ಎಚ್. ಬಸವಾಪುರದ ಕರಿಬಸಪ್ಪ ಬೆಳೆದಿರುವ ಸಿಹಿ ಕುಂಬಳ ಬೆಳೆಯನ್ನು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಬೀರಪ್ಪ ವೀಕ್ಷಿಸಿದರು. sowing
ಮಾಯಕೊಂಡ: ಉತ್ತಮ ಮಳೆಯಾಗಿ ಭೂಮಿ ಹದವಾಗುವವರೆಗೆ ರೈತರು ಬಿತ್ತನೆ ಮಾಡದಂತೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ರೈತರಿಗೆ ಸಲಹೆ ನೀಡಿದರು. sowing
ಮಾಯಕೊಂಡ ಹೋಬಳಿ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ, ಇತ್ತೀಚೆಗೆ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ, ಸೋಯಾಬಿನ್, ಸಿಹಿ ಕುಂಬಳ ಬಿತ್ತನೆ ಮಾಡಿರುವ ಜಮೀನುಗಳನ್ನು ಪರಿಶೀಲಿಸಿ ಮಾತನಾಡಿದರು.
ಈ ಬಾರಿ ಮುಂಗಾರು ದುರ್ಬಲವಾಗಿದ್ದು ನಿರೀಕ್ಷಿಸಿದ ಮಳೆಯಾಗಿಲ್ಲ. ರೈತರು ದುಬಾರಿ ಬೆಲೆಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಬಿತ್ತುವ ಬದಲು ಮಳೆ ಬರುವವರೆಗೆ ಕಾಯಬೇಕು ಎಂದರು.
ಮೆಕ್ಕೆಜೋಳದ ಬದಲಿಗೆ ಪರ್ಯಾಯ ಬೆಳೆಗಳಾದ ಸೋಯಾಬಿನ್, ತೊಗರಿ, ಅವರೆ ಹಾಗೂ ಸಿರಿಧಾನ್ಯಗಳನ್ನು ಬೆಳೆದರೆ ಕಡಿಮೆ ವೆಚ್ಚ, ಕಡಿಮೆ ತೇವಾಂಶ ಸಾಕು. ಉತ್ತಮ ಆದಾಯವೂ ಸಿಗುತ್ತದೆ. ರೈತರು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಪ್ರತಿ ವರ್ಷ 24-25 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ, ರಾಗಿ ಹಾಗೂ ಇತರೆ ಬೆಳೆಗಳು ಬಿತ್ತನೆಯಾಗುತ್ತಿದ್ದವು. ಆದರೆ, ಈ ಬಾರಿ ಮುಂಗಾರು ದುರ್ಬಲವಾಗಿರುವ ಕಾರಣ ಜೂನ್ ಎರಡನೇ ವಾರ ಕಳೆದರೂ ಕೇವಲ 1200 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.
ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಬೀರಪ್ಪ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ, ಮೆಕ್ಕೆಜೋಳ ಬಿತ್ತನೆ ಬೀಜಗಳು ಜಿಂಕ್ ಹಾಗೂ ವಿವಿಧ ಔಷಧಗಳು ಲಭ್ಯ ಇವೆ ಎಂದು ತಿಳಿಸಿದರು. ಎಚ್. ಬಸವಾಪುರ ಗ್ರಾಮದ ಪ್ರಗತಿಪರ ಕೃಷಿಕ ಕರಿಬಸಪ್ಪ ಅವರ ಜಮೀನಿನಲ್ಲಿ ಬೆಳೆದಿರುವ ಸಿಹಿ ಕುಂಬಳ ಬೆಳೆಯನ್ನು ಪರಿಶೀಲಿಸಿದರು.