ದಾವಣಗೆರೆ:ಮಕ್ಕಳು ಗೆದ್ದಾಗ ಬೆನ್ನು ತಟ್ಟುವ ಪಾಲಕರು, ಅವರು ಸೋತಾಗ ದಂಡಿಸುವುದು ಸರಿಯಲ್ಲ. ಸೋಲು ಗೆಲುವಿನ ಸೋಪಾನ ಎಂಬ ಸಕಾರಾತ್ಮಕ ಮನೋಭಾವ ಬೆಳೆಸಬೇಕು ಎಂದು ಗಜೇಂದ್ರಗಡದ ಸಹ ಪ್ರಾಧ್ಯಾಪಕ ಕೆ.ಸಿದ್ದೇಶ್ ಸಲಹೆ ನೀಡಿದರು.
ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೋಮೇಶ್ವರೋತ್ಸವ ಸಮಾರಂಭದ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರೂ ಗೆದ್ದವರೇ ಎಂಬ ಆತ್ಮಸ್ಥೈರ್ಯ ತುಂಬಬೇಕಿದೆ. ತಪ್ಪು ಮಾಡಿದಾಗ ತಿದ್ದಿ, ಸರಿಯಾದ ಹಾದಿಯಲ್ಲಿ ನಡೆದಾಗ ಪ್ರೋತ್ಸಾಹಿಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಪಾಲಕರು ಮಕ್ಕಳನ್ನು ಅತಿ ರಕ್ಷಣಾತ್ಮಕವಾಗಿ ಬೆಳೆಸುತ್ತಿದ್ದಾರೆ. ಇದನ್ನು ಮನೋವಿಜ್ಞಾನದ ಭಾಷೆಯಲ್ಲಿ ‘ಹೆಲಿಕಾಪ್ಟರ್ ಪೇರೆಂಟಿಂಗ್’ ಎನ್ನಲಾಗುತ್ತದೆ. ಮಗು ಏನು ಮಾಡುತ್ತಿದೆ, ಏನು ಕಲಿಯುತ್ತಿದೆ ಎಂದು ಸದಾ ಹದ್ದಿನ ಕಣ್ಣಿಟ್ಟು ನಿಯಂತ್ರಿಸುವುದರಿಂದ ಮಗುವಿನ ಸ್ವಾಭಾವಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳ ಸಹಜ ಬೆಳವಣಿಗೆಗೂ ಮುಕ್ತ ಅವಕಾಶ ನೀಡಬೇಕು ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಗಮನ ನೀಡಬೇಕಿದೆ. ಪುಸ್ತಕಗಳನ್ನೇ ಓದಲು ಒತ್ತಡ ಹೇರಿದರೆ ಮಕ್ಕಳಲ್ಲಿ ಏಕತಾನತೆ ಕಾಡಬಹುದು. ಆ ಜಡತ್ವ ಮುರಿಯಲು ಹಾಡು, ನೃತ್ಯ, ಚಿತ್ರಕಲೆ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಬಾಲ್ಯದಲ್ಲೇ ವೇದಿಕೆ ಕಲ್ಪಿಸಿದರೆ ಸಭಾಕಂಪನ ಅಥವಾ ವೇದಿಕೆ ಭಯ ದೂರ ಮಾಡಬಹುದು ಎಂದು ತಿಳಿಸಿದರು.
ತಾಯಿಯ ಪ್ರೋತ್ಸಾಹದಿಂದ ಥಾಮಸ್ ಅಲ್ವಾ ಎಡಿಸನ್ ಶೇಷ್ಠ ವಿಜ್ಞಾನಿಯಾದರೆ, ಶಿವಾಜಿ ಮರಾಠ ಸಾಮ್ರಾಜ್ಯ ಬಲಪಡಿಸಲು ಕಾರಣವಾಯಿತು. ಎಪಿಜೆ ಅಬ್ದುಲ್ ಕಲಾಂ, ಅಂಬೇಡ್ಕರ್, ಸಚಿನ್ ತೆಂಡೂಲ್ಕರ್, ಶಾರುಖ್‌ಖಾನ್ ಯಶಸ್ಸಿನ ಹಿಂದೆ ಪಾಲಕರ ಬೆಂಬಲವಿದೆ. ಶಿಕ್ಷಣ ಶಾಲೆಗೆ ಸೀಮಿತವಾಗದೆ, ಸಮಗ್ರ ವ್ಯಕ್ತಿತ್ವ ನಿರ್ಮಾಣದ ಪ್ರಕ್ರಿಯೆಯಾಗಬೇಕು ಎಂದು ಆಶಿಸಿದರು.
ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ ಶಿಕ್ಷಕರಲ್ಲಿ ಬೋಧಿಸುವ ವಿಷಯದ ಮೇಲೆ ಆಸಕ್ತಿ ಇರಬೇಕು. ತನ್ನ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುವ ಮನೋಭಾವ ಹೊಂದಿರಬೇಕು ಎಂದೂ ಸಲಹೆ ನೀಡಿದರು.
ಸೋಮೇಶ್ವರ ವಿದ್ಯಾಲಯದ ಅಧ್ಯಕ್ಷ ಎಚ್.ಆರ್. ಅಶೋಕ ರೆಡ್ಡಿ, ಸೋಮೇಶ್ವರ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್, ಹವ್ಯಾಸಿ ಗಾಯಕಿ ಶ್ರೀದೇವಿ ಸಿದ್ದೇಶ್, ಪಾಲಕರಾದ ಡಿ.ಜಿ. ಉಮಾ, ಎಸ್. ಹನುಮಕ್ಕ, ಶೈಕ್ಷಣಿಕ ನಿರ್ದೇಶಕ ಪರಮೇಶ್ವರಪ್ಪ, ಪ್ರಾಚಾರ್ಯರಾದ ಪ್ರಭಾವತಿ, ವೀಣಾ, ಮುಖ್ಯ ಶಿಕ್ಷಕಿ ಗಾಯತ್ರಿ ಇದ್ದರು.
ಮಕ್ಕಳು ಪಾಲಕರ ನಡವಳಿಕೆ ನೋಡಿ ಕಲಿಯುತ್ತಾರೆ. ಹೀಗಾಗಿ ಮಕ್ಕಳೆದುರು ಆದರ್ಶಪ್ರಾಯರಾಗಿ ವರ್ತಸಬೇಕು. ಮಕ್ಕಳಿಗೆ ಓದಿನ ವಾತಾವರಣ ಮೂಡಿಸಬೇಕು. ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಯಾವುದೇ ಹುದ್ದೆಗೇರಿದರೂ ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸದಿರುವ ದೃಢ ನಿಶ್ಚಯ ಮಾಡಬೇಕು.