ಖರೀದಿ ಕೇಂದ್ರ ಪ್ರಾರಂಭವಾಗದೆ ರೈತರ ಪರದಾಟ Shopping center

ಮಾಯಕೊಂಡ ಗ್ರಾಮದಲ್ಲಿನ ವಿಶಾಲವಾದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣ.Shopping center
ಮಾಯಕೊಂಡ ಗ್ರಾಮದಲ್ಲಿನ ವಿಶಾಲವಾದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣ.Shopping center
Published on

ಪ್ರಮುಖ ಮುಖ್ಯಾಂಶಗಳು

  • ಪಾಳು ಬಿದ್ದಿದೆ 21 ಎಕರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ
  • ಕಡಿಮೆ ದರಕ್ಕೆ ಹಳ್ಳಿ ವರ್ತಕರಿಗೆ ಮಾರಾಟ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಾಯಕೊಂಡ ಗ್ರಾಮದ 21 ಎಕರೆ ವಿಸ್ತೀರ್ಣದ ವಿಶಾಲವಾದ ಎಪಿಎಂಸಿ ಉಪ ಮಾರುಕಟ್ಟೆ ಇಂದು ಅಧಿಕಾರಿಗಳ ನಿರ್ಲಕ್ಷೃದಿಂದ ಬಿಕೋ ಎನ್ನುತ್ತಿದೆ. ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದರೂ, ಇಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗದ ಕಾರಣ ರೈತರು ಬೆಳೆದ ಬೆಳೆಯನ್ನು ಅಲ್ಪ ದರಕ್ಕೆ ಹಳ್ಳಿ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ.
ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಸುಸಜ್ಜಿತ ವಾದ ಗೋದಾಮುಗಳು, ವಾಣಿಜ್ಯ ಮಳಿಗೆಗಳು ಇವೆ. ಜಿಲ್ಲಾಧಿಕಾರಿ ಆದೇಶದಂತೆ ಮಾರುಕಟ್ಟೆ ಪ್ರಾಂಗಣವನ್ನು ಸ್ವಚ್ಛಗೊಳಿಸಲಾಗಿದೆಯೇ ಹೊರತು, ಖರೀದಿ ಪ್ರಕ್ರಿಯೆ ಮಾತ್ರ ಇನ್ನೂ ಚಾಲನೆ ಪಡೆದಿಲ್ಲ. ಇದರಿಂದಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಈ ಸುಸಜ್ಜಿತ ಕಟ್ಟಡಗಳು ಪಾಳು ಬಿದ್ದಂತಾಗಿವೆ.
ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ 2,400 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಮಾಯಕೊಂಡದಲ್ಲಿ ಕೇಂದ್ರವಿಲ್ಲದ ಕಾರಣ ರೈತರು 35 ಕಿಮೀ ದೂರದ ದಾವಣಗೆರೆ ಮಾರುಕಟ್ಟೆಗೆ ಹೋಗಬೇಕಿದೆ. ಅಲ್ಲಿ ಪ್ರತಿ ಕ್ವಿಂಟಲ್‌ಗೆ ಕೇವಲ 1,800 ರಿಂದ 2,000 ರೂ. ದರ ಸಿಗುತ್ತಿದೆ. ಇದರೊಂದಿಗೆ ಪ್ರತಿ ಕ್ವಿಂಟಲ್‌ಗೆ 250 ರಿಂದ 300 ರೂ. ಸಾರಿಗೆ ವೆಚ್ಚ ಭರಿಸಬೇಕಾಗಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೀಗಾಗಿ ಅನಿವಾರ್ಯವಾಗಿ ಹಳ್ಳಿ ವರ್ತಕರು ಕೇಳಿದ ದರಕ್ಕೆ ರೈತರು ತಮ್ಮ ಶ್ರಮದ ಫಲವನ್ನು ಧಾರೆ ಎರೆಯುತ್ತಿದ್ದಾರೆ.

ಶಾಸಕರ ಮೇಲೆ ನಿರೀಕ್ಷೆ

ಸ್ಥಳೀಯ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನ ಸೆಳೆಯಬೇಕು. ಮಾಯ ಕೊಂಡ, ಆನಗೋಡು, ಅಣಜಿ ಹೋಬಳಿಗಳ ಮೆಕ್ಕೆಜೋಳ ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.

ದಾವಣಗೆರೆ ತಾಲೂಕಿನ ಕುಕ್ಕುವಾಡದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸದ್ಯದಲ್ಲೇ ಪುನರಾರಂಭ ಗೊಳ್ಳಲಿದೆ. ಆದರೆ ಮಾಯಕೊಂಡದಲ್ಲಿ ಕೇಂದ್ರ ಆರಂಭಿಸಲು ಸದ್ಯಕ್ಕೆ ಸರ್ಕಾರದ ಆದೇಶವಿಲ್ಲ. ಮುಂದಿನ ದಿನಗಳಲ್ಲಿ ಆದೇಶ ಬಂದ ಕೂಡಲೇ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಮಾಯ ಕೊಂಡ ಎಪಿಎಂಸಿ ಪ್ರಾಂಗಣದಲ್ಲಿ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳಿಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಇಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಿತ್ತು. ನಂತರದ ದಿನಗಳಲ್ಲಿ ಇದು ಸ್ಥಗಿತಗೊಂಡಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಖರೀದಿ ಕೇಂದ್ರ ಆರಂಭಿಸಿದರೆ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net