ಸ್ವಚ್ಛತೆ ಕಾಪಾಡದ ನಿವೇಶನ ಮಾಲೀಕರಿಗೆ ದಂಡ ವಿಧಿಸಿ

ದಾವಣಗೆರೆ ನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ನಗರಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಯುಕ್ತೆ ರೇಣುಕಾ,  ಮಂಜುನಾಥ್ ಚವ್ಹಾಣ್, ಎಂ.ಎಚ್. ಉದಯಕುಮಾರ್, ಎಂ. ಮಂಜುಳಾ, ಪ್ರಿಯಾಂಕಾ ಇದ್ದರು.
ದಾವಣಗೆರೆ ನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ನಗರಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಯುಕ್ತೆ ರೇಣುಕಾ, ಮಂಜುನಾಥ್ ಚವ್ಹಾಣ್, ಎಂ.ಎಚ್. ಉದಯಕುಮಾರ್, ಎಂ. ಮಂಜುಳಾ, ಪ್ರಿಯಾಂಕಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಲಹೆ
  • ರಸ್ತೆ-ಚರಂಡಿಗೆ 450 ಕೋಟಿ ರೂ. ಯೋಜನೆ
  • ಪೌರಕಾರ್ಮಿಕರಿಗೆ ಕಟ್ಟಡ ಸಂಕೀರ್ಣ ನಿರ್ಮಾಣ
ದಾವಣಗೆರೆ: ಖಾಲಿ ನಿವೇಶನ ಸ್ವಚ್ಛತೆ ಕಾಪಾಡದ ಮಾಲೀಕರಿಗೆ ದಂಡ ವಿಧಿಸಿ, ತುಂಗಭದ್ರಾ ಬಡಾವಣೆಯಿಂದ ಹಳೆ ಕುಂದುವಾಡ ಮಾರ್ಗದ ಸಣ್ಣ ಆರ್‌ಯುಬಿಗಳ ಪ್ರಮಾಣ ಹಿಗ್ಗಿಸಿ. ನಗರಪಾಲಿಕೆ ಆವರಣದಲ್ಲಿ ಪಾರ್ಕಿಂಗ್ ಮಾಡುವ ಸಾರ್ವಜನಿಕರ ವಾಹನಗಳಿಗೆ ಶುಲ್ಕ ವಿಧಿಸಿ. ವಿದ್ಯಾನಗರದ ಕಾಫಿ ಡೇ ಶಾಪ್‌ನಿಂದ ಬಿಐಇಟಿವರೆಗಿನ ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸಿ....
ದಾವಣಗೆರೆ ನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಆಯುಕ್ತೆ ರೇಣುಕಾ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ, ನಗರಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳಿವು.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಹೆಚ್ಚಿನ ಖಾಲಿ ನಿವೇಶನಗಳಿವೆ. ಸ್ವಚ್ಛತೆ ನಿರ್ವಹಿಸಿಕೊಳ್ಳದವರಿಗೆ ದುಪ್ಪಟ್ಟು ವಿಧಿಸಿ ಎಂದು ಎ. ವೀರಭದ್ರಪ್ಪ ಹೇಳಿದರು. ಕೆಲವೆಡೆ ರಸ್ತೆಗಳ ಗುಂಡಿ ತೆಗೆದು ಹಾಗೇ ಬಿಡಲಾಗಿದೆ. ವಿದ್ಯುತ್ ತಂತಿ ತುಂಡಾಗಿದೆ ಎಂದೂ ದೂರಿದರು.
ಆಂಜನೇಯ ಬಡಾವಣೆ, ಎಂಸಿಸಿ ಬಿ ಬ್ಲಾಕ್, ವಿನಾಯಕ ನಗರ ಸೇರಿ ಕೆಲವೆಡೆ ಪೈಲಟ್ ಯೋಜನೆಯಡಿ ಗ್ಯಾಸ್ ಏಜೆನ್ಸಿಯವರು ಗುಂಡಿ ತೆರೆದಿದ್ದಾರೆ. 100 ಮೀ.ಗೆ ಒಂದರಂತೆ ಬಾಕ್ಸ್ ತೆರೆದಿದ್ದಾರೆ. ಪರಿಶೀಲನೆಗೆ 40 ದಿನ ಬೇಕು ಎನ್ನುತ್ತಿದ್ದಾರೆ. ಡಿ. 15ರೊಳಗೆ ಮುಚ್ಚುವ ಭರವಸೆ ನೀಡಿದ್ದಾರೆ ಎಂದು ಆಯುಕ್ತರು ಸಮಜಾಯಿಷಿ ನೀಡಿದರು.
ವಿದ್ಯಾನಗರದ ಕಾಫಿ ಡೇ ಶಾಪ್‌ನಿಂದ ಬಿಐಇಟಿವರೆಗಿನ ರಸ್ತೆಯಲ್ಲಿನ 18 ಅವೈಜ್ಞಾನಿಕ ಹಂಪ್ಸ್‌ಗಳಿದ್ದು ಗರ್ಭಿಣಿಯರು ಆಟೋದಲ್ಲಿ ಓಡಾಡದ ಸ್ಥಿತಿ ಇದೆ. ಹಂಪ್ಸ್‌ಗಳ ತೆರವಿಗೆ ಗಮನ ಹರಿಸಬೇಕು ಎಂದು ಬಿ. ಬಸವರಾಜ್ ಕೋರಿದರು. ಪರಿಶೀಲಿಸಿ ಕ್ರಮ ವಹಿಸಲು ಆಯುಕ್ತರು ಸೂಚನೆ ನೀಡಿದರು.
ನಗರಪಾಲಿಕೆ ಕಚೇರಿಗಳಲ್ಲಿ ಹಿರಿಯ ನಾಗರಿಕರು ಹಣ ಕಟ್ಟಲು ಪ್ರತ್ಯೇಕ ಸರದಿ ಸಾಲು ಕಲ್ಪಿಸಬೇಕು. ಚರಂಡಿಗಳ ಸ್ವಚ್ಛತೆಗೆ ಯಂತ್ರಗಳನ್ನೇ ಹೆಚ್ಚು ಬಳಸಬೇಕು. ರಸ್ತೆಗಳಲ್ಲಿ ಆಗಿರುವ ಗುಂಡಿ ಮುಚ್ಚಬೇಕು ಎಂದೂ ಬಸವರಾಜ್ ಹೇಳಿದರು.
ಸ್ವಚ್ಛತೆ ವಿಚಾರವಾಗಿ ಮಾತನಾಡಿದ ಆಯುಕ್ತರು ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಿ. ಕಸ ಸಂಗ್ರಹಣೆಗೆ ಪಾಲಿಕೆ ಆಟೋಗಳು ನಿತ್ಯ ಮನೆಗಳಿಗೆ ತೆರಳುತ್ತಿವೆ. ಕೊರತೆ ಇದ್ದ 20 ಆಟೋಗಳಿಗೆ ಅನುಮೋದನೆ ದೊರೆತಿದೆ. ಜಿಪಿಎಸ್ ಅಳವಡಿಸಿದ್ದೇವೆ ಎಂದರು.
ಬೀದಿದೀಪಗಳು ಮರಗಳ ಮೇಲು ಹಂತದಲ್ಲಿ ಇರುವುದರಿಂದಲೂ ಕೆಲವೆಡೆ ಓಡಾಡುವುದು ಸಮಸ್ಯೆಯಾಗಿದೆ. ಒಳ ರಸ್ತೆಗಳಿಗೂ ಶಾಲಾ ವಾಹನಗಳು ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಿ. ಅನೇಕ ರಸ್ತೆಗಳು ಹಾಳಾಗಿದ್ದು ಟಾರ್ ಮಾಡಿಸಿ ಎಂದು ಬಸವರಾಜಪ್ಪ ಎಂಬುವರು ಹೇಳಿದರು.
ನಗರದಲ್ಲಿ ರಸ್ತೆ, ಚರಂಡಿ, ಒಳಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಈ ಸಂಬಂಧ 450 ಕೋಟಿ ರೂ. ಗಳಿಗೆ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ. ಅನುದಾನ ಬಂದಂತೆಲ್ಲ ಕಾಮಗಾರಿ ನಡೆಸಲಾಗುವುದು ಎಂದು ಆಯುಕ್ತರು ಪ್ರತಿಕ್ರಿಯಿಸಿದರು.
ಆರ್‌ಯುಬಿ ಬಗ್ಗೆ ಸಂಸದರ ಬಳಿ ಚರ್ಚೆ
ಕಿರಣ್‌ಕುಮಾರ್ ಮಾತನಾಡಿ, ತುಂಗಭದ್ರಾ ಬಡಾವಣೆಯಿಂದ ಹಳೆ ಕುಂದುವಾಡ ಮಾರ್ಗದ ಸಣ್ಣ ರೈಲ್ವೆ ಕೆಳಸೇತುವೆಗಳ ಪ್ರಮಾಣ ಹಿಗ್ಗಿಸಿದರೆ ಶಾಮನೂರು ಮಾರ್ಗದ ಜನದಟ್ಟಣೆಯ ಒತ್ತಡ ತಗ್ಗಲಿದೆ ಎಂದು ಸಲಹೆ ನೀಡಿದರು. ಈ ವಿಚಾರವಾಗಿ ಸಂಸದರ ಬಳಿ ಚರ್ಚಿಸುವುದಾಗಿ ಆಯುಕ್ತರು ಹೇಳಿದರು.
ಫುಟ್‌ಪಾತ್ ವ್ಯಾಪಾರ ನಿಯಂತ್ರಣ ಮಾಡಬೇಕು. ಜಕಾತಿ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೈಕ್ ನಿಲ್ಲಿಸಿದರೂ ಶುಲ್ಕ ಪಡೆಯುತ್ತಾರೆ. ನಗರಪಾಲಿಕೆ ಬಳಿ ಈ ವ್ಯವಸ್ಥೆ ತರಬೇಕು ಎಂದು ಪೌರಕಾರ್ಮಿಕರ ಸಂಘದ ಮುಖಂಡ ಎಲ್.ಎಂ.ಎಚ್.ಸಾಗರ್ ಹೇಳಿದರು.
110 ಪೌರಕಾರ್ಮಿಕರಿಗೆ ಬೂದಿಹಾಳ್‌ನ 1.5 ಎಕರೆ ಜಾಗದಲ್ಲಿ ಗೃಹ ಯೋಜನೆಯಡಿ ಕಟ್ಟಡ ಸಂಕೀರ್ಣ ನಿರ್ಮಿಸಲಾಗುವುದು. ಈ ಬಾರಿ ಪಾಲಿಕೆ ಅಧಿಕಾರಿ ಸಿಬ್ಬಂದಿಗೆ ಸಮುದಾಯ ಭವನ ನಿರ್ಮಾಣ, ನೌಕರರಿಗೆ ಕ್ರೀಡಾ ಚಟುವಟಿಕೆ ಆಯೋಜನೆ, ಅಧಿಕಾರಿಗಳಿಗೆ 2 ನೇ ಹಂತದಲ್ಲಿ ವಸತಿಗೃಹ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುವುದು ಎಂದು ಆಯುಕ್ತರು ಹೇಳಿದರು.
ಸಭೆಯಲ್ಲಿ ಉಪಾಯುಕ್ತ (ಅಭಿವೃದ್ಧಿ) ಮಂಜುನಾಥ್ ಚವ್ಹಾಣ್, ಪ್ರಭಾರ ಉಪಾಯುಕ್ತ (ಕಂದಾಯ) ಎಂ.ಎಚ್. ಉದಯಕುಮಾರ್, ಉಪಾಯುಕ್ತೆ (ಆಡಳಿತ) ಎಂ. ಮಂಜುಳಾ, ಮುಖ್ಯ ಲೆಕ್ಕಾಧಿಕಾರಿ ಪ್ರಿಯಾಂಕಾ ಇದ್ದರು.
ಕಟ್ಟಡ ತ್ಯಾಜ್ಯ ವಿಲೇಗೆ 30 ಎಕರೆ ಜಾಗ ಮೀಸಲು
ಸಾರ್ವಜನಿಕರು ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ವಿಲೇ ಮಾಡದಂತೆ 30 ಎಕರೆ ಜಾಗದಲ್ಲಿ ನಿರ್ವಹಣೆ ಮಾಡಲು ಪಾಲಿಕೆ ನಿರ್ಧರಿಸಿದೆ. ಈ ಬಗ್ಗೆ ಶೀಘ್ರವೇ ಕಾರ್ಯೋನ್ಮುಖ ಆಗಲಿದ್ದೇವೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು.
ಜಗಳೂರು ರಸ್ತೆ- ಬಸಾಪುರ ಮೂಲಕ ಪಿಬಿ ರಸ್ತೆ ಸಂಪರ್ಕಿಸುವ ಗಡಿ ವರ್ತುಲ ರಸ್ತೆ ಕಾಮಗಾರಿ ಹೊಸ ವರ್ಷದಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಗರದಲ್ಲಿ ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೂ ಪಾಲಿಕೆ ಗಮನ ಹರಿಸಿದೆ ಎಂದರು.
ಜನರ ಸಹಕಾರದಿಂದಾಗಿ ಪಾಲಿಕೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಕರ್ನಾಟಕದಲ್ಲೇ ನಂ.1 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 32ನೇ ಸ್ಥಾನ ಪಡೆದಿದೆ. 24/7 ನೀರು ಸರಬರಾಜು ಯೋಜನೆಯಲ್ಲಿ 50 ವಲಯಗಳ ಪೈಕಿ 43ರಲ್ಲಿ ಆರಂಭಿಸಲಾಗಿದ್ದು, 32 ವಲಯಗಳಲ್ಲಿ ಬಿಲ್ ನೀಡುವಿಕೆ ಶುರುವಾಗಿದೆ ಎಂದು ತಿಳಿಸಿದರು.
1.63 ಲಕ್ಷ ಆಸ್ತಿಗಳ ಪೈಕಿ ಪೈಕಿ ಇದುವರೆಗೆ 84 ಸಾವಿರ ಇ-ಸ್ವತ್ತು ನೀಡಲಾಗಿದೆ. 12 ಸಾವಿರ ಮಾಲೀಕರಿಗೆ ಬಿ ಖಾತೆ ವಿಲೆ ಮಾಡಲಾಗಿದೆ. ನಗರದ ಹೊಸ ಬಡಾವಣೆಗಳಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಕೆ ಬಾಕಿ ಇದೆ. 12 ಸಾವಿರ ದೀಪ ಖರೀದಿಸಬೇಕಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net