ದಾವಣಗೆರೆಯ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಗುರುವಾರ ‘ಐಡಿಯಾ ಲ್ಯಾಬ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜೇಂದ್ರನ್ ದಂಡಪಾಣಿ, ಸಿ.ಎಸ್. ಮುರಳಿ, ಜಿ.ಎಂ. ಲಿಂಗರಾಜು, ಡಾ. ಎಂ. ವೇಣುಗೋಪಾಲ ರಾವ್, ಡಾ. ಸುನೀಲ್ ಕುಮಾರ್ ಬಿ.ಎಸ್, ಡಾ. ಶ್ರೀನಿವಾಸ್ ಸಿ.ವಿ., ಡಾ. ಜೆ. ಪ್ರವೀಣ್, ಕೀರ್ತಿ ಪ್ರಸಾದ್ ಇದ್ದರು.
ದಾವಣಗೆರೆ :ಸಾಧನೆಯ ಹಾದಿಯಲ್ಲಿ ವೈಫಲ್ಯಗಳು ಎದುರಾದಷ್ಟೂ ಯಶಸ್ಸಿಗೆ ಹತ್ತಿರವಾಗುತ್ತೇವೆ ಎಂದು ಜೊಹೊ ಕಾರ್ಪೊರೇಷನ್ ನಿರ್ದೇಶಕ ರಾಜೇಂದ್ರನ್ ದಂಡಪಾಣಿ ಹೇಳಿದರು.
ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಗುರುವಾರ ‘ಐಡಿಯಾ ಲ್ಯಾಬ್’ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಶಸ್ಸಿನ ಸೂತ್ರಗಳನ್ನು ತಿಳಿಸಿಕೊಟ್ಟರು.
ಇಲಾನ್ ಮಸ್ಕ್ ಸೇರಿ ವಿವಿಧ ಸಾಧಕರ ಉದಾಹರಣೆ ನೀಡಿ, ಅವರ ಯಶೋಗಾಥೆಯ ಹಿಂದಿರುವ ವೈಫಲ್ಯದ ಸರಣಿಯನ್ನು ಬಿಡಿಸಿಟ್ಟರು. ಅದರಿಂದ ಅಧೀರರಾಗದೆ ಯಶಸ್ಸಿನ ಮೆಟ್ಟಿಲು ಏರಿದ್ದನ್ನು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಆವಿಷ್ಕಾರ ಮಾಡಲು ಹೊರಟಾಗ ಹೆಚ್ಚು ಪರಿಕಲ್ಪನೆಗಳು ಹೊಳೆದಷ್ಟೂ ಒಳ್ಳೆಯದು. ಅದರಿಂದ ಉತ್ತಮ ಯೋಜನೆಯನ್ನು ರೂಪಿಸಬಹುದು. ಒಂದೊಂದು ತಪ್ಪಿನಿಂದಲೂ ಪಾಠ ಕಲಿಯಬಹುದು, ಕ್ರಮೇಣ ಸರಿಯಾದ ಮಾರ್ಗ ಗೋಚರಿಸುತ್ತದೆ ಎಂದರು.
ವಿದ್ಯಾರ್ಥಿಗಳು ಶೈಕ್ಷಣಿಕ ಅಂಕಗಳಿಗೆ, ಪದವಿಗೆ ಸೀಮಿತವಾಗದೆ ದೊಡ್ಡದಾಗಿ ಆಲೋಚಿಸಬೇಕು. ನಮ್ಮೊಳಗಿನ ಶಕ್ತಿಯನ್ನು ಗುರುತಿಸಬೇಕು. ಸುತ್ತಲಿನ ವಿದ್ಯಮಾನಗಳನ್ನು ಗಮನಿಸುತ್ತ, ಸಾಮಾಜಿಕವಾಗಿ ಬೆರೆಯುತ್ತ, ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಸಾಮರ್ಥ್ಯವೇನು ಎಂಬುದನ್ನು ಜಗತ್ತಿಗೆ ತೋರಿಸಬೇಕು ಎಂದು ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಎಫ್.ಎಸ್.ಐ.ಡಿ ಇನ್‌ಕ್ಯುಬೇಷನ್ ವಿಭಾಗದ ಸ್ಟೆಮ್ ಸೆಲ್ ಅಧ್ಯಕ್ಷ ಸಿ.ಎಸ್. ಮುರಳಿ ಮಾತನಾಡಿ, ಉದ್ಯಮಶೀಲತೆ ಕೇವಲ ಗುರಿಯಲ್ಲ, ಅದೊಂದು ಸುದೀರ್ಘ ಪಯಣ. ಇದು 100 ಮೀಟರ್ ಓಟದ ಸ್ಪರ್ಧೆಯಲ್ಲ, ಬದಲಿಗೆ ಇದೊಂದು ಮ್ಯಾರಾಥಾನ್ ಎಂದರು.
ಇತ್ತೀಚಿನ ದಿನಗಳಲ್ಲಿ ಯುವಕರು ಕೇವಲ ಯಶಸ್ಸಿನ ಕಥೆಗಳನ್ನು ನೋಡಿ ಪ್ರೇರಿತರಾಗುತ್ತಿದ್ದಾರೆ. ಉದ್ಯಮಕ್ಕೆ ಕಾಲಿಟ್ಟ ತಕ್ಷಣವೆ ಯಶಸ್ಸು ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಮೈಕ್ರೋಸಾಫ್ಟ್ೃ ಮತ್ತು ಗೂಗಲ್‌ನಂತಹ ಜಾಗತಿಕ ಸಂಸ್ಥೆಗಳೇ ಇಂದಿನ ಹಂತಕ್ಕೆ ತಲುಪಲು ಕನಿಷ್ಠ 15 ವರ್ಷಗಳ ಕಾಲ ಶ್ರಮಿಸಿವೆ ಎಂದು ನೆನಪಿಸಿದರು.
ನಿಮ್ಮ ಐಡಿಯಾ ಎಷ್ಟೆ ಅದ್ಭುತವಾಗಿದ್ದರೂ, ಅದಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರು ಹಣ ನೀಡಿ ಖರೀದಿಸಲು ಸಿದ್ಧರಿಲ್ಲದಿದ್ದರೆ ಆ ಉದ್ಯಮ ಯಶಸ್ವಿಯಾಗಲು ಸಾಧ್ಯವಿಲ್ಲ. ವಿಜ್ಞಾನದ ಸಂಶೋಧನೆಯನ್ನು ಪ್ರಯೋಗಾಲಯದಲ್ಲಿ ಮಾಡುವುದು ಸುಲಭ, ಆದರೆ ಅದನ್ನು ಮಾರುಕಟ್ಟೆಗೆ ತಕ್ಕ ಉತ್ಪನ್ನವನ್ನಾಗಿ ರೂಪಿಸುವುದು ದೊಡ್ಡ ಸವಾಲು ಎಂದರು.
ಸಹ-ಉಪ ಕುಲಪತಿ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್, ಐಡಿಯಾ ಲ್ಯಾಬ್ ನಿರ್ದೇಶಕ ಡಾ. ಶ್ರೀನಿವಾಸ್ ಸಿ.ವಿ., ಡಾ. ಜೆ. ಪ್ರವೀಣ್, ಕೀರ್ತಿ ಪ್ರಸಾದ್ ಇದ್ದರು.
ಆರ್ಥಿಕ, ತಂತ್ರಜ್ಞಾನ ಪ್ರಗತಿಗೆ ಪೂರಕ
ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವ ಐಡಿಯಾ ಲ್ಯಾಬ್ ಮುಂಬರುವ ದಿನಗಳಲ್ಲಿ ಆರ್ಥಿಕ ಮತ್ತು ತಂತ್ರಜ್ಞಾನ ಪ್ರಗತಿಗೆ ಕೊಡುಗೆ ನೀಡಲಿದೆ ಎಂದು ವಿವಿಯ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.
ಪ್ಸ್ತಾಾವಿಕವಾಗಿ ಮಾತನಾಡಿ, 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಒಂದು ವಾರದ ತರಬೇತಿ ನೀಡಲಾಗುವುದು. ಸ್ಟಾರ್ಟಪ್ ಆರಂಭಿಸಲು ಮಾರ್ಗದರ್ಶನ ನೀಡಲಾಗುವುದು. ಲ್ಯಾಬ್‌ನಲ್ಲಿ ಅಗತ್ಯ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಳ್ಳಬೇಕು. ಆವಿಷ್ಕಾರಗಳನ್ನು ಮಾಡುತ್ತ ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕುತೂಹಲವಿರುವ ವಿದ್ಯಾರ್ಥಿಗಳಿಗೆ ಈ ಲ್ಯಾಬ್ ಪ್ರಯೋಜನಕಾರಿಯಾಗಿದೆ. ಕೆಲವೊಮ್ಮೆ ವೈಫಲ್ಯ ಕಂಡರೂ ಮತ್ತೆ ಮತ್ತೆ ಪ್ರಯತ್ನಿಸಬೇಕು. ಈ ವ್ಯವಸ್ಥೆಯಿಂದ ವಿಶ್ವವಿದ್ಯಾಲಯ ಮತ್ತು ಉದ್ಯಮ ವಲಯದ ನಡುವೆ ಸಹಭಾಗಿತ್ವ ಏರ್ಪಡಲಿದೆ ಎಂದು ಅಭಿಪ್ರಾಯಪಟ್ಟರು.
"
ಸಂಸ್ಥೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಸುಸಜ್ಜಿತ ಐಡಿಯಾ ಲ್ಯಾಬ್ ನಿಗದಿತ ಸಮಯಕ್ಕಷ್ಟೆ ಸೀಮಿತವಾಗಿರದೆ, ವಿದ್ಯಾರ್ಥಿಗಳ ಸಂಶೋಧನೆ ಮತ್ತು ನೂತನ ಆವಿಷ್ಕಾರಗಳ ಸುಲಭ ಬಳಕೆಗಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೇವಲ ಪ್ರಯೋಗಾಲಯದ ಚೌಕಟ್ಟಿಗೆ ಸೀಮಿತವಾಗದೆ, ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ನಾವೀನ್ಯತೆಯನ್ನು ಪ್ರದರ್ಶಿಸಬೇಕು.
— ಜಿ.ಎಂ. ಲಿಂಗರಾಜು, ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿ