ಆಗಸ್ಟ್‌ನಲ್ಲಿ 1 ಲಕ್ಷ ಸಾಧುಗಳ ಜತೆ ನಿರಶನ

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿದರು. ಮಣಿ ಸರ್ಕಾರ್, ಪಿ. ಸಾಗರ್,  ಶ್ರೀಧರ್, ಶ್ರೀಧರ್ ಕಮ್ಮಾಸ್, ರಾಜು ದೊಡ್ಮನಿ ಇದ್ದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿದರು. ಮಣಿ ಸರ್ಕಾರ್, ಪಿ. ಸಾಗರ್, ಶ್ರೀಧರ್, ಶ್ರೀಧರ್ ಕಮ್ಮಾಸ್, ರಾಜು ದೊಡ್ಮನಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಗೋಹತ್ಯೆ ನಿಷೇಧ ಕಾಯ್ದೆಗಾಗಿ ಆಗ್ರಹ
  • ಗೋವಿನ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಕೈಬಿಡಲಿ
  • ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾಹಿತಿ
ದಾವಣಗೆರೆ: ರಾಷ್ಟ್ರ ಮಟ್ಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಆಗಸ್ಟ್‌ನಲ್ಲಿ 1 ಲಕ್ಷ ಸಾಧು ಸಂತರೊಂದಿಗೆ ಆಮರಣಾಂತ ಉಪವಾಸ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು. ಗೋಮಾಂಸ ರಫ್ತು ನಿಲ್ಲಬೇಕು. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು ಹಾಗೂ ಗೋಮಾಳಗಳ ಅತಿಕ್ರಮಣ ತೆರವುಗೊಳಿಸಿ ಗೋವುಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ನಾಲ್ಕು ಬೇಡಿಕೆಗಳನ್ನು ಇರಿಸಿಕೊಂಡು ಈ ನಿರಶನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಗೋಮಾಂಸ ರಫ್ತಿನಿಂದಲೇ ಪ್ರತಿವರ್ಷ 50 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಒಂದೆಡೆ ಗೋಮಾತೆ ಎಂದು ಭಾಷಣ ಮಾಡುವ ಕೇಂದ್ರ ಸರ್ಕಾರ, ಇನ್ನೊಂದೆಡೆ ಗೋಮಾಂಸ ರಫ್ತಿಗೆ ಅವಕಾಶ ನೀಡುವುದು ಸರಿಯಲ್ಲ. ಗೋವಧೆ ತಡೆಯುವ ಸಂಬಂಧ ಈಗಾಗಲೆ ಕೇಂದ್ರ ಗೃಹ ಸಚಿವರು, ಪಶುಸಂಗೋಪನಾ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
ಕೃಷಿಗೆ ಬಳಸುವ ಪ್ರಾಣಿಗಳನ್ನು ರಕ್ಷಣೆ ಮಾಡುವಂತೆ ಸಂವಿಧಾನದ 48 ನೇ ವಿಧಿಯಲ್ಲಿ ತಿಳಿಸಲಾಗಿದೆ. ಹಾಗಿದ್ದೂ ಗೋವಧೆ ನಿರಂತರವಾಗಿ ನಡೆಯುತ್ತಿದೆ. ಮುಸ್ಲಿಮರ ಮತ ಬ್ಯಾಂಕ್ ಇರುವ ಕಡೆಗಳಲ್ಲಿ ಕಾಂಗ್ರಸ್ ಸರ್ಕಾರ, ಕಾನೂನು ಧಿಕ್ಕರಿಸಿ ಹಬ್ಬದ ಸಂದರ್ಭದಲ್ಲಿ ಗೋವಧೆ ಅವಕಾಶ ನೀಡುತ್ತಿದೆ. ಕಾಂಗ್ರೆಸಿಗರು ಹಸುವಿನ ಹಾಲಿನ ಬದಲಿಗೆ ಬೇರೆ ಏನನ್ನಾದರೂ ಕುಡಿಯುತ್ತಾರಾ? ಎಂದು ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ತ್ರಿಶೂಲ ದೀಕ್ಷೆ
ಲವ್‌ಜಿಹಾದ್ ಜಗತ್ತಿನಲ್ಲೇ ವೈರಸ್‌ನಂತೆ ಹರಡುತ್ತಿದೆ. ಇದರ ವಿರುದ್ಧ ಶ್ರೀರಾಮಸೇನೆ ಸಂಘಟನೆ ಹೋರಾಟ ಮುಂದುವರಿಸಿದೆ. ಇದರ ಸಂಬಂಧ ಸ್ಥಾಪಿಸಿದ್ದ ಸಹಾಯವಾಣಿಗೆ 2 ವರ್ಷದಲ್ಲಿ 8 ಸಾವಿರದಷ್ಟು ಕರೆ ಬಂದಿವೆ. ಇದರಡಿ ಸಿಲುಕಿದ್ದ 4800 ಜನರನ್ನು ಹೊರತರುವ ಕೆಲಸವನ್ನು ಸಂಘಟನೆ ಮಾಡಿದೆ ಎಂದರು.
ಹುಬ್ಬಳ್ಳಿಯಲ್ಲಿ ಜೂ. 14ರಂದು ರಾಜ್ಯದ 5 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾದ್ವಿ ರುತುಂಬರಾ, ಮಾಧವಿ ಲತಾ ಇತರೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಿಸುವ ಉದ್ದೇಶ ಹೊಂದಿರುವ ಲವ್‌ಜಿಹಾದ್ ತಡೆಯುವುದು ನಮ್ಮ ನಿರ್ಧಾರವಾಗಿದೆ. ಈ ದಿಸೆಯಲ್ಲಿ ಜಿಮ್, ಸ್ಪಾ, ಪಾರ್ಲರ್, ಪಾರ್ಕ್, ಹಾಸ್ಟೆಲ್, ಪಿಜಿ ಸೇರಿ ಮತ್ತಿತರೆಡೆಗಳಲ್ಲೂ ನಿಗಾ ಇರಿಸಿದ್ದೇವೆ. ಲವ್ ಜಿಹಾದ್ ತಡೆಯಲು ಸರ್ಕಾರ, ಪೊಲೀಸ್ ಇಲಾಖೆ ಸಹಕರಿಸುತ್ತಿಲ್ಲ. ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಎರಡು ವರ್ಷವಾದರೂ ಶಿಕ್ಷೆ ಪ್ರಕಟವಾಗಿಲ್ಲ ಎಂದೂ ವಿಷಾದಿಸಿದರು.
ರೈಲುಗಳಲ್ಲಿ ತಪಾಸಣೆ ಹೆಚ್ಚಿಸಿ
ಎಸ್‌ಐಆರ್ ನಂತರ ಪಶ್ಚಿಮಬಂಗಾಳದಲ್ಲಿ ಶೇ.80ರಷ್ಟು ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ಸುರಕ್ಷತೆ ಹಾಗೂ ಚುನಾವಣಾ ಗುರ್ತಿನ ಚೀಟಿ ಸಿಗುವ ಕಾರಣಕ್ಕೆ ದಕ್ಷಿಣ ಭಾರತದತ್ತ ಅಕ್ರಮ ಬಾಂಗ್ಲಾ ನಿವಾಸಿಗಳು ಬರುತ್ತಿದ್ದಾರೆ. ಅವರನ್ನು ಕೇಂದ್ರ ಸರ್ಕಾರ ತಡೆಯದೇ ಹೋದರೆ ದೇಶದ ಆಂತರಿಕ ಭದ್ರತೆಗೆ ಆಪತ್ತು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಂಗ್ಲಾ ನುಸುಳುಕೋರರು ಹೆಚ್ಚಿರುವ ಹಿನ್ನೆಲೆಯಲ್ಲಿ ನವದೆಹಲಿ ಇತರೆಡೆಗಳಿಂದ ಬರುವ ರೈಲುಗಳಲ್ಲಿ ತಪಾಸಣೆ ಹೆಚ್ಚಿಸಿ, ತನಿಖೆ ನಡೆಸಬೇಕು. ಈ ಸಂಬಂಧ ಈಗಾಗಲೆ ಸಂಘಟನೆಯಿಂದ ಹುಬ್ಬಳ್ಳಿ ವಲಯ ರೈಲ್ವೆ ಅಧಿಕಾರಿಗಳಿಗೆ ಮನವಿಪತ್ರ ನೀಡಲಾಗಿದೆ. ಬೆಂಗಳೂರಲ್ಲೂ ಮನವಿ ಮಾಡಲಾಗುವುದು ಎಂದು ಹೇಳಿದರು.
ಕೇಸರಿ ಶಾಲು ಹಂಚುತ್ತೇವೆ
ದೇಶದ ವಿದ್ಯಾರ್ಥಿಗಳಲ್ಲಿ ಭೇದ ಮೂಡದಂತೆ 40 ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರವೇ ಸಮಾನ ಸಮವಸ್ತ್ರ ಧರಿಸುವುದನ್ನು ಆದೇಶಿಸಿತ್ತು. ಅದೇ ಸರ್ಕಾರ ಅದನ್ನು ಉಲ್ಲಂಘಿಸಿ ಮರು ಅವಕಾಶ ನೀಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಎದುರಾಗಿದ್ದ ಮುಸ್ಲಿಮರ ಆಕ್ರೋಶ ತಣಿಸಲು ಸರ್ಕಾರ ಈ ಓಲೈಕೆ ಕ್ರಮ ಕೈಗೊಂಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ಆದೇಶದ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಪ್ರಕರಣ ನ್ಯಾಯಾಲಯ ಹಂತದಲ್ಲಿದೆ. ಹೀಗಿದ್ದಾಗ ಸರ್ಕಾರ ಹಿಜಾಬ್‌ಗೆ ಅವಕಾಶ ನೀಡಿದ್ದು ನ್ಯಾಯಾಂಗ ನಿಂದನೆ ಆಗಲಿದೆ ಎಂದರು.
ಹಿಜಾಬ್‌ಗೆ ಅವಕಾಶ ನೀಡಿದ್ದನ್ನು ರಾಜ್ಯ ಸರ್ಕಾರ ಹಿಂಪಡೆಯದಿದ್ದಲ್ಲಿ ಜೂ.1ರಂದು ಶಾಲಾ-ಕಾಲೇಜಗಳಿಗೆ ನಾವೂ ಸಹ ಕೇಸರಿ ಶಾಲುಗಳನ್ನು ವಿತರಿಸಲಿದ್ದೇವೆ. ಸರ್ಕಾರ ಈ ಸಂಘಷಕ್ಕೆ ಎಡೆಮಾಡಿಕೊಡಬಾರದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಸಂಘಟನಾ ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಉಸ್ತುವಾರಿ ಶ್ರೀಧರ್ ಕಮ್ಮಾಸ್, ನಗರದ ಉಪಾಧ್ಯಕ್ಷ ರಾಜು ದೊಡ್ಮನಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net