ಉಚ್ಛಾಟನೆ ಕ್ರಮ ಹಿಂಪಡೆದರೆ ಹೋರಾಟ

ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಶಫಿಕ್ ಪಂಡಿತ್, ಕಬೀರ್‌ಖಾನ್, ಜಾಕಿರ್ ಅಲಿ, ಮಹ್ಮದ್ ಫಾರೂಕ್ ಇತರರಿದ್ದರು.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಶಫಿಕ್ ಪಂಡಿತ್, ಕಬೀರ್‌ಖಾನ್, ಜಾಕಿರ್ ಅಲಿ, ಮಹ್ಮದ್ ಫಾರೂಕ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಕೆಶಿ, ಸುರ್ಜೆವಾಲಾರನ್ನು ಭೇಟಿ ಮಾಡದ ಜಬ್ಬಾರ್
  • ನಾನೂ ವಿಧಾನ ಪರಿಷತ್ ಸದಸ್ಯ ಸ್ಥಾನದ ಆಕಾಂಕ್ಷಿ
  • ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಹೇಳಿಕೆ
ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆ ಪ್ರಚಾರಕ್ಕೆ ಬಾರದ ಎಂಎಲ್ಸಿ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಉಚ್ಚಾಟನೆ ಮಾಡಿದ್ದು ಸ್ವಾಗತಾರ್ಹ. ಒತ್ತಡಕ್ಕೆ ಮಣಿದು ವರಿಷ್ಠರು ಈ ಕ್ರಮ ಹಿಂಪಡೆದಲ್ಲಿ ಅದನ್ನು ನಾವು ತಿರಸ್ಕರಿಸುವ ಜತೆಗೆ ಹೋರಾಟ ನಡೆಸಲಾಗುವುದು ಎಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕರೆದರೂ ಪ್ರಚಾರಕ್ಕೆ ಬಾರದ ಜಬ್ಬಾರ್, ಸೌಜನ್ಯಕ್ಕೂ ಭೇಟಿ ಮಾಡಲಿಲ್ಲ. ಸುರ್ಜೆವಾಲಾ ಅವರನ್ನೂ ಸಂಪರ್ಕಿಸಲಿಲ್ಲ. ಪಕ್ಷ, ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದಾಗ ಎಲ್ಲರೂ ಕೆಲಸ ಮಾಡಿದ್ದೇವೆ. ಪಕ್ಷದ ಕೆಲಸಕ್ಕೆ ಆಹ್ವಾನ ಬೇಕೆ? ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
1996ರಿಂದ ಮೂರು ಅವಧಿಗೆ ಜಬ್ಬಾರ್ ಅವರನ್ನೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮಾಡಲಾಗಿತ್ತು. ವಿರೋಧದ ನಡುವೆಯೂ ಅವರಿಗೇ ಮೂರು ಸಲ ಎಂಎಲ್ಸಿ ಸ್ಥಾನ ನೀಡಲಾಗಿತ್ತು. ಎಸ್ಸೆಸ್, ಎಸ್ಸೆಸ್ಸೆಂ ಅವರಿಂದಾಗಿಯೇ ಇದೆಲ್ಲ ಸಾಧ್ಯವಾಗಿರುವಾಗ ಸಹಕಾರ ನೀಡಲಿಲ್ಲ ಎಂಬುದರಲ್ಲಿ ಅರ್ಥವಿಲ್ಲ. ಅವರ ಬೆಂಬಲ ಇಲ್ಲದೆ ಜಿಲ್ಲೆಯಲ್ಲಿ ರಾಜಕಾರಣ ಮಾಡಲು ಸಾಧ್ಯವೆ? ಎಂದು ಕೇಳಿದರು.
ಜಬ್ಬಾರ್ ಹಿಂಬಾಲಕರಾದ ಸಿರಾಜ್ ಅಹ್ಮದ್, ಘನಿ ತಾಹೀರ್, ಎಂ.ಟಿ. ಸುಭಾಶ್ಚಂದ್ರ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದರೆ ಹೊರತಾಗಿ ಪಕ್ಷದ ಪರ ಕೆಲಸ ಮಾಡಲಿಲ್ಲ ಎಂದ ಅವರು ಚುನಾವಣಾ ಕಾರ್ಯದಲ್ಲಿ ತೊಡಗಿದ ಪಕ್ಷದ ಹಿರಿಯ ನಾಯಕರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.
ಚುನಾವಣೆ ಘೋಷಣೆಗೂ ಮುನ್ನ ಎಸ್‌ಐಆರ್ (ಮತದಾರರ ಪಟ್ಟಿ) ವಿರೋಧಿಸಲು ಪಕ್ಷಾತೀತವಾಗಿ ಅಲ್ಪಸಂಖ್ಯಾತರ ಸಭೆ ಕರೆದಾಗ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ವಿಚಾರವಾಗಿ ಅಬ್ದುಲ್ ಜಬ್ಬಾರ್ ಹಿಂಬಾಲಕರು ಚರ್ಚಿಸಿ ಗೊಂದಲದ ವಾತಾವರಣ ಮೂಡಿಸಿದರು. ಟಿಕೆಟ್ ವಿಚಾರವಾಗಿ ಜಿಲ್ಲಾ ಸಚಿವರು, ಸಂಸದರ ಬಳಿ ಜಬ್ಬಾರ್ ಮಾತನಾಡಲಿಲ್ಲ ಎಂದು ತಿಳಿಸಿದರು.
ಜಬ್ಬಾರ್ ಅವರು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ನಾನು 20 ವರ್ಷದಿಂದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಘಟಕಕ್ಕೆ ಅಧ್ಯಕ್ಷನಾಗಿದ್ದೇನೆ. ನಾನೂ ಕೂಡ ಎಂಎಲ್ಸಿ ಸ್ಥಾನದ ಆಕಾಂಕ್ಷಿ ಎಂದೂ ಹೇಳಿಕೊಂಡರು.
ಮುಖಂಡರಾದ ಶಫಿಕ್ ಪಂಡಿತ್, ಕಬೀರ್‌ಖಾನ್, ಜಾಕಿರ್ ಅಲಿ, ಮಹ್ಮದ್ ಫಾರೂಕ್, ಆರೀಫ್, ನಯಾಜ್ ಖಾನ್, ಇಸ್ಮಾಯಿಲ್ ಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net