ಮಾಯಕೊಂಡ ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ಸಿಗದ ನೀರು

ಭದ್ರಾ 2ನೇ ಉಪನಾಲೆಗೆ ಹೂಳು
Bhadracanal
ಭದ್ರಾ 2ನೇ ಉಪನಾಲೆಯಲ್ಲಿ ಹೂಳು ತುಂಬಿರುವುದು.Bhadracanal
Published on: 

ಮಾಯಕೊಂಡ: ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಸಮೀಪದ ಸೋಮನಾಳ್ ಗೇಟ್‌ನಿಂದ ಆರಂಭವಾಗುವ ಭದ್ರಾ 2ನೇ ಉಪನಾಲೆಯುದ್ದಕ್ಕೂ ಹೂಳು ಹಾಗೂ ಗಿಡ ಗಂಟಿಗಳು ತುಂಬಿಕೊಂಡಿದ್ದು, ನೀರು ಮುಂದಕ್ಕೆ ಹರಿಯುತ್ತಿಲ್ಲ. ಜತೆಗೆ ಅಲ್ಲಲ್ಲಿ ನಾಲಾ ಏರಿಯು ಹಾಳಾಗಿದೆ.

ಭದ್ರಾ 2ನೇ ಉಪ ನಾಲೆಯನ್ನು ಸಂಪೂರ್ಣ ಆಧುನೀಕರಣಗೊಳಿಸುವುದರ ಜತೆಗೆ ಗೇಟ್‌ಗಳನ್ನು ದುರಸ್ತಿ ಮಾಡಿಸಬೇಕು. ಹಾಗಾದರೆ ಮಾತ್ರ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ನಾಲೆಯ ಆಧುನೀಕರಣ ಮಾಡಿಸಲು ಮುಂದಾಗಲಿ ಎನ್ನುವುದು ಅಚ್ಚುಕಟ್ಟಿನ ರೈತರ ಒತ್ತಾಸೆಯಾಗಿದೆ.

ಈ ಉಪನಾಲೆಯು ಬೆಳ್ಳಿಗನೂಡು, ಹಿರೇಕೊಗಲೂರು, ಗಿರಿಯಾಪುರ, ಈರಗನಹಳ್ಳಿ, ವೆಂಕಟೇಶ್ವರ ಕ್ಯಾಂಪ್, ಅಶೋಕನಗರ, ಶಾಗಲೆ, ಶಾಗಲೇ ಕ್ಯಾಂಪ್, ಹೂವಿನಮಡ, ಗೋಣಿವಾಡ, ಗೋಣಿವಾಡ ಕ್ಯಾಂಪ್ (ದಾಸಪ್ಪ ನಗರ), ಆಂಜನೇಯ ನಗರ, ವಾಲ್ಮೀಕಿ ನಗರ, ಕುಕ್ಕವಾಡ, ಕೊಳೇನಹಳ್ಳಿ ಹಾಗೂ ನಾಗರಸನಹಳ್ಳಿ ಸೇರಿ ಒಟ್ಟು 35 ಕಿ.ಮೀ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪಬೇಕಿದೆ. ನಾಲೆಯುದ್ದಕ್ಕೂ ಮಣ್ಣು, ಕಲ್ಲು, ಗಿಡಗಂಟೆಗಳು ತುಂಬಿದ್ದು, ಅಲ್ಲಲ್ಲಿ ಏರಿಗಳು ಹಾಳಾಗಿವೆ. ಜತೆಗೆ ಕೊನೆಯ ಭಾಗದ ಗ್ರಾಮದವರೆಗೂ ನಾಲೆ ಸಂಪೂರ್ನ ಕೊಚ್ಚೆಗುಂಡಿಯಾಗಿದೆ.

ನಾಲೆಯ ಕೆಲವೆಡೆ ಸೂಪರ್ ಪ್ಯಾಸೇಜ್ ನಿರ್ಮಾಣ ಮಾಡಲಾಗಿದ್ದರೂ ನೀರು, ಹಿರೇಕೋಗಲೂರು ಕೆರೆ ಸೇರಿ ಇತರೆಡೆ ಪೋಲಾಗಿ ಹರಿಯುತ್ತಿದೆ. ನಾಲೆಯ ಕೊನೆಯ ಭಾಗದಲ್ಲಿರುವ ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಕೆಳಭಾಗದ ರೈತರು ನೀರು ಪೋಲಾಗುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 20 ವರ್ಷಗಳಿಂದ ನಾಲೆಯ ಆಧುನೀಕರಣವಾಗದಿರುವುದು ಹಾಗೂ ಗೇಟ್‌ಗಳ ದುರಸ್ತಿ ಮಾಡದಿರುವುದು ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆಯ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿಯಾಗಿದೆ.

ನಾಲೆಯಲ್ಲಿ ಹೂಳು ತುಂಬಿ ಗಿಡಗಂಟೆ ಬೆಳೆದಿರುವುದು ನಿಜ. ಸಚಿವ ಕೆ.ಎಸ್. ಬಸವಂತಪ್ಪ, ಶಾಸಕರಾದ ಬಸವರಾಜ್ ಶಿವಗಂಗಾ ಹಾಗೂ ಸಮರ್ಥ ಶಾಮನೂರು ಅವರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಲೆಯ ಸ್ವಚ್ಛತೆ ಹಾಗೂ ಗೇಟ್‌ಗಳ ದುರಸ್ತಿಗೆ ಸುಮಾರು 3 ರಿಂದ 4 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
ಎಚ್.ರಮೇಶ್, ಎಇಇ ಭದ್ರಾ ನಾಲೆ 2ನೇ ಉಪ ವಿಭಾಗ, ತ್ಯಾವಣಿಗೆ
2008ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಅವಧಿಯಲ್ಲಿ ನಾಲೆಗೆ ಅನುದಾನ ನೀಡಿ ದುರಸ್ತಿಗೊಳಿಸಲಾಗಿತ್ತು. ಇತ್ತೀಚೆಗೆ ನಾಲೆಗೆ ಅಲ್ಲಲ್ಲಿ ನಿರ್ಮಿಸಿದ ಸೂಪರ್ ಪ್ಯಾಸೇಜ್‌ಗಳು ವೈಜ್ಞಾನಿಕವಾಗಿ ಯಶಸ್ವಿಯಾಗಿಲ್ಲ. ನಾಲೆ ತುಂಬ ಹೂಳು ತುಂಬಿದ್ದು, ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ನಾಲೆಯ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಬೇಕು.
ಬಿ.ಎಂ. ಸತೀಶ್ ಕೊಳೇನಹಳ್ಳಿ ಅಧ್ಯಕ್ಷ, ಜಿಲ್ಲಾ ರೈತ ಒಕ್ಕೂಟ, ದಾವಣಗೆರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net