ಇಳಿ ವಯಸ್ಸಿನಲ್ಲೂ ಕೃಷಿ ಕಾಯಕ! Agriculture

ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಕರಿಬೇವು, ನಿಂಬು, ಪೇರಲ ಗಿಡಗಳು.Agriculture
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಕರಿಬೇವು, ನಿಂಬು, ಪೇರಲ ಗಿಡಗಳು.Agriculture
Published on

ಪ್ರಮುಖ ಮುಖ್ಯಾಂಶಗಳು

  • 3 ಎಕರೆಯಲ್ಲಿ ಸಾವಯವ ಕ್ರಾಂತಿ
  • ಒಂದೇ ಜಮೀನಿನಲ್ಲಿ ನೂರಾರು ಬೆಳೆ
  • ಕಂದನಕೋವಿ ಗ್ರಾಮದ ರೈತನ ಯಶೋಗಾಥೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ ಎಂದು ಯುವಜನತೆ ನಗರಗಳತ್ತ ಮುಖ ಮಾಡುತ್ತಿದ್ದರೆ, ಇಲ್ಲೊಬ್ಬ ನಿವೃತ್ತ ಸರ್ಕಾರಿ ನೌಕರ ಕೃಷಿಯಲ್ಲಿ ಮ್ಯಾಜಿಕ್ ಮಾಡಿದ್ದಾರೆ.
ಆನಗೋಡು ಹೋಬಳಿಯ ಕಂದನಕೋವಿ ಗ್ರಾಮದ ಕೆ.ಬಿ. ಮುದ್ದಪ್ಪ (73) ಅವರು ತಮ್ಮ 3 ಎಕರೆ 5 ಗುಂಟೆ ಜಮೀನಿನಲ್ಲಿ ನೂರಾರು ಬಗೆಯ ಬೆಳೆಗಳನ್ನು ಬೆಳೆದು, ಸಮಗ್ರ ನೀರು ನಿರ್ವಹಣೆ ಮತ್ತು ಸಾವಯವ ಪದ್ಧತಿಯ ಮೂಲಕ ಯಶಸ್ವಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ.
ಮುದ್ದಪ್ಪ ಅವರು ಕೇವಲ ಒಂದೇ ಬೆಳೆಗೆ ಸೀಮಿತವಾಗದೆ, ಅರಣ್ಯ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಸಮಗ್ರವಾಗಿ ಅಳವಡಿಸಿಕೊಂಡಿದ್ದಾರೆ. 400 ಅಡಕೆ ಗಿಡ, 130 ತೇಗ, 200 ಮಹಾಗನಿ, 200 ಗೊಬ್ಬರ ಗಿಡ, 130 ನಿಂಬೆ, 400 ನುಗ್ಗೆ, 105 ತೆಂಗು, 22 ಮಾವು, 1920 ಪೇರಲೆ, 700 ಶ್ರೀಗಂಧ, 500 ಪಪ್ಪಾಯ, 200 ರೇಷ್ಮೆ ಗಿಡ, 200 ಕೋಕೋ, 50 ಕರಿಬೇವು, 35 ಕಾಫಿ, 8 ಕಿತ್ತಲೆ, 5 ಬಟರ್ ಫ್ರೂಟ್, 150 ಸೀತಾಫಲ, ಜಾಯಿಕಾಯಿ, ಲವಂಗ, ದಾಲ್ಚಿನ್ನಿ, ಚಕ್ಕೆ, 200 ಡ್ರಾಗನ್ ಫ್ರೂಟ್, ಅರಿಶಿಣ, ಗೆಣಸು, 200 ಕಾಳು ಮೆಣಸು
ಸೇರಿ ವೈವಿಧ್ಯಮಯ ಗಿಡಗಳನ್ನು ಬೆಳೆದಿದ್ದಾರೆ.
ಕಳೆದ 20 ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸದೆ ಕೃಷಿ ಮಾಡುವ ಜತೆಗೆ 5 ಮಲೆನಾಡು ಗಿಡ್ಡ ತಳಿಯ ಹಸುಗಳನ್ನು ಸಾಕಿದ್ದು, ಅವುಗಳ ಗಂಜಲ ಮತ್ತು ಬೆಲ್ಲ ಬಳಸಿ ಸ್ವತಃ ಜೀವಾಮೃತ ತಯಾರಿಸುತ್ತಾರೆ. ಇದನ್ನು ಹನಿ ನೀರಾವರಿ ಮೂಲಕ ಗಿಡಗಳಿಗೆ ಪೂರೈಸುತ್ತಾರೆ. ಅಲ್ಲದೆ, ಎರೆ ಹುಳು ಗೊಬ್ಬರ ಮತ್ತು ಕುರಿ-ಕೋಳಿ ಗೊಬ್ಬರ ವನ್ನೇ ಪೋಷಕಾಂಶವಾಗಿ ನೀಡುತ್ತಿದ್ದಾರೆ.
ಅಲ್ಲದೇ ನೀರಿನ ಸದ್ಬಳಕೆಗಾಗಿ 60್ಡ100 ಅಡಿ ವಿಸ್ತೀರ್ಣದ ಬೃಹತ್ ಕೃಷಿ ಹೊಂಡ ನಿರ್ಮಿಸಿದ್ದು, ಇದರಲ್ಲಿ ಗೌರಿ, ಕಾಟ್ಲಾ ತಳಿಯ ಮೀನುಗಳನ್ನು ಸಾಕಿದ್ದಾರೆ. ತೋಟದಾದ್ಯಂತ 25 ಜೇನು ಪೆಟ್ಟಿಗೆಗಳನ್ನು ಇರಿಸುವ ಮೂಲಕ ಜೇನು ಕೃಷಿಯನ್ನೂ ಕೈಗೊಂಡಿದ್ದಾರೆ. ವರ್ಷಕ್ಕೆ ಕೇವಲ ಒಂದು ಬಾರಿ ಉಳುಮೆ ಮಾಡುವ ಮೂಲಕ ಭೂಮಿಯ
ಫಲವತ್ತತೆಯನ್ನು ಕಾಪಾಡಿಕೊಂಡಿದ್ದಾರೆ.
ಪ್ರಸ್ತುತ ತೆಂಗು, ಸೀತಾಫಲ, ನಿಂಬೆ ಮತ್ತು ಪೇರಲದಿಂದ ವಾರ್ಷಿಕ ಸುಮಾರು 2 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಂಧ, ತೇಗ ಮತ್ತು ಅಡಕೆ ಫಸಲು ಬರಲಿದ್ದು, ದೊಡ್ಡ ಮಟ್ಟದ ಆದಾಯದ ನಿರೀಕ್ಷೆಯಿದೆ ಎನ್ನುತ್ತಾರೆ ಮುದ್ದಪ್ಪ. ಇವರ ಸಾಧನೆಯನ್ನು ಗುರುತಿಸಿ ಕೃಷಿ ಇಲಾಖೆ ಯು ತಾಲೂಕು ಸಮಗ್ರ ಕೃಷಿ ಪ್ರಶಸ್ತಿ ಮತ್ತು ಜಿಲ್ಲಾ ಶ್ರೇಷ್ಠ ಕೃಷಿಕ
ಪ್ರಶಸ್ತಿ ನೀಡಿ ಗೌರವಿಸಿದೆ.

ಮುದ್ದಪ್ಪ ಅವರು ಕಳೆದ 20 ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸದೆ ಸಮಗ್ರ ಕೃಷಿ ಮಾಡುತ್ತಿರುವುದು ಶ್ಲಾಘನೀಯ. ಇವರ ತೋಟಕ್ಕೆ ನಮ್ಮ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇವರು ಮಾಡಿರುವ ಸಾಧನೆ ಇತರ ರೈತರಿಗೆ ಸ್ಫೂರ್ತಿ.

ರೈತರು ಕೀಟನಾಶಕ ಬಿಟ್ಟು ಸಾವಯವ ಪದ್ಧತಿಗೆ ಮರಳಬೇಕು. ಜೀವಾಮೃತ, ಎರೆಹುಳು ಗೊಬ್ಬರ ಬಳಸಿದರೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು. ಭೂಮಿಯೂ ಫಲವತ್ತಾಗಿ ಉಳಿಯುತ್ತದೆ.

.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net