಕಾರ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ತಾಲೂಕಿನ ಎಲ್ಲ ಹೋಬಳಿಗಳಲ್ಲೂ ಮೆಕ್ಕೆಜೋಳ ಬೆಳೆಯನ್ನು ಹಿಂದಿಕ್ಕಿ ರೈತರು ಅತಿ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆ. ಸದ್ಯ ಒಂದೆರಡು ಉತ್ತಮ ಮಳೆ ಬಂದರೆ ಬೆಳೆ ಚೇತರಿಸಿಕೊಳ್ಳುತ್ತದೆ. ರಾಗಿ ಕಟಾವು ಮಾಡಲು ಹಾಗೂ ಹುಲ್ಲನ್ನು ಪೆಂಡಿ ಕಟ್ಟಲು ಯಂತ್ರಗಳು ಹೇರಳವಾಗಿ ಲಭ್ಯವಿವೆ.
ಡಿ.ಎಂ. ಶ್ರೀಧರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net