ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿಸಿ ಹೊನ್ನಾಳಿಯಲ್ಲಿ ರಾಜ್ಯ ರೈತಸಂಘ, ಹಸಿರುಸೇನೆಯಿಂದ ಪ್ರತಿಭಟನೆ ನಡೆಯಿತು. ಸೇನೆ ಅಧ್ಯಕ್ಷ ಕರಿಬಸಪ್ಪಗೌಡ ಮಾತನಾಡಿದರು. ಕೆ.ಸಿ. ಬಸಪ್ಪ, ಬೆಳಗುತ್ತಿ ಉಮೇಶ್, ಮಲ್ಲಿಕಾರ್ಜುನ್, ಜಗದೀಶ್, ವಿನಯ್, ಹಾಲೇಶ್, ಬಸಣ್ಣ ಇತರರಿದ್ದರು. farmer
ಹೊನ್ನಾಳಿ: ಸಣ್ಣ ರೈತರು ಮಾತ್ರ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಾರೆ, ಹೆಚ್ಚು ಜಮೀನು ಹೊಂದಿದವರು ಬರುವುದಿಲ್ಲ. ವಿದ್ಯುತ್ ನಿಗಮ ಖಾಸಗೀಕರಣಗೊಂಡಲ್ಲಿ ಸಣ್ಣ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕರಿಬಸಪ್ಪ ಗೌಡ ಹೇಳಿದರು. farmer
ತಾಲ್ಲೂಕು ಆಡಳಿತ ಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮಾತನಾಡಿದರು.
ವಿದ್ಯುತ್ ನಿಗಮ ಖಾಸಗೀಕರಣಗೊಳಿಸುವ ವಿಚಾರಗಳಿಂದ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಹೆಸ್ಕಾಂ ಸಂಸ್ಥೆಗಳ ಸಹಸ್ರಾರು ಸಿಬ್ಬಂದಿ ಬೀದಿಗೆ ಬರಲಿದ್ದಾರೆ. ಬಹುಮುಖ್ಯವಾಗಿ ಕೃಷಿ ಕೆಳಮಟ್ಟಕ್ಕೆ ಇಳಿಯಲಿದೆ ಎಂದು ಆಕ್ರೋಶ ಹೊರ ಹಾಕಿದರು.
ಮುಂದಿನ ದಿನಗಳಲ್ಲಿ ಜನನಾಯಕರನ್ನು ಕಾರ್ಪೋರೇಟ್ ಸಂಸ್ಥೆಗಳು ಆಳುತ್ತವೆ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಖಾಸಗೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ತಮ್ಮ ಹಿಡಿತಕ್ಕೆ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಬ್ಯಾಂಕುಗಳು, ವಿಮಾ ಕಂಪನಿಗಳು, ಕಬ್ಬಿಣದ ಕಾರ್ಖಾನೆಗಳು, ಬಿಎಸ್‌ಎನ್‌ಎಲ್ ಕಚೇರಿಗಳು ಈಗಾಗಲೇ ಖಾಸಗೀಕರಣದ ಅಂಚಿನಲ್ಲಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ವಿದ್ಯುತ್ ನಿಗಮ ಖಾಸಗೀಕರಣಕ್ಕೆ ಆಕ್ಷೇಪಣೆ ಸಲ್ಲಿಸು ಜೂ.23 ಕೊನೆಯ ದಿನ. ಕುಣಿಗಲ್‌ನ ಶಾಸಕ ರಂಗನಾಥ್ ಹೊರತು ಪಡಿಸಿ ಯಾವೊಬ್ಬ ಜನನಾಯಕನು ಆಕ್ಷೇಪ ಮಾಡುತ್ತಿಲ್ಲ. ಅವರಿಗೆಲ್ಲ ರೈತರ ಮತ ಬೇಕು, ರೈತರ ಹಿತವಲ್ಲ ಎಂದು ಆರೋಪಿಸಿದರು.
ನಾವು ನಮ್ಮ ಬದುಕಿಗೋಸ್ಕರ, ಮಕ್ಕಳ ಭವಿಷ್ಯಕ್ಕೋಸ್ಕರ ಹೋರಾಡೋಣ, ಇಲ್ಲವಾದರೆ ರೈತರನ್ನು ಬಡಿದು ತಿನ್ನುವ ಕಾಲ ದೂರವಿಲ್ಲ ಎಂದರು.
ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಶೀಲ್ದಾರ್ ಕವಿರಾಜ್ ಭೇಟಿ ನೀಡಿ ಮನವಿ ಸ್ವೀಕರಿಸಿದರು. ರೈತಸಂಘದ ತಾಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ, ನ್ಯಾಮತಿ ಘಟಕದ ಅಧ್ಯಕ್ಷ ಬೆಳಗುತ್ತಿ ಉಮೇಶ್, ಮಲ್ಲಿಕಾರ್ಜುನ್, ಜಗದೀಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕರವೇ ವಿನಯ್,
ಸಾಯಿ ಆಗ್ರೋ ಹಾಲೇಶ್, ಬಸಣ್ಣ ಹಾಗೂ ನೂರಾರು ರೈತರು ಭಾಗಿಯಾಗಿದ್ದರು.