ಜಗಳೂರು ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬುಧವಾರ ಗ್ರಾಮಸ್ಥರು ಪಟ್ಟಣದ ಬೆಸ್ಕಾಂ ವಿದ್ಯುತ್ ಪ್ರಸರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದರು. ರಂಗಸ್ವಾಮಿ, ಜಿ.ಬಿ. ಬಾಲರಾಜ್, ಬಸವರಾಜ್, ಈಶಣ್ಣ, ಕಲ್ಲೇಶಪ್ಪ, ಬಸವರಾಜಪ್ಪ ಇತರರಿದ್ದರು. Protest
ಜಗಳೂರು:ಜಮ್ಮಾಪುರ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ವಿಳಂಬ ಹಾಗೂ ಬೆಳೆ ಹಾನಿಗೆ ಕಾರಣವಾಗುವ ಕೃಷಿ ಪಂಪ್‌ಸೆಟ್ ಹಾಗೂ ಮನೆಗಳಿಗೆ ನಿರಂತರ ವಿದ್ಯುತ್ ಕಡಿತವನ್ನು ವಿರೋಧಿಸಿ ಬುಧವಾರ ನೂರಾರು ಗ್ರಾಮಸ್ಥರು ಪಟ್ಟಣದ ಬೆಸ್ಕಾಂ ವಿದ್ಯುತ್ ಪ್ರಸರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಮ್ಮಾಪುರ ಗ್ರಾಮದ ನೂರಾರು ರೈತರು ಬೆಳಗ್ಗೆ ವಿದ್ಯುತ್ ಪ್ರಸರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಜಮ್ಮಾಪುರ, ಮರೇನಹಳ್ಳಿ, ಬೊಮ್ಮಕ್ಕನಹಳ್ಳಿ, ತೋರಣಗಟ್ಟೆ, ಹೊನ್ನಮರಡಿ ವ್ಯಾಪ್ತಿಯ ಹಳ್ಳಿಗಳಿಗೆ ಬೆಸ್ಕಾಂ ಇಲಾಖೆಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ. ಪುಸ್ತಕದಲ್ಲಿ 4 ತಾಸು ಎಂದು ಬರೆದರೂ ರಾತ್ರಿ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಗೋಲ್‌ಮಾಲ್ ನಡೆಯುತ್ತಿದೆ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೇಸಿಗೆಯಲ್ಲಿ ಕನಿಷ್ಠ ಏಳು ತಾಸು ವಿದ್ಯುತ್ ಬೇಕಿದ್ದರೂ 3 ತಾಸು ಕೂಡ ನೀಡುತ್ತಿಲ್ಲ. ರೈತರು ಸಹನೆ ಕಳೆದುಕೊಂಡರೆ ಅಧಿಕಾರಿಗಳು, ಸರ್ಕಾರ ಯಾರೂ ಇರುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ರಂಗಸ್ವಾಮಿ ಮಾತನಾಡಿ, ಮಳೆಗಾಲದಲ್ಲಿ ವಿದ್ಯುತ್‌ಗೆ ಬೇಡಿಕೆ ಇರುವುದಿಲ್ಲ. ಆದರೆ ಬೇಸಿಗೆಯ ಪರಿಸ್ಥಿತಿಯೇ ಬೇರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕನಿಷ್ಠ 7 ತಾಸು ವಿದ್ಯುತ್ ನೀಡಬೇಕು. ಕೇವಲ ಒಂದೆರಡು ತಾಸು ವಿದ್ಯುತ್ ನೀಡಿದರೆ ಫಸಲಿಗೆ ಬಂದ ಬೆಳೆ ಉಳಿಸಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು. ಹೋರಾಟಗಾರ ಜಿ.ಬಿ. ಬಾಲರಾಜ್ ಮಾತನಾಡಿ, ವಿದ್ಯುತ್ ಪ್ರಸರಣಾ ಕೇಂದ್ರದ ಪುಸ್ತಕದಲ್ಲಿ ಏಳು ಗಂಟೆ ಪೂರೈಕೆ ಎಂದು ನಮೂದಾಗಿದೆ. ಗ್ರಾಮಗಳಲ್ಲಿ ಹಗಲು ರಾತ್ರಿ ಸೇರಿ 4 ತಾಸು ವಿದ್ಯುತ್ ಇರುವುದಿಲ್ಲ. ಆದೇಶದಂತೆ ಸಮರ್ಪಕವಾಗಿ ವಿದ್ಯುತ್ ನೀಡಿ ಇಲ್ಲವೇ ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡಿದರು.
ಗ್ರಾಮದಿಂದ ರೊಚ್ಚಿಗೆದ್ದು ಬಂದಿದ್ದ ರೈತರು ನೇರವಾಗಿ ವಿದ್ಯುತ್ ಪ್ರಸರಣಾ ಕೇಂದ್ರಕ್ಕೆ ತೆರಳಿ ಅಧಿಕಾರಿಗಳ ಮೇಲೆ ಮುಗಿ ಬಿದ್ದರು. ರೈತರಿಗೆ ಸುಳ್ಳು ಮಾಹಿತಿ ನೀಡಿ ಮೋಸ ಮಾಡುತ್ತೀರಾ. ರಾತ್ರಿ ಎಷ್ಟು ತಾಸು ವಿದ್ಯುತ್ ಪೂರೈಕೆ ಇದೆ. ಪುಸ್ತಕದಲ್ಲಿ ಎಷ್ಟಿದೆ ಮಾಹಿತಿ ಕೊಡಿ ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ಶುರುವಾಗಿ ಜಟಾಪಟಿಗೆ ಬಿದ್ದರು.